ಭಟ್ಕಳದಲ್ಲಿ ಕಾಣಿಸಿಕೊಂಡ ಮೊದಲ ಲಂಪಿ ವೈರಸ್: ಆತಂಕ ಬೇಡ ಎಂದ ಪಶು ವೈದ್ಯಾಧಿಕಾರಿ

Update: 2022-10-22 16:51 GMT

ಭಟ್ಕಳ: ದೇಶದಲ್ಲೆಡೆ ಸದ್ದು ಮಾಡುತ್ತಿರುವ ಜಾನುವಾರುಗಳ ಮಾರಕ ರೋಗ ಲಂಪಿ ಸ್ಕಿನ್ ಡಿಸೀಸ್ (ಎಲ್.ಎಸ್.ಡಿ) ನ ಮೊದಲ ಪ್ರಕರಣ ಭಟ್ಕಳದಲ್ಲಿಂದು ಕಾಣಿಸಿಕೊಂಡಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಪಶು ವೈದ್ಯಾಧಿಕಾರಿ ಡಾ. ಶಿವಕುಮಾರ್ ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.

ಈ ಕುರಿತಂತೆ ಅವರು ಶನಿವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದು, ಶನಿವಾರ ಸಂಜೆ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮೊದಲ ಬಾರಿಗೆ ದನವೊಂದರಲ್ಲಿ ಈ ರೋಗ ಕಾಣಿಸಿಕೊಂಡಿದೆ. ಭಟ್ಕಳ ತಾಲೂಕಿನ ವರದಿಯಾದ ಮೊದಲ ಪ್ರಕರಣವಾಗಿದ್ದು, ಇದಕ್ಕೆ ಬೇಕಾದ ಎಲ್ಲ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಜನರು ಆತಂಕಪಡುವ ಅಗತ್ಯವಿಲ್ಲ. ಇದೊಂದು ವೈರಸ್ ಆಗಿದ್ದು ದನಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಇದರ ಹಾಲನ್ನು ಕೂಡ ಕುದಿಸಿ ಕುಡಿಯಬಹುದು. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದರು.

ಈ ರೋಗವು ಉತ್ತರ ಭಾರದಲ್ಲಿ ಬಹಳಷ್ಟು ಕಾಣಿಸಿಕೊಂಡಿದ್ದು ನಮ್ಮ ರಾಜ್ಯದಲ್ಲೂ ಈ ರೋಗ ಉಲ್ಭಣಗೊಳ್ಳುತ್ತಿದೆ. ಇದೊಂದು ವೈರಲ್ ಡಿಸೀಸ್ ಆಗಿದ್ದು ಸೊಳ್ಳೆಗಳಿಂದ, ಗಾಳಿಯಿಂದ ಈ ರೋಗ ಹರಡುತ್ತಿದೆ. ಇದಕ್ಕೆ ಚಿಕಿತ್ಸೆ ಇದೆ ಎಂದರು.

ಶನಿವಾರ ಸಂಜೆ ವಾಟ್ಸಪ್ ನಲ್ಲಿ ಲಂಪಿ ವೈರಸ್ ಪೀಡಿತ ಹೋರಿಯ ವೀಡಿಯೊ ವೈರಲ್ ಆಗುತ್ತಿದ್ದು ಈ ಕುರಿತಂತೆ ಜನರು ವಿವಿಧ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ.

ಏನಿದು ಲಂಪಿ ವೈರಸ್?: ಲಂಪಿ ಸ್ಕಿನ್ ಡಿಸೀಸ್  ಒಂದು ಸಾಂಕ್ರಾಮಿಕ ವೈರಲ್ ಆಗಿದ್ದು ಅದು ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತದೆ. ಜ್ವರ, ಚರ್ಮದ ಮೇಲೆ ಗಂಟುಗಳನ್ನು ಉಂಟು ಮಾಡುತ್ತದೆ ಮತ್ತು ಜಾನುವಾರುಗಳ ಸಾವಿಗೆ ಕಾರಣವಾಗಬಹುದು. ಸೋಂಕಿತ ಜಾನುವಾರುಗಳಲ್ಲಿ ಜ್ವರ ಮತ್ತು ಸಂತಾನಹೀನತೆ ಕಾಣಿಸುತ್ತದೆ. ಕಳಪೆ ಹಾಲು ಉತ್ಪಾದನೆಗೂ ಕಾರಣವಾಗಬಹುದು. ಈ ರೋಗವು ಸೊಳ್ಳೆಗಳು, ನೊಣಗಳು, ಹೇನುಗಳು ಮತ್ತು ಕಣಜಗಳಿಂದ ಜಾನುವಾರುಗಳ ನೇರ ಸಂಪರ್ಕದಿಂದ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸೋಂಕಿತ ಜಾನುವಾರುಗಳನ್ನು ಬಂಧಿಸುವುದು, ಸತ್ತ ಜಾನುವಾರುಗಳ ದೇಹಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಅತೀ ಮುಖ್ಯವಾಗಿದೆ. ಮುದ್ದೆ ಚರ್ಮ ರೋಗಕ್ಕಾಗಿ ಹೊಸ ಲಸಿಕೆಯನ್ನು ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಜತೀಂದ್ರ ನಾಥ್ ಸ್ವೈನ್ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

ಚರ್ಮ ಗಂಟು ಕಾಯಿಲೆಯು ದೇಶೀಯ ಜಾನುವಾರು ಮತ್ತು ಏಷ್ಯನ್ ನೀರಿನ ಎಮ್ಮೆಗಳ ರೋಗಕಾರಕ-ಹರಡುವ ಪೋಕ್ಸ್ ಕಾಯಿಲೆಯಾಗಿದೆ ಮತ್ತು ಇದು ಚರ್ಮದ ಗಂಟುಗಳ ನೋಟದಿಂದ ನಿರೂಪಿಸಲ್ಪಟ್ಟಿದೆ. ಅಸ್ಸಾಂ, ಒಡಿಶಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ ಮುಂತಾದ ಭಾರತದ ಹಲವಾರು ರಾಜ್ಯಗಳಲ್ಲಿ ಈ ರೋಗ ವರದಿಯಾಗಿದೆ.

ಜುಲೈನಲ್ಲಿ ಮುದ್ದೆ ಚರ್ಮ ರೋಗ ಕಾಣಿಸಿಕೊಂಡು 67 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಆದರೆ, ಈಗ ಅದರ ಸಂಖ್ಯೆ 75 ಸಾವಿರಕ್ಕೂ ಅಧಿಕವಾಗಿದೆ. ಏಪ್ರಿಲ್‌ನಲ್ಲಿ ಗುಜರಾತ್‌ನ ಕಚ್ ಪ್ರದೇಶದಲ್ಲಿ ಮೊದಲ ಮುದ್ದೆ ಚರ್ಮದ ಸೋಂಕಿನ ಪ್ರಕರಣ ವರದಿಯಾಗಿದೆ. ಜುಲೈನಿಂದ ಇಲ್ಲಿಯವರೆಗೆ 75 ಸಾವಿರ ಜಾನುವಾರುಗಳು ಸಾವನ್ನಪ್ಪಿವೆ ಎಂದು ಒನ್ ಇಂಡಿಯಾ ಸುದ್ದಿ ತಾಣ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News