×
Ad

ಕೋಟಿ ಕಂಠ ಗಾಯನ: ಕುಂದಾಪುರದಲ್ಲಿ ಪೂರ್ವಭಾವಿ ಸಭೆ

Update: 2022-10-19 19:03 IST

ಕುಂದಾಪುರ, ಅ.19: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅ.28 ರಂದು ರಾಜ್ಯ ಸೇರಿದಂತೆ ವಿಶ್ವದ ಇತರೆ ಭಾಗದಲ್ಲಿರುವ ಕನ್ನಡಿಗರಿಂದ ಕನ್ನಡದ ಹಿರಿಮೆ ಸಾರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ’ಕೋಟಿ ಕಂಠ ಗಾಯನ’ ನಡೆಸಲು ಎಲ್ಲಾ ಅಗತ್ಯ ಸಿದ್ದತೆ ನಡೆಸಲಾಗುತ್ತಿದ್ದು ಕುಂದಾಪುರ ದಲ್ಲಿಯೂ ಮಾದರಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ತಿಳಿಸಿದ್ದಾರೆ.

ಕುಂದಾಪುರ ಮಿನಿವಿಧಾನಸೌಧದಲ್ಲಿ ಮಂಗಳವಾರ ವಿವಿಧ ಇಲಾಖಾ ಧಿಕಾರಿಗಳು, ಸಂಘಸಂಸ್ಥೆಗಳ ಉಪಸ್ಥಿತಿಯಲ್ಲಿ ನಡೆದ ’ಕೋಟಿ ಕಂಠ ಗಾಯನ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಅ.28ರಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಮೊದಲಿಗೆ ನಾಡ ಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲಾಗುವುದು. ಈ ಹಾಡುಗಳನ್ನು ಹಾಡಲು ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು.

ತಹಶಿಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ನಮ್ಮ ಜಿಲ್ಲೆಯೊಂದರಲ್ಲೇ 5 ಲಕ್ಷ ಜನ ಸೇರಿಸಿ ಗಾಯನ ಕಾರ್ಯಕ್ರಮ ನಡೆಸಬೇಕೆಂದು ಮಾರ್ಗದರ್ಶನ ನೀಡಲಾಗಿದೆ. ಒಂದು ಪ್ರದೇಶದಲ್ಲಿ ಕನಿಷ್ಠ 100 ಮಂದಿ ಸೇರಿ ಹಾಡುಗಳನ್ನು ಹಾಡಬೇಕು. ಜಿಲ್ಲೆಯ ಸಹಕಾರಿ ಸಂಘಗಳು ಮತ್ತು ಅಲ್ಲಿನ ಸಿಬ್ಬಂದಿ, ಕಾರ್ಖಾನೆಗಳ ಸಿಬ್ಬಂದಿ, ಎಲ್ಲಾ ಗ್ರಾಪಂಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ಎಲ್ಲಾ ಸಿಬ್ಬಂದಿ, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಗಾಯಕ ಡಾ.ಗಣೇಶ್ ಗಂಗೊಳ್ಳಿ ಅಭಿಪ್ರಾಯ ಹಂಚಿಕೊಂಡರು. ಕಲಾಕ್ಷೇತ್ರ ಕುಂದಾಪುರದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಕುಂದಾಪುರದ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮ ಆಗಲಿದೆ ಎಂದರು. ಈ ಬಗ್ಗೆ ಇನ್ನೊಂದು ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲು ತಹಶಿಲ್ದಾರ್ ಅವರಿಗೆ ಎಸಿ ಸೂಚನೆ ನೀಡಿದರು.

ಸಭೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿಶ್ರೀಕಾಂತ್ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News