1.5 ಲ.ರೂ.ಹಫ್ತಾಕ್ಕಾಗಿ ವ್ಯಕ್ತಿಯನ್ನು ಅಪಹರಿಸಿದ ದಿಲ್ಲಿ ಪೊಲೀಸರು: ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ

Update: 2022-10-16 17:52 GMT
ಸಾಂದರ್ಭಿಕ ಚಿತ್ರ
 

ಹೊಸದಿಲ್ಲಿ,ಅ.16: ಮಾರಾಟ ತೆರಿಗೆ ಏಜೆಂಟ್ ಓರ್ವನನ್ನು ಅಪಹರಿಸಿ 1.5 ಲ.ರೂ.ಗಳ ಹಫ್ತಾ ವಸೂಲು ಮಾಡಿದ್ದ ಆರೋಪದಲ್ಲಿ ಇಬ್ಬರು ದಿಲ್ಲಿ ಪೊಲೀಸರನ್ನು ಶನಿವಾರ ಬಂಧಿಸಲಾಗಿದೆ.ಶನಿವಾರ ದಿಲ್ಲಿಯ ಶಹಾದರಾ ಪ್ರದೇಶದಿಂದ ಸಂತ್ರಸ್ತ ವ್ಯಕ್ತಿಯನ್ನು ಅಪಹರಿಸಿದ್ದ ಮೂವರು ಪೊಲೀಸರು ತಮಗೆ ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿದ್ದರು ಮತ್ತು ಆತನನ್ನು ಥಳಿಸಿದ್ದರು ಎಂದು ಆರೋಪಿಸಲಾಗಿದೆ.ಹಣವನ್ನು ವಸೂಲು ಮಾಡಿದ ಬಳಿಕ ಪೊಲೀಸರು ವ್ಯಕ್ತಿಯನ್ನು ಬಿಡುಗಡೆಗೊಳಿಸಿದ್ದು,ಆತ ಜಿಟಿಬಿ ಎನ್‌ಕ್ಲೇವ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ತನಿಖೆಯ ಬಳಿಕ ಅಪಹರಣ ಮತ್ತು ಹಫ್ತಾವಸೂಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲಿಸರು ಸೀಮಾಪುರಿ ಠಾಣೆಗೆ ಸೇರಿದ ಸಂದೀಪ ಮತ್ತು ರಾಬಿನ್ ಎಂಬ ಇಬ್ಬರು ಪೊಲೀಸರನ್ನು ಮತ್ತು ಈ ಕೃತ್ಯಕ್ಕೆ ತನ್ನ ಕಾರನ್ನು ನೀಡಿದ್ದ ವಾಹಿದ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೋರ್ವ ಪೊಲೀಸ್ ಅಮಿತ್ ಹಾಗೂ ಗೌರವ್ ಅಲಿಯಾಸ ಅಣ್ಣಾ ಎಂಬ ವಂಚಕ ತಲೆಮರೆಸಿಕೊಂಡಿದ್ದಾರೆ.ಆದಾಯ ತೆರಿಗೆ ಕಚೇರಿಯಲ್ಲಿ ಸೇಲ್ಸ್ ಟ್ಯಾಕ್ಸ್ ಏಜೆಂಟ್ ಆಗಿರುವ ಸಂತ್ರಸ್ತ ವ್ಯಕ್ತಿ ಅ.11ರಂದು ರಾತ್ರಿ ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಆತನನ್ನು ಅಪಹರಿಸಲಾಗಿತ್ತು.ಕಾನ್‌ಸ್ಟೇಬಲ್ ಅಮಿತ್ ಇಡೀ ಷಡ್ಯಂತ್ರವನ್ನು ರೂಪಿಸಿದ್ದ ಎನ್ನುವದು ತನಿಖೆಯಿಂದ ಬೆಳಕಿಗೆ ಬಂದಿದೆ. ಓರ್ವ ಸಬ್-ಇನ್ಸ್‌ಪೆಕ್ಟರ್ ಕೂಡ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು,ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News