ದಾಖಲೆರಹಿತ ವಲಸಿಗರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಗೆ ಮುಂದಾದ ಮಣಿಪುರ
ಹೊಸದಿಲ್ಲಿ: ರಾಜ್ಯದಲ್ಲಿ ಜನಸಂಖ್ಯಾ ಆಯೋಗವನ್ನು ರಚಿಸಿದ ನಂತರ ದಾಖಲೆರಹಿತ ವಲಸಿಗರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಗಳನ್ನು ನಡೆಸುವುದಾಗಿ ಮಣಿಪುರ ಸರಕಾರ ರವಿವಾರ ಹೇಳಿದೆ ಎಂದು The Indian Express ವರದಿ ಮಾಡಿದೆ.
ರಾಜ್ಯ ಸರಕಾರವು ಮಣಿಪುರ ರಾಜ್ಯ ಜನಸಂಖ್ಯಾ ಆಯೋಗವನ್ನು ಸುಗ್ರೀವಾಜ್ಞೆಯ ಮೂಲಕ ಸ್ಥಾಪಿಸಲು ಯೋಜಿಸುತ್ತಿದೆ. ಸಂಸತ್ತು ಅಥವಾ ರಾಜ್ಯ ಅಸೆಂಬ್ಲಿ ಅಧಿವೇಶನದಲ್ಲಿ ಇಲ್ಲದಿರುವಾಗ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಅಂಗೀಕರಿಸಿದ ತಾತ್ಕಾಲಿಕ ಕಾನೂನು ಸುಗ್ರೀವಾಜ್ಞೆಯಾಗಿದೆ.
ಸಮೀಕ್ಷೆಯ ಸಮಯದಲ್ಲಿ ದಾಖಲೆರಹಿತ ವಲಸಿಗರಿಗೆ ಆಶ್ರಯ ನೀಡುತ್ತಿರುವವರ ವಿರುದ್ಧ ವಿದೇಶಿಯರ ಕಾಯಿದೆ ಮತ್ತು ಇನ್ನರ್ ಲೈನ್ ಪರ್ಮಿಟ್ ಸಿಸ್ಟಮ್ಸ್ ನ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರವಿವಾರ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಹೇಳಿದ್ದಾರೆ.
ಇನ್ನರ್ ಲೈನ್ ಪರ್ಮಿಟ್ ಎನ್ನುವುದು ರಾಜ್ಯದ ಹೊರಗಿನ ಜನರು ಮಣಿಪುರವನ್ನು ಪ್ರವೇಶಿಸುವಾಗ ತೋರಿಸಬೇಕಾದ ಪ್ರಯಾಣದ ದಾಖಲೆಯಾಗಿದೆ.
ಮಣಿಪುರದಲ್ಲಿ ದಾಖಲೆಗಳಿಲ್ಲದ ವಲಸಿಗರ ಒಳಹರಿವು ಆತಂಕಕಾರಿ ಪ್ರಮಾಣವನ್ನು ತಲುಪಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.