ಹಬ್ಬಕ್ಕೆ ಓಡಿಸುವ ರೈಲುಗಳು ಹೀಗೇಕೆ?

Update: 2022-10-25 05:49 GMT

ಭಾರತೀಯ ರೈಲ್ವೆಯು ಪ್ರತಿವರ್ಷ ದೀಪಾವಳಿ, ದಸರಾ, ಕ್ರಿಸ್ಮಸ್ ಅಥವಾ ಹೊಸ ವರ್ಷಕ್ಕೆ ಹಬ್ಬದ ಸ್ಪೆಷಲ್ ರೈಲುಗಳನ್ನು ಓಡಿಸುತ್ತದೆ. ರೈಲ್ವೆಯಲ್ಲಿ ಬೇಕಾದಷ್ಟು ಹೆಚ್ಚಿನ ಬೋಗಿಗಳಿದ್ದು, ಡೀಸೆಲ್ ಇಂಜಿನ್‌ಗಳು ಇದ್ದರೂ; ಅದನ್ನು ಕೇವಲ ಹಬ್ಬಗಳ ಸಮಯದಲ್ಲಿ ಮಾತ್ರ ಓಡಿಸುವುದು ಏಕೆ? ಇಡೀ ಭಾರತದಲ್ಲಿ ಯಾವ ರೈಲಿನಲ್ಲೂ ಪ್ರಯಾಣಿಕರಿಗೆ ಸೀಟು ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ, ಅವರು ಹೆಚ್ಚುವರಿ ಬೋಗಿಗಳನ್ನು ಹಾಗೂ ಡೀಸೆಲ್ ಇಂಜಿನ್‌ಗಳನ್ನು ಬಳಸಿ ಇಡೀ ವರ್ಷ ಹಾಗೂ ದಿನಂಪ್ರತಿ ರೈಲುಗಳನ್ನು ಹೆಚ್ಚುವರಿಯಾಗಿ ಯಾತಕ್ಕಾಗಿ ಓಡಿಸಬಾರದು? ಈ ಪ್ರಶ್ನೆ ಎಲ್ಲ ರೈಲು ಪ್ರಯಾಣಿಕರಲ್ಲೂ ಮೂಡುವುದು ಸಹಜ. ಆ ಪ್ರಶ್ನೆ ಬದಿಗಿಟ್ಟು ನೋಡಿದರೂ ಈಗ ಹಬ್ಬದ ಸಂದರ್ಭದಲ್ಲಿ ಓಡಿಸುವ ರೈಲುಗಳು ಕೂಡಾ ಜನಹಿತವನ್ನು ಮರೆತು ಕೇವಲ ಹಣ ಗಳಿಸುವ ದಾರಿಯಾಗಿದೆಯೇ ಎಂಬ ಸಂಶಯ ಕಾಡುತ್ತಿದೆ ಮೊನ್ನೆ 23-10-2022 ಮುರುಡೇಶ್ವರದಿಂದ ಬೆಂಗಳೂರಿಗೆ ಹೊರಟ ದೀಪಾವಳಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ: 06564) ದಿನಾಂಕ 23ರಂದು ಸಾಯಂಕಾಲ 6.18ಕ್ಕೆ ಪುತ್ತೂರು ತಲುಪಿತ್ತು.

ಬಹುಶಃ ಈ ರೈಲಿನ ಲೋಕೋಪೈಲೆಟ್ ಅವರಿಗೆ ರೈಲನ್ನು ಚಲಾಯಿಸಿ ಯಾವುದೇ ಅನುಭವ ಇರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಮೊನ್ನೆ ಅವರು ರೈಲನ್ನು ಪುತ್ತೂರು ರೈಲು ನಿಲ್ದಾಣದಲ್ಲಿ ನಿಲ್ಲಿಸುವಾಗ ಕಟ್ಟಕಡೆಯ ಎರಡು ಬೋಗಿಗಳ ಪ್ರಯಾಣಿಕರು (ಜನರಲ್ ಬೋಗಿ ಹಾಗೂ ಕಡೆಗೆ ಇರುವ ಲೇಡೀಸ್ ಬೋಗಿ) ಹಳಿಗಳ ಮೇಲೆ, ಜಲ್ಲಿ ಕಲ್ಲುಗಳ ಮೇಲೆ ಕಷ್ಟದಿಂದ ನಡೆದು ಬಂದು, ಅಲ್ಲಿಂದ ಎತ್ತರದಲ್ಲಿರುವ ರೈಲನ್ನು ಆ ಎಕ್ಸ್‌ಪ್ರೆಸ್ ರೈಲಿಗಿರುವ ಕೇವಲ ಒಂದು ನಿಮಿಷ ನಿಲುಗಡೆ ಸಮಯದೊಳಗೆ ಬಹಳ ಕಷ್ಟದಿಂದ ಹತ್ತಬೇಕಾಯಿತು. ಅವೆರಡೂ ಬೋಗಿಗಳು ಫ್ಲ್ಯಾಟ್‌ಫಾರ್ಮ್ ನಿಂದ ದೂರವಿದ್ದವು /ಹೊರಗಿದ್ದವು. ಹಲವು ಪ್ರಯಾಣಿಕರು ತಮ್ಮಾಂದಿಗಿದ್ದ ವೃದ್ಧ ಪ್ರಯಾಣಿಕರನ್ನು ಅಷ್ಟೂ ಕೆಳಗಿನಿಂದ ಜಲ್ಲಿ ಕಲ್ಲುಗಳ ಮೇಲೆ ನಿಂತು, ಎತ್ತಿ ರೈಲಿನೊಳಗೆ ಬಾಗಿಲಿನ ಹತ್ತಿರ ಕೂರಿಸುವುದು ಕಂಡು ಬಂತು. ಆನಂತರ ಲಗೇಜ್ ರೈಲಿನೊಳಗೆ ಬಿಸಾಡಿ ರೈಲಿನೊಳಗೆ ಹೋಗಲು ಸಾಕಷ್ಟು ಕಷ್ಟ ಪಡಬೇಕಾಯಿತು. ಇಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತು. ಕಟ್ಟಕಡೆಯ ಪ್ರಯಾಣಿಕ, ಸ್ವಲ್ಪದೂರ ಓಡಿ ಹೋಗಿ ಕಷ್ಟಪಟ್ಟು ರೈಲು ಹತ್ತಿದರು.

ಕಬಕ, ಪುತ್ತೂರು, ರೈಲು ನಿಲ್ದಾಣದಲ್ಲಿ 26 ಬೋಗಿಗಳನ್ನು ನಿಲ್ಲಿಸಬಹುದಾದ ರೈಲ್ವೆ ಪ್ಲಾಟ್‌ಫಾರ್ಮ್ ಇದೆ. ರೈಲು ಸಂಖ್ಯೆ 06564 ದೀಪಾವಳಿ ಸ್ಪೆಷಲ್; ಮುರುಡೇಶ್ವರ-ಬೆಂಗಳೂರು ರೈಲಿಗಿರುವುದು ಕೇವಲ 18 ಬೋಗಿಗಳು ಮಾತ್ರ. ಆದರೂ ನಿಲ್ದಾಣದಲ್ಲಿ ಎರಡು ಬೋಗಿಗಳನ್ನು ಹೊರಗೆ ನಿಲ್ಲಿಸಿ, ರೈಲು ಪ್ರಯಾಣಿಕರ ಜೀವದೊಡನೆ ಚೆಲ್ಲಾಟವಾಡುವುದು ಯಾಕೆ? ಮೊನ್ನೆ ಕೊನೆಯ ಪ್ರಯಾಣಿಕ ರೈಲು ಹತ್ತುವಾಗ ಜೀವಕ್ಕೆ ಏನಾದರೂ ಅಪಾಯವಾಗಿದ್ದರೆ ಅದಕ್ಕೆ ಯಾರು ಹೊಣೆ. ಈ ರೀತಿ ಮಾಡುವುದು ತಪ್ಪಲ್ಲವೇ? ಹಬ್ಬದ ಸಮಯದಲ್ಲಿ ಮನೆ ತಲುಪಬೇಕೆಂದು ರೈಲು ಹತ್ತುತ್ತಿರುವ ಇಂತಹ ಜೀವಗಳಿಗೆ ಬೆಲೆಯಿಲ್ಲವೇ?

ಅಷ್ಟೇ ಅಲ್ಲದೆ ಈ ರೈಲಿನ ಜನರೇಟರ್ ಡಬ್ಬಿಯ ಅರ್ಧ ಮೇಲ್ಛಾವಣಿ ಕಿತ್ತು ಹೋಗಿದೆ. ಉಳಿದ ಅರ್ಧ ಚಾವಣಿಯಲ್ಲಿ ಇದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದು, ಪುನಃ ವಾಪಸ್ ಹೋಗುತ್ತಿತ್ತು.

ಈ ರೈಲಿನ ನಿರ್ವಹಣೆ ನೈಋತ್ಯ ರೈಲ್ವೆ ಮಾಡುತ್ತಾ ಇದೆ. ಬೆಂಗಳೂರಿನಿಂದ ಈ ರೈಲನ್ನು ಬಿಡುವ ಮೊದಲು, ಅಲ್ಲಿನ ಯಾವ ರೈಲು ಅಧಿಕಾರಿಗೂ ಜನರೇಟರ್ ಬೋಗಿಗೆ ಮೇಲ್ಛಾವಣಿ ಇಲ್ಲದಿರುವುದು ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಷ್ಟೇ ಅಲ್ಲ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತಲುಪುವಾಗ ಮಧ್ಯದಲ್ಲಿರುವ ನಾಲ್ಕಾರು ಡಝನ್ ರೈಲು ನಿಲ್ದಾಣಗಳಲ್ಲಿರುವ ಎಲ್ಲಾ ರೈಲು ನೌಕರರಿಗೆ ಜಾಣ ಕುರುಡೇ? ಹೀಗೆ ಮಳೆಗಾಲದ ಸಮಯದಲ್ಲಿ ಮೇಲ್ಛಾವಣಿ ಇಲ್ಲದೆ ಜನರೇಟರ್ ಬೋಗಿಯನ್ನು ಓಡಿಸಿದರೆ ಅದಕ್ಕಾಗುವ ಹಾನಿ ಅಪಾರ. ಈ ಹಾನಿಯನ್ನು ಭಾರತೀಯ ಪ್ರಜೆಗಳು ತಮ್ಮ ತೆರಿಗೆಯ ಹಣದಿಂದ ಸರಿ ಮಾಡಿಸಬೇಕಾಗುತ್ತದೆ. ಇಷ್ಟೊಂದು ರೈಲ್ವೆ ಅಧಿಕಾರಿಗಳು ಹಾಗೂ ನೌಕರರು ಇದ್ದರೂ ಮುರುಡೇಶ್ವರದಿಂದ ಬೆಂಗಳೂರು ಮಧ್ಯದ ರೈಲು ನಿಲ್ದಾಣದಲ್ಲಿರುವಾಗ ಯಾರೂ ಈ ಬಗ್ಗೆ ಕಾಳಜಿ ವಹಿಸದಿರುವುದು ರೈಲ್ವೆ ಇಲಾಖೆಯ ಕಾರ್ಯವೈಖರಿಯನ್ನು ಸೂಚಿಸುತ್ತದೆ.

ಹಾಲಿಡೇ ಸ್ಪೆಷಲ್ ಎಕ್ಸ್‌ಪ್ರೆಸ್ ಅಂದರೆ, ತೀರಾ ಹಳೆಯದಾದ, ಪ್ರಯಾಣಿಕರು ಉಪಯೋಗಿಸಲು ಆಗದೆ ಇರುವ, ಎಲ್ಲೋ ಒಂದು ಕಡೆ ಮೂಲೆಗೆ ಹಳಿಯಲ್ಲಿ ಬಿದ್ದಿರುವ ರೈಲಿನ ಬೋಗಿಗಳು ಹಾಗೂ ಇಂಜಿನ್‌ನ್ನು, ತಮ್ಮ ಸ್ವಾರ್ಥಕ್ಕೆ ಹೆಚ್ಚಿನ ಹಣಗಳಿಸಲು ಉಪಯೋಗಿಸುವ ಇಂತಹ ಅಧಿಕಾರಿಗಳಿಗೆ ಏನನ್ನಬೇಕು?

Writer - ಅಮೃತ್ ಪ್ರಭು, ಮಂಗಳೂರು

contributor

Editor - ಅಮೃತ್ ಪ್ರಭು, ಮಂಗಳೂರು

contributor

Similar News