ಪೆರೋಲ್ ಮೇಲೆ ಬಿಡುಗಡೆಗೊಂಡ ಡೇರಾ ಮುಖ್ಯಸ್ಥನ ಆನ್‍ಲೈನ್ ಪ್ರವಚನಕ್ಕೆ ಹಾಜರಾದ ಹಲವು ಬಿಜೆಪಿ ನಾಯಕರು
ಹೊಸದಿಲ್ಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಜೈಲುಪಾಲಾಗಿದ್ದ ವಿವಾದಿತ ಡೇರಾ ಸಚ್ಚಾ ಸೌದಾ(Dera Sacha Sauda ) ಮುಖ್ಯಸ್ಥ ಗುರ್ಮೀತ್ ಸಿಂಗ್‍ಗೆ ಅಕ್ಟೋಬರ್ 14 ರಂದು 40 ದಿನಗಳ ಪೆರೋಲ್ ದೊರೆತ ಬೆನ್ನಲ್ಲೇ ಆತ ಸೋಮವಾರ ವರ್ಚುವಲ್ 'ಸತ್ಸಂಗ' ಕಾರ್ಯಕ್ರಮ ನಡೆಸಿದ್ದಾನೆ. ಈ ಕಾರ್ಯಕ್ರಮವನ್ನು ಕರ್ನಾಲ್‍ನ ಮೇಯರ್ ರೇಣು ಬೇಲಾ ಗುಪ್ತಾ ಸಹಿತ ಹಲವು ಬಿಜೆಪಿ ನಾಯಕರು ವೀಕ್ಷಿಸಿದ್ದಾರೆ ಹಾಗೂ ಆತನ ಆಶೀರ್ವಾದ ಕೋರಿದ್ದಾರೆ ಎಂದು ವರದಿಯಾಗಿದೆ.
ಕರ್ನಾಲ್ ಪಟ್ಟಣವು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ತವರು ಕ್ಷೇತ್ರದಲ್ಲಿದೆ
ಹರ್ಯಾಣಾಧ ಸುನರಿಯಾ ಜೈಲಿನಲ್ಲಿದ್ದ ಸೌದಾ ಮುಖ್ಯಸ್ಥನ ಪೆರೋಲ್ ಮೇಲೆ ಬಿಡುಗಡೆಯು ರಾಜ್ಯದ ಪಂಚಾಯತ್ ಚುನಾವಣೆ ಮತ್ತು ಆದಂಪುರ್ ಉಪಚುನಾವಣೆಗಿಂತ ಕೆಲವೇ ದಿನಗಳಿಗೆ ಮುಂಚೆ ಆಗಿದೆ.
ಆತನ ಜತೆ ಆನ್‍ಲೈನ್ ಸಂವಾದ ನಡೆಸಿದ್ದ ಮೇಯರ್ ಗುಪ್ತಾ, ಕರ್ನಾಲ್‍ಗೆ ಬರುವಂತೆ ಮನವಿ ಮಾಡಿದ್ದಾರೆ. ಸಿಂಗ್ ಉತ್ತರ ಪ್ರದೇಶದ ಬರ್ನಾವ ಗ್ರಾಮದಿಂದ ಆನ್‍ಲೈನ್ ಸತ್ಸಂಗ್ ನಡೆಸಿದ್ದಾನೆಂದು ಹೇಳಲಾಗಿದೆ.
ಕರ್ನಾಲ್‍ನ ಹಿರಿಯ ಉಪ ಮೇಯರ್ ಕರ್ನಾಲ್ ರಾಜೇಶ್ ಅಘಿ ಮತ್ತು ಉಪ ಮೇಯರ್ ನವೀನ್ ಕುಮಾರ್ ಕೂಡ ಸೌದಾ ಮುಖ್ಯಸ್ಥನ ಜೊತೆ ಆನ್‍ಲೈನ್ ಸಂವಾದ ನಡೆಸಿದ್ದಾರೆ. ಸಿರ್ಸಾಗೆ ಹಲವು ಬಾರಿ ಬಂದಿದ್ದೇನೆ, ನಿಮ್ಮನ್ನು ಮತ್ತೆ ಭೇಟಿಯಾಗಬೇಕು ಎಂದು ಅಘಿ ಹೇಳಿಕೊಂಡಿದ್ದಾರೆ. ಡೇರಾ ಸಚ್ಚಾ ಸೌದಾ ಹಯಾಣಾದ ಸಿರ್ಸಾ ಜಿಲ್ಲೆಯಲ್ಲಿದೆ.
ಮೇಯರ್ ಗುಪ್ತಾ ಅವರು ಡೇರಾ ಮುಖ್ಯಸ್ಥನೊಂದಿಗೆ ಸತ್ಸಂಗದ ಕೊನೆಯಲ್ಲಿ ಮುಖಃತ ಭೇಟಿಯಾಗಿದ್ದಾರೆ. ಮೈಕ್ರೊಫೋನ್ ಕೈಗೆತ್ತಿಕೊಂಡು ಆತನನ್ನು 'ಪಿತಾಜಿ' ಎಂದು ಸಂಬೋಧಿಸಿದ್ದಾರೆ. ಡೇರಾ ಅನುಯಾಯಿಗಳು ಆತನನ್ನು ಅದೇ ರೀತಿ ಸಂಬೋಧಿಸುತ್ತಾರೆ.
ಈ ಹಿಂದೆ ಕೂಡ ಆತನಿಗೆ ಹಲವು ಬಾರಿ ಚುನಾವಣೆ ದಿನಾಂಕಗಳು ಹತ್ತಿರ ಬರುತ್ತಿದ್ದಂತೆ ಪೆರೋಲ್ ನೀಡಲಾಗಿದೆ.
ಅಕ್ಟೋಬರ್ 24, 2020 ರಂದು ಆತನಿಗೆ ಆತನ ಅಸೌಖ್ಯಪೀಡಿತ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು. ಇದು ಬರೋಡಾ ವಿಧಾನಸಭಾ ಉಪಚುನಾವಣೆಗಿಂತ ಕೆಲವೇ ದಿನಗಳಿಗೆ ಮುಂಚಿತವಾಗಿತ್ತು. ಈ ವರ್ಷ ಪಂಚಾಜ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೂ ಫೆಬ್ರವರಿಯಲ್ಲಿ 21 ದಿನಗಳ ಪೆರೋಲ್ ನೀಡಲಾಗಿದ್ದರೆ ಜೂನ್ ತಿಂಗಳಿನಲ್ಲಿ ಹರ್ಯಾಣಾದ ನಗರಸಭಾ ಚುನಾವಣೆಗಳು ಮತ್ತು ಪಂಜಾಬ್‍ನ ಸಂಗ್ರೂರ್ ಲೋಕಸಭಾ ಉಪಚುನಾವಣೆಗೆ ಮುಂಚಿತವಾಗಿ ಒಂದು ತಿಂಗಳು ಪೆರೋಲ್ ನೀಡಲಾಗಿತ್ತು.
ಆತ ಹರ್ಯಾಣ ಮತ್ತು ಪಂಜಾಬ್‍ನ ದಲಿತ ಸಮುದಾಯಗಳಲ್ಲಿ ಜನಪ್ರಿಯನಾಗಿದ್ದಾನೆಂದು ನಂಬಲಾಗಿದೆ. 2014 ಲೋಕಸಭಾ ಚುನಾವಣೆಗೆ ಮುನ್ನ ಡೇರಾ ಬಹಿರಂಗವಾಗಿ ಮೊದಲ ಬಾರಿ ಬಿಜೆಪಿಯನ್ನು ಬೆಂಬಲಿಸಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಹಾ ಮಳೆ: ಜನಜೀವನ ಅಸ್ತವ್ಯಸ್ತ