×
Ad

ತಪ್ಪು ಗುರುತಿನಿಂದ ಯುಎಇಯಲ್ಲಿ ಅಗ್ನಿಪರೀಕ್ಷೆ ಎದುರಿಸಿದ ಉದ್ಯಮಿ ಭಾರತಕ್ಕೆ ವಾಪಸ್

Update: 2022-10-17 15:06 IST

ಹೊಸದಿಲ್ಲಿ: ತಪ್ಪು ಗುರುತಿನಿಂದಾಗಿ ಯುಎಇಯಲ್ಲಿ ನಾಲ್ಕು ದಿನಗಳ ಕಾಲ ಅಗ್ನಿಪರೀಕ್ಷೆಯ ಎದುರಿಸಿದ ನಂತರ ನೋಯ್ಡಾದ ಉದ್ಯಮಿಯೊಬ್ಬರು ರವಿವಾರ ಭಾರತಕ್ಕೆ ಮರಳಿದ್ದಾರೆ. ಉದ್ಯಮಿ ಅಪರಾಧಿ ಅಲ್ಲ ಎಂದು ಅಧಿಕಾರಿಗಳಿಗೆ ಗೊತ್ತಾಗಿ ಅವರನ್ನು ಬಿಡುಗಡೆ ಮಾಡುವ ಮೊದಲು ಅವರನ್ನು ಹಲವಾರು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಪ್ರವೀಣ್ ಕುಮಾರ್ ಅವರು ತಮ್ಮ ಪತ್ನಿ ಉಷಾ ಅವರೊಂದಿಗೆ ತಾವು ಕೆಲಸ ಮಾಡುವ ಪ್ರಮುಖ ಸಿಮೆಂಟ್ ಕಂಪನಿಯ ಪ್ರಾಯೋಜಕತ್ವದಲ್ಲಿ ಸ್ವಿಟ್ಜರ್ಲೆಂಡ್‌ಗೆ  ಪ್ರವಾಸಕ್ಕೆ ತೆರಳಿದ್ದರು. ಅಕ್ಟೋಬರ್ 11 ರಂದು ಅವರು ಮುಂದಿನ ಪ್ರಯಾಣಕ್ಕಾಗಿ ಅಬುಧಾಬಿಗೆ ಬಂದಿಳಿದಾಗ, ಅಲ್ಲಿನ ಅಧಿಕಾರಿಗಳು ಅವರನ್ನು ವಾಂಟೆಡ್ ಕ್ರಿಮಿನಲ್ ಎಂದು ತಪ್ಪಾಗಿ ಗ್ರಹಿಸಿದರು.

“ನಾನು ವಿಮಾನದಿಂದ ಹೊರಬರುವ ಮುಂಚೆಯೇ, ನಾನು ಹೊರಗೆ ಬರುವಂತೆ ಘೋಷಣೆ ಮಾಡಲಾಗಿತ್ತು. ನಾನು ಹಾಗೆ ಮಾಡಿದಾಗ, ಯುಎಇ ಸಿಐಡಿಯ ಕೆಲವರು ಅಲ್ಲಿದ್ದರು. ಅವರು ನನ್ನನ್ನು ಪ್ರಶ್ನಿಸಲು ಆರಂಭಿಸಿದರು. ಬೇರೆಯವರ ಫೋಟೊ ತೋರಿಸಿ ಫೋಟೊದಲ್ಲಿರುವುದು  ನೀವೇನಾ ಎಂದು ಕೇಳಿದರು. ಇದು ನನ್ನ ಫೋಟೊ ಅಲ್ಲ ಎಂದು ನಾನು ಅವರಿಗೆ ಹೇಳಿದೆ. ಈ ವಿಚಾರಣೆ ಗಂಟೆಗಟ್ಟಲೆ ನಡೆಯಿತು’’ ಎಂದು ಪ್ರವೀಣ್ ಕುಮಾರ್ ಹೇಳಿದರು.

"ಅವರು ನನ್ನನ್ನು ಹೋಗಲು ಬಿಟ್ಟಿದ್ದರಿಂದ ಇದು ಅವರ ತಪ್ಪು ಎಂದು ನಾನು ಭಾವಿಸಿದ್ದೆ. ಆದರೆ ನಂತರ ಸಿಐಡಿ ಮತ್ತೆ ಬಂದು ನನ್ನನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತೆ ವಿಚಾರಣೆ ಆರಂಭಿಸಿದರು. ನನ್ನ ಹೆಸರು ಹಾಗೂ  ಜನ್ಮ ದಿನಾಂಕವನ್ನು ಹೊಂದಿರುವ ಬೇರೊಂದು ಅಪರಾಧಿ ನಾನೇ ಎಂದು ಅವರು ಭಾವಿಸಿದ್ದರು. ಆದರೆ ಎಲ್ಲಾ ಇತರ ವಿವರಗಳು ವಿಭಿನ್ನವಾಗಿವೆ ಮತ್ತು ನಾನು ಹಿಂದೆಂದೂ ಯುಎಇಗೆ ಹೋಗಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿದೆ''ಎಂದರು.

ಏತನ್ಮಧ್ಯೆ, ಕುಮಾರ್ ಅವರ ಪತ್ನಿ ಯುಎಇ ವೀಸಾ ಹೊಂದಿಲ್ಲದ ಕಾರಣ ಅವರನ್ನು ಭಾರತಕ್ಕೆ ಕಳುಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News