×
Ad

"ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಜಾಗತಿಕ ಮಾನವ ಹಕ್ಕುಗಳನ್ನು ರೂಪಿಸುವ ಜವಾಬ್ದಾರಿ ಭಾರತದ ಮೇಲಿದೆ"

Update: 2022-10-19 19:56 IST

ಮುಂಬೈ,ಅ.19: ಸ್ವದೇಶದಲ್ಲಿ ಎಲ್ಲರ ಒಳಗೊಳ್ಳುವಿಕೆ ಮತ್ತು ಮಾನವ ಹಕ್ಕುಗಳ ಗೌರವಕ್ಕೆ ಬಲವಾದ ಬದ್ಧತೆ ತೋರುವುರಿಂದ ಮಾತ್ರ ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಯು ಅಧಿಕಾರ ಮತ್ತು ವಿಶ್ವಾಸಾರ್ಹತೆಯನ್ನು ಪಡೆಯಲು ಸಾಧ್ಯ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್(Antonio Guterres) ಅವರು ಸೋಮವಾರ ಇಲ್ಲಿ ಹೇಳಿದರು.

ಐಐಟಿ ಬಾಂಬೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಾನವ ಹಕ್ಕುಗಳ ಮಂಡಳಿಯ ಚುನಾಯಿತ ಸದಸ್ಯನಾಗಿ ಭಾರತವು ಜಾಗತಿಕ ಮಾನವ ಹಕ್ಕುಗಳನ್ನು ರೂಪಿಸುವ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಸೇರಿದಂತೆ ಎಲ್ಲ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು.


ಬಹುತ್ವದ ಭಾರತದ ಮಾದರಿಯು ಸರಳ,ಆದರೆ ಆಳವಾದ ತಿಳುವಳಿಕೆಯನ್ನು ಆಧರಿಸಿದೆ,ವಿವಿಧತೆಯು ನಿಮ್ಮ ದೇಶವನ್ನು ಸದೃಢಗೊಳಿಸುವ ಶ್ರೀಮಂತಿಕೆಯಾಗಿದೆ. ಈ ತಿಳುವಳಿಕೆಯು ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು ಆಗಿದೆ,ಆದರೆ ಅದು ಖಾತರಿಯಲ್ಲ. ಅದನ್ನು ಪ್ರತಿದಿನ ಪೋಷಿಸುವ,ಬಲಗೊಳಿಸುವ ಮತ್ತು ನವೀಕರಿಸುವ ಅಗತ್ಯವಿದೆ ಎಂದ ಗುಟೆರಸ್,ಇದನ್ನು ಮಹಾತ್ಮಾ ಗಾಂಧಿಯವರ ಮೌಲ್ಯಗಳನ್ನು ಪಾಲಿಸುವ,ಎಲ್ಲ ಜನರ ವಿಶೇಷವಾಗಿ ಅತ್ಯಂತ ದುರ್ಬಲರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿ ಹಿಡಿಯುವ,ಎಲ್ಲರ ಒಳಗೊಳ್ಳುವಿಕೆಗಾಗಿ ದೃಢವಾದ ಕ್ರಮವನ್ನು ಕೈಗೊಳ್ಳುವ ಹಾಗೂ ಬಹುಸಾಂಸ್ಕೃತಿಕ,ಬಹುಧರ್ಮೀಯ ಮತ್ತು ಬಹುಜನಾಂಗೀಯ ಸಮಾಜಗಳ ಅಗಾಧ ಮೌಲ್ಯ ಮತ್ತು ಕೊಡುಗೆಗಳನ್ನು ಗುರುತಿಸುವ ಹಾಗೂ ದ್ವೇಷ ಭಾಷಣವನ್ನು ಸ್ಪಷ್ಟವಾಗಿ ಖಂಡಿಸುವ ಮೂಲಕ ಮಾಡಬಹುದಾಗಿದೆ ಎಂದು ಹೇಳಿದರು.


ಪತ್ರಕರ್ತರು,ಮಾನವ ಹಕ್ಕುಗಳ ಕಾರ್ಯಕರ್ತರು,ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಹಕ್ಕುಗಳು ಮತ್ತು ಸ್ವಾತಂತ್ರವನ್ನು ರಕ್ಷಿಸುವ ಹಾಗೂ ಭಾರತೀಯ ನ್ಯಾಯಾಂಗದ ನಿರಂತರ ಸ್ವಾತಂತ್ರವನ್ನು ಖಚಿತಪಡಿಸುವ ಅಗತ್ಯಕ್ಕೂ ಅವರು ಒತ್ತು ನೀಡಿದರು.
 ‘ಇದು ವಿಶ್ವವು ಸಂಭ್ರಮಿಸಿರುವ ಭಾರತವಾಗಿದೆ,ಜಾಗ್ರತರಾಗಿರುವಂತೆ ಹಾಗೂ ಎಲ್ಲರನ್ನೂ ಒಳಗೊಂಡ,ಬಹುತ್ವದ,ವೈವಿಧ್ಯಮಯ ಸಮುದಾಯಗಳು ಮತ್ತು ಸಮಾಜಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ನಾನು ಭಾರತೀಯರನ್ನು ಆಗ್ರಹಿಸುತ್ತೇನೆ. ವಿಶ್ವಾದ್ಯಂತದಂತೆ ಭಾರತದಲ್ಲಿಯೂ ಲಿಂಗ ಸಮಾನತೆಯನ್ನು ಮತ್ತು ಮಹಿಳೆಯರ ಹಕ್ಕುಗಳನ್ನು ಮುನ್ನಡೆಸಲು ಇನ್ನೂ ಹೆಚ್ಚಿನದನ್ನು ಮಾಡುವ ಅಗತ್ಯವಿದೆ. ಇದು ನೈತಿಕ ಅನಿವಾರ್ಯತೆಯಾಗಿದೆ ಮತ್ತು ಸಮೃದ್ಧಿ ಹಾಗೂ ಸುಸ್ಥಿರತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ. ಮಹಿಳೆಯರು, ಪುರುಷರು,ಬಾಲಕಿಯರು ಮತ್ತ ಬಾಲಕಿಯರಿಗೆ ಸಮಾನ ಹಕ್ಕುಗಳು ಮತ್ತು ಸ್ವಾತಂತ್ರವಿಲ್ಲದೆ ಯಾವುದೇ ಸಮಾಜವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಧ್ಯವಿಲ್ಲ’ ಎಂದು ಗುಟೆರಸ್ ಹೇಳಿದರು.


        26/11ರ ದಾಳಿಗಳಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಕೆ(Tributes to those killed in the 26/11 attacks)


ಭಾರತಕ್ಕೆ ತನ್ನ ಮೂರು ದಿನಗಳ ಭೇಟಿಯ ಮೊದಲ ದಿನವಾದ ಬುಧವಾರ ಗುಟೆರಸ್ ಅವರು ಮುಂಬೈನ ತಾಜ್ ಹೋಟೆಲ್ ನಲ್ಲಿ 26/11ರ ಭಯೋತ್ಪಾದಕ ದಾಳಿಗಳಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಹೋಟೆಲ್ ನಲ್ಲಿಯ 26/11ರ ದಾಳಿಗಳ ಸ್ಮಾರಕಕ್ಕೆ ಅವರು ಪುಷ್ಪಗುಚ್ಛವನ್ನು ಇರಿಸಿದಾಗ,ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜೊತೆಯಲ್ಲಿದ್ದರು.
          
ಎರಡನೇ ಅಧಿಕಾರಾವಧಿಯಲ್ಲಿ ಮೊದಲ ಭೇಟಿ:(First Visit in Second Term:)

ಕಳೆದ ಜನವರಿಯಲ್ಲಿ ಎರಡನೇ ಸಲ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಭಾರತಕ್ಕೆ ಗುಟೆರಸ್ ಅವರ ಪ್ರಥಮ ಭೇಟಿಯಾಗಿದೆ. ಈ ಹಿಂದೆ ತನ್ನ ಮೊದಲ ಅಧಿಕಾರಾವಧಿಯಲ್ಲಿ 2018,ಅಕ್ಟೋಬರ್ನಲ್ಲಿ ಅವರು ದೇಶಕ್ಕೆ ಭೇಟಿ ನೀಡಿದ್ದರು.
ಬುಧವಾರ ನಸುಕಿನಲ್ಲಿ ಲಂಡನ್ ನಿಂದ ಮುಂಬೈಗೆ ಆಗಮಿಸಿದ ಗುಟೆರಸ್ರನ್ನು ಮಹಾರಾಷ್ಟ್ರ ಸರಕಾರದ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. 26/11ರ ಭಯೋತ್ಪಾದಕ ದಾಳಿಗಳಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಲು ಗುಟೆರಸ್ ವಿಮಾನ ನಿಲ್ದಾಣದಿಂದ ನೇರವಾಗಿ ತಾಜ್ ಹೋಟೆಲ್ ಗೆ ತೆರಳಿದರು.
2008,ನ.26ರಂದು ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳ ಗುರಿಗಳಲ್ಲಿ ತಾಜ್ ಹೋಟೆಲ್ ಒಂದಾಗಿತ್ತು.
                       
 ಗುಜರಾತಿಗೆ ಪ್ರಯಾಣ:(Travel to Gujarat:)

ಸಂಜೆ ಮುಂಬೈನಿಂದ ಗುಜರಾತಿಗೆ ತೆರಳಿದ ಗುಟೆರಸ್ ಗುರುವಾರ ಕೇವಡಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೂಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News