×
Ad

ಬಿಹಾರ: 7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖ; ವಿವಾದ‌

Update: 2022-10-19 22:32 IST
PHOTO:twitted by ANI

ಕಿಷನ್‌ಗಂಜ್ (ಬಿಹಾರ್), 19: ಬಿಹಾರದ ಶಾಲೆಯೊಂದರ 7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿರುವುದು ವಿವಾದದ ಹೊಸ ಕಿಡಿ ಸೃಷ್ಟಿಸಿದೆ.

ಬಿಹಾರ ಸರಕಾರದ ಶಿಕ್ಷಣ ಇಲಾಖೆ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 12ರಿಂದ 18ರ ವರೆಗೆ ಮಧ್ಯಂತರ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯಲ್ಲಿ 7ನೇ ತರಗತಿಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ, ‘‘ಈ ಕೆಳಗಿನ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ’’ ಎಂದು ಪ್ರಶ್ನಿಸಲಾಗಿದೆ.

ಪ್ರಶ್ನೆ ಪತ್ರಿಕೆಯು ಚೀನಾದ ಉದಾಹರಣೆ ನೀಡಿದೆ. ಚೀನಾದ ಜನರನ್ನು ಚೈನಿಯರು ಎಂದು ಕರೆಯಲಾಗುತ್ತದೆ. ಹಾಗಾದರೆ ನೇಪಾಳ, ಇಂಗ್ಲೆಂಡ್, ಕಾಶ್ಮೀರ ಹಾಗೂ ಭಾರತದ ಜನರನ್ನು ಏನೆಂದು ಕರೆಯಲಾಗುತ್ತದೆ ಎಂದು ಪ್ರಶ್ನಿಸಲಾಗಿದೆ.

ಈ ಪ್ರಶ್ನೆಗಳನ್ನು ಅರಾರಿಯಾ, ಕಿಷನ್‌ಗಂಜ್ ಹಾಗೂ ಕಥಿಹಾರ್ ಜಿಲ್ಲೆಗಳ ಶಾಲೆಗಳ 7ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನಿಸಲಾಗಿದೆ. ‘‘ಬಿಹಾರ ಶಿಕ್ಷಣ ಮಂಡಳಿಯಿಂದ ನಾವು ಈ ಪ್ರಶ್ನೆ ಪತ್ರಿಕೆಯನ್ನು ಸ್ವೀಕರಿಸಿದ್ದೇವೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರದ ಜನರನ್ನು ಏನೆಂದು ಕರೆಯಲಾಗುತ್ತದೆ? ಎಂದು ಪ್ರಶ್ನಿಸಲಾಗಿದೆ. ಅಂದರೆ, ತಪ್ಪಾಗಿ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯಲಾಗುತ್ತದೆ ಎಂದು ಪ್ರಶ್ನಿಸಲಾಗಿದೆ. ಇದು ಮಾನವ ಪ್ರಮಾದ’’ ಎಂದು ಮುಖ್ಯ ಶಿಕ್ಷಕ ಎಸ್.ಕೆ. ದಾಸ್ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯದ ಕುರಿತು ಕೆಮರಾದ ಮುಂದೆ ಮಾತನಾಡಲು ಜಿಲ್ಲಾ ಶಿಕ್ಷಣ ಅಧಿಕಾರಿ ಸುಭಾಶ್ ಕುಮಾರ್ ಗುಪ್ತಾ ಅವರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News