ಮಲ್ಪೆ: ಮಕ್ಕಳ ಕ್ರಿಯಾತ್ಮಕ ದಸರಾ ರಜಾಮಜಾ ಶಿಬಿರ
ಉಡುಪಿ, ಅ.19: ಜಾಗತೀಕರಣದಿಂದಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದೆ. ಬಹುಕುಟುಂಬದಲ್ಲಿದ್ದ ಅನೇಕ ಪದ್ಧತಿ ರೀತಿನೀತಿಗಳು ದೂರವಾಗಿ ಅಜ್ಜಅಜ್ಜಿಯರ ಪ್ರೀತಿ ಮಮತೆ ಮಾರ್ಗದರ್ಶನ ಮಕ್ಕಳಿಗೆ ಮರೀಚಿಕೆಯಾಗಿದೆ. ಆದುದರಿಂದ ವಿದ್ಯಾರ್ಥಿಗಳು ಶಾಲಾ ರಜಾದಿನಗಳಲ್ಲಿ ಮನೆಯಲ್ಲಿದ್ದು ಟಿವಿ ನೋಡುತ್ತ ಕಾಲಕಳೆಯಬೇಕಾಗಿದೆ. ಇದನ್ನು ದೂರ ಮಾಡಲು ಶಿಬಿರಗಳು ಅಗತ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ದೇವ ಆನಂದ್ ತಿಳಿಸಿದ್ದಾರೆ.
ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ರೋಟರಿ ಉಡುಪಿ ಮಿಡ್‌ಟೌನ್, ಮಲ್ಪೆ ಗಾಂಧಿ ಶತಾಬ್ಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಕ್ಕಳ ಕ್ರಿಯಾತ್ಮಕ ದಸರಾ ರಜಾಮಜಾ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಸಂತೋಷ್ ಕುಮಾರ್ ಫೆರ್ನಾಂಡಿಸ್ ಹಾಗೂ ಅಶೋಕ್ ಕೋಟ್ಯಾನ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಧ್ಯಾ ವಹಿಸಿದ್ದರು. ರಾಮದೇವ ಕಾರಂತ ಐರೋಡಿ, ಬಾಲಕೃಷ್ಣ ಮೆಂಡನ್ ಉಪಸ್ಥಿತರಿದ್ದರು. ವಿದ್ಯಾ ಮೋಹನ್ ಬೆಳ್ಮಣ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕ ಶಂಕರ್ ಸ್ವಾಗತಿಸಿದರು. ಶಿಬಿರ ನಿರ್ದೇಶಕ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಶಾ ಪೇತ್ರಿ ವಂದಿಸಿದರು. ಸುಮಾರು ೫೫ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.