ಪ್ಲೇ ಸ್ಟೋರ್ ನೀತಿಗಳು: ವಿಶ್ವಾಸಭಂಗಕ್ಕಾಗಿ ಗೂಗಲ್ ಗೆ ಮತ್ತೆ 936.44 ಕೋ.ರೂ.ದಂಡ ವಿಧಿಸಿದ ಸಿಸಿಐ

Update: 2022-10-25 16:12 GMT

ಹೊಸದಿಲ್ಲಿ,ಅ.25: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ವು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಗೂಗಲ್ (Google)ವಿರುದ್ಧ ತನ್ನ ಎರಡನೇ ತೀರ್ಪನ್ನು ಮಂಗಳವಾರ ಪ್ರಕಟಿಸಿದ್ದು,ಪ್ಲೇ ಸ್ಟೋರ್(Play Store) ನೀತಿಗಳಿಗೆ ಸಂಬಂಧಿಸಿದಂತೆ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಕಂಪನಿಗೆ 936.44 ಕೋ.ರೂ.ಗಳ ದಂಡವನ್ನು ವಿಧಿಸಿದೆ.

 
 ತನ್ನ ಅನ್ಯಾಯದ ವ್ಯವಹಾರ ಪದ್ಧತಿಗಳನ್ನು ನಿಲ್ಲಿಸುವಂತೆ ಮತ್ತು ಅದರಿಂದ ದೂರವಿರುವಂತೆ ಹಾಗೂ ನಿರ್ದಿಷ್ಟ ಕಾಲಮಿತಿಯೊಳಗೆ ಸ್ಪರ್ಧಾತ್ಮಕ ವಿರೋಧಿ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಸಿಐ ಗೂಗಲ್ಗೆ ತಾಕೀತು ಮಾಡಿದೆ. ಇದು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಗೂಗಲ್ ವಿರುದ್ಧ ಸಿಸಿಐ ನೀಡಿರುವ ಎರಡನೇ ಪ್ರಮುಖ ತೀರ್ಪು ಆಗಿದೆ.
 
ಆ್ಯಂಡ್ರಾಯ್ಡ್ ಮೊಬೈಲ್(Android mobile) ಸಾಧನಗಳಿಗೆ ಸಂಬಂಧಿಸಿದಂತೆ ಹಲವು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಅ.20ರಂದು ಗೂಗಲ್ ಗೆ 1,337.76 ಕೋ.ರೂ.ಗಳ ದಂಡವನ್ನು ವಿಧಿಸಿದ್ದ ಸಿಸಿಐ,ತನ್ನ ವಿವಿಧ ನ್ಯಾಯಯುತವಲ್ಲದ ವ್ಯವಹಾರ ಪದ್ಧತಿಗಳನ್ನು ನಿಲ್ಲಿಸುವಂತೆ ಅದಕ್ಕೆ ಆದೇಶಿಸಿತ್ತು.
ಆ್ಯಂಡ್ರಾಯ್ಡ್ ಮೊಬೈಲ್ ಪರಿಸರ ವ್ಯವಸ್ಥೆಯಲ್ಲಿ ಆ್ಯಪ್ ಡೆವಲಪರ್ ಗಳಿಗಾಗಿ ಮುಖ್ಯ ವಿತರಣಾ ಚಾನೆಲ್ ಅನ್ನು ಹೊಂದಿರುವ ಗೂಗಲ್ ನ ಪ್ಲೇಸ್ಟೋರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ತಮ್ಮ ಆ್ಯಪ್ಗಳಿಂದ ಲಾಭವನ್ನು ಗಳಿಸಲು ಅವರಿಗೆ ಅವಕಾಶ ಕಲ್ಪಿಸುತ್ತದೆ.


  ಪ್ಲೇ ಸ್ಟೋರ್‌ನ್ನು ಪ್ರವೇಶಿಸಲು ಆ್ಯಪ್ ಡೆವಲಪರ್‌ಗಳು ಪೇಡ್ ಆ್ಯಪ್‌ಗಳು ಮತ್ತು ಇನ್-ಆ್ಯಪ್ ಖರೀದಿಗಳಿಗಾಗಿ ಜಿಪಿಬಿಎಸ್ (ಗೂಗಲ್ ಪ್ಲೇಸ್ ಬಿಲ್ಲಿಂಗ್ ಸಿಸ್ಟಂ)ನ ಕಡ್ಡಾಯ ಬಳಕೆಯನ್ನು ಅವಲಂಬಿಸುವಂತೆ ಮಾಡಿರುವುದು ಅವರಿಗೆ ಅನ್ಯಾಯದ ಷರತ್ತನ್ನು ವಿಧಿಸುತ್ತದೆ ಎಂದು ಸಿಸಿಐ ತನ್ನ ತೀರ್ಪಿನಲ್ಲಿ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News