ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ ಭಗತ್ ಸಿಂಗ್ ಸಂಬಂಧಿ, ಕಾರಣವೇನು ಗೊತ್ತೆ?
ಹೋಶಿಯಾರ್‌ಪುರ: ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಸಚಿವ ಸತ್ಯೇಂದ್ರ ಜೈನ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರೊಂದಿಗೆ ಹೋಲಿಸಿದ್ದಕ್ಕಾಗಿ ಭಗತ್ ಸಿಂಗ್ ನಿಕಟ ಸಂಬಂಧಿ ಹರ್ಭಜನ್ ಸಿಂಗ್ ಧಾತ್ ಅವರು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ Arvind Kejriwal ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡರು. ನಿಮ್ಮ ಹೋರಾಟ ಏನೇ ಇರಲಿ, ರಾಜಕೀಯವಾಗಿ ಹೋರಾಡಿ ಎಂದು ಸಲಹೆ ನೀಡಿದರು.
ಕ್ರಿಮಿನಲ್ ಗಳನ್ನು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ "ಸಮೀಕರಣ" ಮಾಡುವುದರಿಂದ ದೂರವಿರುವಂತೆ ಕೇಜ್ರಿವಾಲ್ ರನ್ನು ಒತ್ತಾಯಿಸಿದ ಹರ್ಭಜನ್ ಸಿಂಗ್ ಪಂಜಾಬ್‌ನ "ದಯನೀಯ" ಸ್ಥಿತಿಯ ಮೇಲೆ "ಕೇಂದ್ರೀಕರಿಸಲು" ಸಲಹೆ ನೀಡಿದರು.
ಈ ವರ್ಷದ ಆರಂಭದಲ್ಲಿ ಆಮ್ ಆದ್ಮಿ ಪಕ್ಷವು ಭಾರಿ ಬಹುಮತದೊಂದಿಗೆ ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದಿತು.
ಅಬಕಾರಿ ನೀತಿ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸಿಸೋಡಿಯಾ ಹಾಗೂ ಜೈಲಿನಲ್ಲಿರುವ ಸಚಿವ ಜೈನ್ ಅವರನ್ನು ಕೇಜ್ರಿವಾಲ್ ಅವರು ರವಿವಾರ ಭಗತ್ ಸಿಂಗ್ ಅವರೊಂದಿಗೆ ಸಮೀಕರಿಸಿದ್ದರು.
"ಜೈಲು ಕಂಬಿ, ನೇಣು ಕುಣಿಕೆಗಳು ಭಗತ್ ಸಿಂಗ್ ಅವರ ದೃಢ ಸಂಕಲ್ಪವನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟ. ಮನೀಶ್ ಮತ್ತು ಸತ್ಯೇಂದ್ರ ಇಂದಿನ ಭಗತ್ ಸಿಂಗ್. 75 ವರ್ಷಗಳ ನಂತರ ಬಡವರಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯಕ್ಕಾಗಿ ಭರವಸೆ ಮೂಡಿಸಿದ ಶಿಕ್ಷಣ ಮಂತ್ರಿ ದೇಶಕ್ಕೆ ಸಿಕ್ಕಿತು’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಎಎನ್‌ಐ ಜೊತೆ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸಂಬಂಧಿ ಹರ್ಭಜನ್ ಸಿಂಗ್ ದಿಲ್ಲಿ ಮುಖ್ಯಮಂತ್ರಿಯನ್ನು ದೂಷಿಸಿದರು. "ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಕ್ರಿಮಿನಲ್ ಗಳನ್ನು ಹುತಾತ್ಮರಿಗೆ ಹೋಲಿಸುವುದೇಕೆ? ಅದರಿಂದ ಅವರಿಗೆ ಯಾವ ರಾಜಕೀಯ ಮೈಲೇಜ್ ಬೇಕಿತ್ತು? ನಿಮ್ಮ ಹೋರಾಟ ಏನೇ ಇರಲಿ, ರಾಜಕೀಯವಾಗಿ ಹೋರಾಡಿ. ಕ್ರಿಮಿನಲ್ ಗಳನ್ನು ಹುತಾತ್ಮರಿಗೆ ಸಮೀಕರಿಸಬೇಡಿ. ಇದು ಭಗತ್ ಸಿಂಗ್‌ಗೆ ಮಾತ್ರವಲ್ಲ, ಇತರ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಹೋಲಿಸಬೇಡಿ’’ ಎಂದು ಹರ್ಭಜನ್ ಸಿಂಗ್ ಧಾತ್ ಹೇಳಿದರು.