ಇ-ವಾಹನಗಳ ಸಾಧಕ-ಬಾಧಕಗಳು
ಕಳೆದ ಕೆಲವು ದಶಕಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ವಿದ್ಯುತ್‌ಚಾಲಿತ ವಾಹನಗಳು (ಇವಿ) ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಬಳಕೆಗೆ ಬರುತ್ತಿದೆ. ಅನೇಕರು ಪೆಟ್ರೋಲ್, ಡೀಸೆಲ್ ವಾಹನಗಳನ್ನು ಮಾರಾಟ ಮಾಡಿ, ಇವಿಗಳನ್ನು ಖರೀದಿಸುತ್ತಿದ್ದಾರೆ. ಟಾಟಾ, ಮರ್ಸಿಡೀಸ್, ವೊಲ್ವೊ, ಹುಂಡೈ ಸೇರಿದಂತೆ ದೊಡ್ಡದೊಡ್ಡ ಕಾರು ಉತ್ಪಾದನಾ ಕಂಪೆನಿಗಳು ಇವಿ ಉತ್ಪಾದನೆಯನ್ನು ಆರಂಭಿಸುತ್ತಿವೆ. ಹಾಗಿದ್ದರೆ ಇಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವುದು ನಿಜಕ್ಕೂ ಉತ್ತಮವೇ? ಇವುಗಳ ಖರೀದಿಯಿಂದಾಗುವ ಲಾಭ-ನಷ್ಟಗಳೇನು? ಇವಿ ಖರೀದಿಸುವಾಗ ಯಾವೆಲ್ಲ ವಿಷಯಗಳನ್ನು ಯೋಚಿಸಬೇಕು? ತಿಳಿಯೋಣ ಬನ್ನಿ.
ದುಬಾರಿ ಬೆಲೆ
ಪ್ರಸಕ್ತ ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಕೆ ಮಾಡಿದರೆ ಇಲೆಕ್ಟ್ರಿಕ್ ವಾಹನಗಳ ಬೆಲೆ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ ಒಮ್ಮೆ ಬಂಡವಾಳ ಹಾಕಿದರೆ, ನಂತರ ನಿರ್ವಹಣೆಗೆ ಇವಿ ಬಳಕೆದಾರರು ಹೆಚ್ಚು ಹಣ ಖರ್ಚು ಮಾಡಬೇಕೆಂದಿಲ್ಲ. ಈಗಿನ ಪೆಟ್ರೋಲ್, ಡೀಸೆಲ್ ಬೆಲೆಗೆ ಹೋಲಿಕೆ ಮಾಡಿದರೆ ಇವಿಗಳನ್ನು ಕಡಿಮೆ ವೆಚ್ಚದಲ್ಲಿ ಓಡಿಸಬಹುದು. ಅಲ್ಲದೇ, ಮಾರುಕಟ್ಟೆಯಲ್ಲಿ ಇವಿಗಳ ಬೆಲೆ ಕಡಿಮೆಯಾಗುತ್ತಿದೆ.
ಚಾರ್ಜಿಂಗ್ ವ್ಯವಸ್ಥೆ
ಸ್ವಂತ ಮನೆಯಾಗಿದ್ದರೆ ನಮಗೆ ಬೇಕಾದಂತೆ ವಾಹನ ಚಾರ್ಜಿಂಗ್ ವ್ಯವಸ್ಥೆಯನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಆದರೆ ಬಾಡಿಗೆ ಮನೆಯಾದರೆ ಇವಿಯನ್ನು ಚಾರ್ಜ್ ಮಾಡಲು ಅನುಕೂಲವಾಗುವಂತೆ ವಿದ್ಯತ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮನೆ ಮಾಲಕರ ಅನುಮತಿ ಪಡೆಯಬೇಕಾಗುತ್ತದೆ. ಇವಿ ಖರೀದಿಸುವ ಮುನ್ನವೇ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
ಚಾರ್ಜಿಂಗ್ ಪಾಯಿಂಟ್
ಪೆಟ್ರೋಲ್ ಬಂಕ್‌ಗಳು ಅಲ್ಲಲ್ಲಿ ಲಭ್ಯವಿರುವಂತೆ ಇವಿ ಚಾರ್ಜಿಂಗ್ ಪಾಯಿಂಟ್‌ಗಳು ಇನ್ನೂ ವ್ಯಾಪಕವಾಗಿ ಆರಂಭವಾಗಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ತೀವ್ರ ಕೊರತೆಯಿದೆ. ಆದ್ದರಿಂದ ದೂರ ಪ್ರಯಾಣ ಮಾಡುವವರು ಇವಿ ಕಾರು ಬಳಸುವಾಗ ತುಂಬಾ ಯೋಚಿಸಬೇಕಾಗುತ್ತದೆ. ವಾಹನವನ್ನು ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಓಡಿಸಬಹುದು ಎಂಬುದನ್ನು ಮೊದಲೇ ತಿಳಿದುಕೊಂಡು ನಂತರವಷ್ಟೇ ಪ್ರಯಾಣದ ಯೋಜನೆ ಮಾಡಿಕೊಳ್ಳಬೇಕು.
ಪರಿಸರ ಸಂರಕ್ಷಣೆ
ಇಂಧನ ತೈಲಗಳನ್ನು ಬಳಸುವ ವಾಹನಗಳು ಇಂಗಾಲವನ್ನು ಹೊರಸೂಸಿ ವಾಯುಮಾಲಿನ್ಯ ಉಂಟುಮಾಡುತ್ತವೆ. ಆದರೆ ಇವಿಯಿಂದ ಯಾವುದೇ ಕೆಟ್ಟ ಅನಿಲ ಹೊರಬಾರದ ಕಾರಣ ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿ ಇವಿ ಉತ್ತಮವೆನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಸರಕಾರಗಳು ಇವಿಯನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಇವಿಯನ್ನು ಉತ್ಪಾದಿಸುವ ಸಂದರ್ಭದಲ್ಲೇ ಪರಿಸರ ಮಾಲಿನ್ಯವಾಗುತ್ತದೆ ಎಂಬ ವಾದ ಕೂಡ ಇದೆ.
13 ಲಕ್ಷ ವಾಹನಗಳು
ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿದ್ದು, ಈಗ 13 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ ಎಂದು ಕೇಂದ್ರ ಸರಕಾರ ಆಗಸ್ಟ್‌ನಲ್ಲಿ ತಿಳಿಸಿತ್ತು. ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಸಂಖ್ಯೆ 5.44 ಲಕ್ಷ, ತ್ರಿಚಕ್ರ ವಾಹನಗಳು 7.93 ಲಕ್ಷ ಹಾಗೂ ನಾಲ್ಕು ಚಕ್ರದ ವಾಹನಗಳು 54 ಸಾವಿರಕ್ಕೂ ಅಧಿಕವಿದೆ ಎಂದು ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ್ದರು. 2020-21ಕ್ಕೆ ಹೋಲಿಕೆ ಮಾಡಿದರೆ 2021-22ರಲ್ಲಿ ಇವಿ ಖರೀದಿ ಪ್ರಮಾಣವು ದೇಶದಲ್ಲಿ ಮೂರು ಪಟ್ಟು ಹೆಚ್ಚಾಗಿದೆ.