ಸ್ವಾಧೀನಕ್ಕೆ ಪಡೆದ ಉಕ್ರೇನ್‍ನ ಪ್ರದೇಶಗಳಿಗೆ ಪರಮಾಣು ಬಲದ ರಕ್ಷಣೆ: ರಶ್ಯ ಘೋಷಣೆ

Update: 2022-10-18 15:44 GMT

ಮಾಸ್ಕೋ, ಅ.18: ಉಕ್ರೇನ್‍ನಿಂದ ವಶಪಡಿಸಿಕೊಂಡು ಕಳೆದ ತಿಂಗಳು ಅಧಿಕೃತವಾಗಿ ಸ್ವಾಧೀನಕ್ಕೆ ಪಡೆದಿರುವ 4 ಪ್ರಾಂತಗಳು ತನ್ನ ಪರಮಾಣು ಶಸ್ತ್ರಾಸ್ತ್ರಗಳ(Nuclear weapons) ರಕ್ಷಣೆಯಲ್ಲಿವೆ ಎಂದು ರಶ್ಯ ಮಂಗಳವಾರ ಹೇಳಿದೆ.

ನೇಟೊ ಹಾಗೂ ರಶ್ಯ(NATO and Russia)ಗಳು ತಮ್ಮ ಪರಮಾಣು ಬತ್ತಳಿಕೆಯ ಅಸ್ತ್ರಗಳ ಸನ್ನದ್ಧತೆಯನ್ನು ಪರೀಕ್ಷೆ ಮಾಡಲು ಸೇನಾ ಸಮರಾಭ್ಯಾಸ ನಡೆಸಿವೆ ಎಂಬ ವರದಿಯ ಬೆನ್ನಲ್ಲೇ ರಶ್ಯದ ಈ ಹೇಳಿಕೆ ಹೊರಬಿದ್ದಿದೆ. ಈ ಎಲ್ಲಾ ಪ್ರದೇಶಗಳೂ ರಶ್ಯದ ಅವಿಭಾಜ್ಯ ಪ್ರದೇಶಗಳಾಗಿವೆ ಮತ್ತು ಅವೆಲ್ಲವನ್ನೂ ರಕ್ಷಿಸಲಾಗಿದೆ. ರಶ್ಯದ ಇತರ ಪ್ರದೇಶಗಳಂತೆಯೇ ಈ ನಾಲ್ಕೂ ಪ್ರಾಂತಗಳಿಗೆ ಪರಮಾಣು ಭದ್ರತೆಯನ್ನು ಒದಗಿಸಲಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ನೇಟೊ ಈ ವಾರ ಪರಮಾಣು ಸನ್ನದ್ಧತೆಯ ಕವಾಯತು ನಡೆಸಿದ್ದು, ರಶ್ಯ ಕೂಡಾ ಇಂತಹ ಸಮರಾಭ್ಯಾಸ ನಡೆಸುವ ನಿರೀಕ್ಷೆಯಿದೆ ಎಂದು ನೇಟೊ ವಕ್ತಾರರು ಹೇಳಿದ್ದರು. ಈ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿರುವ ಪೆಸ್ಕೋವ್(Peskov), ಸಮರಾಭ್ಯಾಸಗಳ ಬಗ್ಗೆ ತಿಳಿಸಲು ಸ್ಥಾಪಿತ ಅಧಿಸೂಚನೆಯ ವ್ಯವಸ್ಥೆಯಿದೆ ಮತ್ತು ಇದನ್ನು ರಕ್ಷಣಾ ಸಚಿವಾಲಯದ ಮೂಲಗಳ ಮೂಲಕ ನಡೆಸಲಾಗುತ್ತದೆ ಎಂದಿದ್ದಾರೆ. ಉಕ್ರೇನ್‍ನಿಂದ ವಶಕ್ಕೆ ಪಡೆದಿರುವ ನಾಲ್ಕು ಪ್ರಾಂತಗಳು ಎಂದೆಂದಿಗೂ ರಶ್ಯದ ಭಾಗವಾಗಿ ಇರಲಿದೆ ಎಂದು ಪುಟಿನ್ ಕಳೆದ ವಾರ ಪ್ರತಿಪಾದಿಸಿದ್ದರು. ಆದರೆ ಈ ಪ್ರಾಂತಗಳ ಗಡಿಯನ್ನು ಇನ್ನೂ ಸ್ಪಷ್ಟವಾಗಿ ಗುರುತಿಸದ ಕಾರಣ ರಶ್ಯ ಇವುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿಲ್ಲ. ಇವುಗಳನ್ನು ರಶ್ಯದ ಕಾನೂನು, ಆರ್ಥಿಕ ಮತ್ತು ಭದ್ರತಾ ವ್ಯವಸ್ಥೆಯೊಳಗೆ ಸಂಯೋಜಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಪೆಸ್ಕೋವ್ ಹೇಳಿದ್ದಾರೆ.

ರಶ್ಯದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳಲು ಅಗತ್ಯಬಿದ್ದರೆ ಪರಮಾಣು ಅಸ್ತ್ರ ಬಳಸಲೂ ಹಿಂಜರಿಯುವುದಿಲ್ಲ ಎಂದು ಕಳೆದ ತಿಂಗಳು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದರು. ಪುಟಿನ್ ಬೆದರಿಕೆ ಜಗತ್ತನ್ನು ವಿಪತ್ತಿನ ಅಂಚಿಗೆ ತಂದಿದ್ದು , ಪರಮಾಣು ಯುದ್ಧ ಸನ್ನಿಹಿತವಾಗಿದೆ ಎಂಬ ಭೀತಿ ಹಲವರಲ್ಲಿ ಮೂಡಿದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News