ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ: ಸನ್ನಡತೆ ವ್ಯಾಖ್ಯಾನಿಸಲು ಮೋದಿ, ಶಾಗೆ ಮಹುವಾ ಮೊಯಿತ್ರಾ ಸವಾಲು

Update: 2022-10-19 17:42 GMT
PTI

ಕೋಲ್ಕತ್ತಾ , 19: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ 11 ಅಪರಾಧಿಗಳ ಬಿಡುಗಡೆಯನ್ನು ಅನುಮೋದಿಸಲು ಕೇಂದ್ರ ಸರಕಾರವು ಪರಿಗಣಿಸಿರುವ ‘‘ಉತ್ತಮ ನಡವಳಿಕೆ’’ಯನ್ನು ವ್ಯಾಖ್ಯಾನಿಸುವಂತೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ ದೂರುದಾರರಲ್ಲಿ ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸಂಸದೆ ಮೊಯಿತ್ರಾ ಕೂಡ ಒಬ್ಬರು.

ಅಪರಾಧಿಗಳು 14 ವರ್ಷಗಳ ಕಾಲ ಜೈಲಿನಲ್ಲಿ ಇದ್ದ ಕಾರಣ ಹಾಗೂ ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡು ಬಂದಿರುವುದರಿಂದ ಅವರನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ  ಎಂದು ಅಕ್ಟೋಬರ್ 17ರಂದು ಸಲ್ಲಿಸಿದ ಅಫಿಡಾವಿಟ್‌ನಲ್ಲಿ ಗುಜರಾತ್‌ನ ಬಿಜೆಪಿ ನೇತೃತ್ವದ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.

ಬುಧವಾರ ಮೊಯಿತ್ರಾ ಅವರು ಟ್ವೀಟ್ ಮಾಡಿ, ‘‘ಉತ್ತಮ ನಡವಳಿಕೆ’’ಯನ್ನು ವ್ಯಾಖ್ಯಾನಿಸುವಂತೆ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪ್ರಹ್ಲಾದ್ ಜೋಷಿ ಅವರನ್ನು ಪ್ರಶ್ನಿಸಿ ಎಂದಿದ್ದಾರೆ. 2020ರಲ್ಲಿ ಪರೋಲ್‌ನಲ್ಲಿ ಇದ್ದಾಗ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಅಪರಾಧಿಗಳಲ್ಲಿ ಒಬ್ಬನಾದ ಮಿತೇಶ್ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಬಿಲ್ಕಿಸ್ ಬಾನು  ಪ್ರಕರಣದಲ್ಲಿ ದೋಷಿ ಎಂದು ಪರಿಗಣಿತರಾದ  ಹಾಗೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಮಂದಿಯ ಬಿಡುಗಡೆಗೆ ಕೇಂದ್ರ ಸರಕಾರ ನೀಡಿದ ಅನುಮೋದನೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸಮರ್ಥಿಸಿಕೊಂಡ 1 ದಿನದ ಬಳಿಕ ಮೊಯಿತ್ರಾ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News