ಜಮ್ಮು-ಕಾಶ್ಮೀರ: ಗ್ರೆನೇಡ್ ದಾಳಿಗೆ ಇಬ್ಬರು ವಲಸೆ ಕಾರ್ಮಿಕರು ಬಲಿ
Update: 2022-10-18 09:57 IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರಾತ್ರೋರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಇದೇ ಜಿಲ್ಲೆಯಲ್ಲಿ ನಡೆದ ಉದ್ದೇಶಿತ ದಾಳಿಯಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಹತರಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.
ಪೊಲೀಸರ ಪ್ರಕಾರ ಸೋಮವಾರ ತಡರಾತ್ರಿ ಶೋಪಿಯಾನ್‌ನ ಹರ್ಮೆನ್ ಪ್ರದೇಶದಲ್ಲಿ ಭಯೋತ್ಪಾದಕರು ಸ್ಥಳೀಯರಲ್ಲದ ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ಎಸೆದಿದ್ದಾರೆ.
ಮೃತಪಟ್ಟ ಇಬ್ಬರು ಕಾರ್ಮಿಕರನ್ನು ಉತ್ತರ ಪ್ರದೇಶದ ಕನೌಜ್ ನಿವಾಸಿಗಳಾದ ರಾಮ್ ಸಾಗರ್ ಹಾಗೂ ಮೊನಿಶ್ ಕುಮಾರ್ ಎಂದು ಗುರುತಿಸಲಾಗಿದೆ.
ಗ್ರೆನೇಡ್ ಎಸೆದ ಕೆಲವೇ ಗಂಟೆಗಳ ನಂತರ ದಾಳಿಕೋರನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.