ಸರಕಾರದ ವಿರುದ್ಧ ಟ್ವೀಟ್: ಅಮೆರಿಕ ನಾಗರಿಕನಿಗೆ 16 ವರ್ಷದ ಜೈಲು ಶಿಕ್ಷೆ ವಿಧಿಸಿದ ಸೌದಿ ನ್ಯಾಯಾಲಯ

Update: 2022-10-19 03:13 GMT

ವಾಷಿಂಗ್ಟನ್: ಸೌದಿ ಅರೇಬಿಯಾ ಸರಕಾರವನ್ನು ಟೀಕಿಸಿ ಟ್ವೀಟ್ ಮಾಡಿದ ಆರೋಪದಲ್ಲಿ ಅಮೆರಿಕದ ಪ್ರಜೆಯೊಬ್ಬನಿಗೆ ಸೌದಿ ನ್ಯಾಯಾಲಯ ಹದಿನಾರು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಬಗ್ಗೆ ಆ ದೇಶದ ಜತೆ ಚರ್ಚಿಸಲಾಗುತ್ತದೆ ಎಂದು ಅಮೆರಿಕ ಪ್ರಕಟಿಸಿದೆ.

ಇದು ಐತಿಹಾಸಿಕ ಮಿತ್ರರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ndtv.com ವರದಿ ಮಾಡಿದೆ. 

ಸೌದಿ ಅರೇಬಿಯಾ ಮೂಲದ ಅಮೆರಿಕ ಪ್ರಜೆ ಸಾದ್ ಇಬ್ರಾಹಿಂ ಅಲ್ಮದಿ (Saad Ibrahim Almadi) ಎಂಬಾತನ ಬಂಧನವನ್ನು ರಕ್ಷಣಾ ಇಲಾಖೆ ದೃಢಪಡಿಸಿದೆ.

ಕಳೆದ ಡಿಸೆಂಬರ್‌ ನಿಂದ ಈ ಪ್ರಕರಣವನ್ನು  ಹಿಂಬಾಲಿಸಲಾಗುತ್ತಿದ್ದು, ಸೋಮವಾರ ಕೂಡಾ ಚರ್ಚಿಸಲಾಗಿದೆ ಎಂದು ಹೇಳಿದೆ. ಇಬ್ರಾಹಿಂ ಅಲ್ಮದಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಅವರ ಮಗ ಇಬ್ರಾಹಿಂ ಕೂಡಾ ದೃಢಪಡಿಸಿದ್ದಾರೆ.

"ಈ ಪ್ರಕರಣದ ಬಗ್ಗೆ ರಿಯಾದ್ ಹಾಗೂ ವಾಷಿಂಗ್ಟನ್ ಕಚೇರಿಗಳ ಮೂಲಕ ಸೌದಿ ಸರ್ಕಾರದ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಿರಂತರವಾಗಿ ಚರ್ಚಿಸಲಾಗುತ್ತಿದ್ದು, ತೀವ್ರ ಆತಂಕವನ್ನೂ ವ್ಯಕ್ತಪಡಿಸಲಾಗಿದೆ" ಎಂದು ಇಲಾಖೆ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಂದೂ ಅಪರಾಧೀಕರಣಗೊಳಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಫ್ಲೋರಿಡಾ ನಿವಾಸಿಯಾಗಿರುವ ಅಲ್ಮದಿ ಕಳೆದ ನವೆಂಬರ್ ನಲ್ಲಿ ಕುಟುಂಬದವರನ್ನು ಭೇಟಿ ಮಾಡಲು ತೆರಳಿದ್ದಾಗ, ಏಳು ವರ್ಷಗಳಲ್ಲಿ ಮಾಡಿದ ಹದಿನಾಲ್ಕು ಟ್ವೀಟ್‍ಗಳಿಗಾಗಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News