ಬ್ರಿಟನ್ ಪ್ರಧಾನಿ ಹುದ್ದೆಗೇರಿದ ಕನ್ನಡಿಗರ ಅಳಿಯ ರಿಷಿ ಸುನಕ್

Update: 2022-10-26 07:05 GMT

ದೀಪಾವಳಿಯ ಶುಭ ಸಂದರ್ಭದಲ್ಲಿ ಭಾರತೀಯರಿಗೆ ಹೀಗೊಂದು ಗುಡ್ ನ್ಯೂಸ್. ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆಗೆ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಅವರ ಕನ್ಸರ್ವೇಟಿವ್ ಪಕ್ಷ ಆಯ್ಕೆ ಮಾಡಿದೆ. ಅಧಿಕಾರಕ್ಕೆ ಬಂದ 45 ದಿನಗಳಲ್ಲೇ ರಾಜೀನಾಮೆ ಪ್ರಕಟಿಸಬೇಕಾದ ಒತ್ತಡಕ್ಕೆ ಸಿಲುಕಿ ಬ್ರಿಟನ್ ಪ್ರಧಾನಿ ಹುದ್ದೆ ಕಳಕೊಂಡ ಲಿಝ್ ಟ್ರಸ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಈ ಕನ್ನಡಿಗರ ಅಳಿಯ. ನೂತನ ಪ್ರಧಾನಿಯಾಗಿ ತನ್ನ ಸರಕಾರ ಮಂಡಿಸಿದ ಮಿನಿ ಬಜೆಟ್‌ನ ತೆರಿಗೆ ಕಡಿತ ಪ್ರಸ್ತಾವಗಳಿಗೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಲಿಝ್ ಟ್ರಸ್ ಪ್ರಧಾನಿ ಹುದ್ದೆ ಬಿಡುವುದು ಅನಿವಾರ್ಯ ವಾಯಿತು. ಪ್ರಧಾನಿ ಹುದ್ದೆಗೆ ಕಳೆದ ಆಗಸ್ಟ್ ನಿಂದ ಸೆಪ್ಟಂಬರ್‌ವರೆಗೆ ನಡೆದ ಪಕ್ಷದ ಆಂತರಿಕ ಸ್ಪರ್ಧೆಯಲ್ಲಿ ಭಾರೀ ಪೈಪೋಟಿಯ ಬಳಿಕ ರಿಷಿ ಸುನಕ್‌ರನ್ನು ಹಿಂದಿಕ್ಕಿ ಲಿಝ್ ಆಯ್ಕೆಯಾಗಿ ದ್ದರು. ಆದರೆ ಒಂದೂವರೆ ತಿಂಗಳ ಅವರ ಅಧಿಕಾರಾವಧಿ ಕೊನೆಗೊಂಡು ಅವರು ಸೋಲಿಸಿದ ರಿಷಿ ಸುನಕ್ ಲಂಡನ್‌ನ ಟೆನ್ ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ತಲುಪಿದ್ದಾರೆ.

ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಆಡಳಿತಕ್ಕಿಂತ ಹೆಚ್ಚು ವಿವಾದಗಳು, ಹಗರಣ ಗಳಿಂದಲೇ ಸದಾ ಸುದ್ದಿಯಲ್ಲಿದ್ದ ಯುನೈಟೆಡ್ ಕಿಂಗ್ ಡಮ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಇದೇ ವರ್ಷ ಜುಲೈ 7 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ಮೂರು ತಿಂಗಳಲ್ಲಿ ಬ್ರಿಟನ್ ಮೂರನೇ ಪ್ರಧಾನ ಮಂತ್ರಿಯನ್ನು ಪಡೆಯುತ್ತಿದೆ.

ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿ ಕೊನೆಗೆ ಅವರ ರಾಜೀನಾಮೆಗೆ ಪರೋಕ್ಷ ಕಾರಣರಾದರು ಎಂದು ಬಿಂಬಿತರಾದ ರಿಷಿ ಸುನಕ್ ಆ ಪ್ರತಿಷ್ಠಿತ ಹುದ್ದೆಗೆ ನಾನೂ ಸ್ಪರ್ಧಿ ಎಂದು ರೆಡಿ ಫಾರ್ ರಿಷಿ ಎಂಬ ಘೋಷಣೆಯೊಂದಿಗೆ ಸ್ಪರ್ಧೆಗೆ ಧುಮುಕಿದ್ದರು. ಪ್ರಾರಂಭದಲ್ಲಿ ಉತ್ತಮ ಮುನ್ನಡೆ ದಾಖಲಿಸಿದ ರಿಷಿಗೆ ಕ್ರಮೇಣ ಪಕ್ಷದೊಳಗೆ ಬೆಂಬಲ ಕಡಿಮೆಯಾಗಿ ಲಿಝ್ ಟ್ರಸ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿ ಪ್ರಧಾನಿ ಹುದ್ದೆ ಪಡೆದರು. ಆದರೆ ಯಾಕೋ ಪ್ರಧಾನಿ ಹುದ್ದೆಗೂ ಲಿಝ್‌ಗೂ ಹೆಚ್ಚು ದಿನ ಕೂಡಿ ಬರಲಿಲ್ಲ. ಹಾಗಾಗಿ ಕೊನೆಗೂ ಒಂದು ಕಾಲದ ಇನ್ವೆಸ್ಟ್ ಮೆಂಟ್ ಬ್ಯಾಂಕರ್ 42 ವರ್ಷ ಪ್ರಾಯದ ರಿಷಿ ಸುನಕ್ ಅವರಿಗೇ ಆ ಪಟ್ಟ ಒಲಿದಿದೆ.

ಭಾರತೀಯ ಮೂಲದವರಾದ ರಿಷಿ ಸುನಕ್ ಭಾರತದ ಇನ್ಫೋಸಿಸ್ ಸ್ಥಾಪಕ, ಕನ್ನಡಿಗ ಎನ್.ಆರ್. ನಾರಾಯಣಮೂರ್ತಿಯವರ ಅಳಿಯ. ಅವರ ಮಗಳು ಅಕ್ಷತಾ ಮೂರ್ತಿಯ ಪತಿ. ಹಾಗಾಗಿ ರಿಷಿ ಬ್ರಿಟನ್ ಪ್ರಧಾನಿಯಾಗುತ್ತಿರುವುದು ಈಗ ಭಾರತೀಯ ರಲ್ಲಿ ಅದರಲ್ಲೂ ವಿಶೇಷವಾಗಿ ಕನ್ನಡಿಗರಲ್ಲಿ ವಿಶೇಷ ಖುಷಿಗೆ ಕಾರಣವಾಗಿದೆ. ಅವರ ಅವಧಿಯಲ್ಲಿ ಭಾರತ - ಬ್ರಿಟನ್ ಸ್ನೇಹ ಸಂಬಂಧ ಇನ್ನಷ್ಟು ಗಟ್ಟಿಯಾಗಬಹುದು ಎಂಬ ನಿರೀಕ್ಷೆಯಿದೆ. ರಿಷಿ ಸುನಕ್ ಅವರ ಶೈಕ್ಷಣಿಕ, ರಾಜಕೀಯ ಸಾಧನೆ ಅಸಾಮಾನ್ಯವಾದುದು. ಒಳಗೊಳಗೆಯೇ ಭಾರೀ ಜನಾಂಗೀಯವಾದಿಯಾಗಿರುವ ಜನರು ಈಗಲೂ ದೊಡ್ಡ ಸಂಖ್ಯೆಯಲ್ಲಿರುವ ದೇಶವೊಂದರ ರಾಜಕೀಯದಲ್ಲಿ, ಅದೂ ಕೂಡಾ ತೀರಾ ಸಂಪ್ರದಾಯ ವಾದಿ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ತಲುಪುವುದು ಎಂದರೆ ದೊಡ್ಡ ಸಾಧನೆಯೇ ಸರಿ. ನಿರ್ಗಮನ ಪ್ರಧಾನಿ ಲಿಝ್ ಸಂಪುಟದಲ್ಲಿ ವಿತ್ತ ಮಂತ್ರಿಯಾಗಿದ್ದ ಕ್ವಾಸಿ ಕ್ವರ್ಟೆಂಗ್ ಅವರು ಬ್ರಿಟನ್‌ನ ಮೊದಲ ಕರಿಯ ಮಂತ್ರಿ ಎಂಬುದನ್ನು ಪರಿಗಣಿಸಿದರೆ, ಸುನಕ್, ಪ್ರೀತಿ ಪಟೇಲ್ ಮುಂತಾದವರ ಸಾಧನೆ ಎಷ್ಟು ದೊಡ್ಡದು ಎಂದು ಅರ್ಥವಾಗುತ್ತದೆ.

ರಿಷಿ ಸುನಕ್ ಅವರು ಬೋರಿಸ್ ಜಾನ್ಸನ್‌ಗೆ ತುಂಬಾ ಹತ್ತಿರ ಇದ್ದವರು. ಹಾಗೆ ನೋಡಿದರೆ, ಸುನಕ್ ಅವರನ್ನು ಗುರುತಿಸಿ, ಹಣಕಾಸು ಸಚಿವಾಲಯದಲ್ಲಿ ರಾಜ್ಯ ಮಂತ್ರಿಗೆ ಸಮನಾದ ಸೆಕ್ರೆಟರಿ ಆಫ್ ದಿ ಎಕ್ಸ್‌ಚೆಕರ್ ಹುದ್ದೆಯಲ್ಲಿದ್ದ ಅವರನ್ನು 2020ರಲ್ಲಿ ಪೂರ್ಣಪ್ರಮಾಣದ ಹಣಕಾಸು ಮಂತ್ರಿ ಮಾಡಿ ಕ್ಯಾಬಿನೆಟ್ ದರ್ಜೆಗೆ ಏರಿಸಿದ್ದು ಇದೇ ಜಾನ್ಸನ್. ಕೋವಿಡ್ ಪಿಡುಗಿನ ವೇಳೆಯಲ್ಲಿ ಜನರಿಗೆ ಮತ್ತು ಉದ್ದಿಮೆಗಳಿಗೆ- ಹಣಕಾಸು ಮಂತ್ರಿಯಾಗಿ- ಹತ್ತಾರು ಬಿಲಿಯನ್ ಪೌಂಡುಗಳ ಸರಕಾರಿ ನೆರವು ಹರಿಸಿದ ಸುನಕ್, ಬ್ರಿಟನ್‌ನಲ್ಲಿ ಮನೆ ಮಾತಾಗಿದ್ದರು. ಅವರ ಜನಪ್ರಿಯತೆ ಉತ್ತುಂಗಕ್ಕೆ ಏರಿತ್ತು. ಅವರ ಕ್ರಮಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸೃಷ್ಟಿಯಾಗುವುದು ತಪ್ಪಿತು ಎಂಬ ಪ್ರಶಂಸೆ ಅವರಿಗೆ ಸಿಕ್ಕಿತು. ಹಳೆಯ ಬ್ರಿಟಿಷ್ ಆಡುಮಾತಿನಂತೆ ಅವರು ಡಿಷೀ ರಿಷಿ ಎಂದರೆ, ಸುಂದರ ರಿಷಿ ಎಂಬ ಅಡ್ಡಹೆಸರಿಗೆ ಪಾತ್ರರಾಗಿದ್ದರು. ಆದರೆ, ಪತ್ನಿ ಅಕ್ಷತಾ ಅವರ ನಾನ್ ಡೊಮೆಸ್ಟಿಕ್ ತೆರಿಗೆ ಸ್ಥಾನಮಾನ ವಿವಾದಕ್ಕೆ ಕಾರಣವಾಗಿತ್ತು. ಅಕ್ಷತಾ ತನ್ನ ಉದ್ಯಮಗಳ ಆದಾಯಕ್ಕೆ ಸ್ವಂತ ದೇಶ ಭಾರತದಲ್ಲಿ ತೆರಿಗೆ ಕಟ್ಟುತ್ತಿರುವುದಾಗಿ ಹೇಳಿದ್ದರು. ಅಲ್ಲದೇ, ಸುನಕ್ ಹಣಕಾಸು ಮಂತ್ರಿ ಆದ ಬಳಿಕವೂ ತಮ್ಮ ಯುಎಸ್‌ಎ ಗ್ರೀನ್ ಕಾರ್ಡ್ ಉಳಿಸಿಕೊಂಡಿದ್ದದ್ದೂ ವಿವಾದವಾಗಿತ್ತು. ಡೌನಿಂಗ್ ಸ್ಟ್ರೀಟ್‌ನ ಪ್ರಧಾನಿ ಕಚೇರಿಯಲ್ಲಿ ಕೋವಿಡ್ ಕಾಲದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕೆ ಅವರಿಗೆ ದಂಡ ವಿಧಿಸಲಾಗಿತ್ತು. ಯುಕ್ರೇನ್ ಯುದ್ಧದ ನಂತರ ಪಾಶ್ಚಾತ್ಯ ದೇಶಗಳು ರಶ್ಯ ವಿರುದ್ಧ ಆರ್ಥಿಕ ದಿಗ್ಬಂಧನ ಘೋಷಿಸಿದರೂ, ತನ್ನ ಮಾವನ ಇನ್ಫೋಸಿಸ್, ರಶ್ಯದೊಂದಿಗೆ ವ್ಯಾಪಾರ ಮುಂದುವರಿಸಿದ್ದ ಕಾರಣದಿಂದಲೂ ಸುನಕ್ ಟೀಕೆಗೆ ಗುರಿಯಾಗಿದ್ದರು. ಬಳಿಕ ರಶ್ಯದ ಜೊತೆಗೆ ವ್ಯವಹಾರ ನಿಲ್ಲಿಸಿರುವುದಾಗಿ ಇನ್ಫೋಸಿಸ್ ಘೋಷಿಸಿತು. ಈ ಎಲ್ಲಾ ಕಾರಣ ಗಳಿಂದ ಅವರ ಜನಪ್ರಿಯತೆ ಕುಸಿದಿತ್ತು. ಅವರು ಜಾನ್ಸನ್ ಅವರನ್ನು ಟೀಕಿಸಿ ರಾಜೀನಾಮೆ ನೀಡಿ ಜಾನ್ಸನ್ ಪ್ರಧಾನಿ ಹುದ್ದೆಯಿಂದ ಇಳಿಯು ವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ಸೃಷ್ಟಿಸಿದ ಬಳಿಕ ಅವರು ಕಳೆದುಕೊಂಡಿದ್ದ ಜನಪ್ರಿಯತೆ ಮತ್ತೆ ಗಳಿಸಿಕೊಂಡರು.

2015ರಲ್ಲಿ ಯಾರ್ಕ್ಸ್ ಅಥವಾ ರಿಚ್‌ಮಂಡ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಜಕೀಯದಲ್ಲಿ ಉಲ್ಕೆಯಂತೆ ಸುನಕ್ ಬೆಳಗಿದರು. ಅವರು ತೆರೇಸಾ ಮೇ ಅವರ ಎರಡನೇ ಸರಕಾರದಲ್ಲಿ ಸ್ಥಳೀಯಾಡಳಿತ ಖಾತೆಯ ಅಧೀನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರೆಕ್ಸಿಟ್ ಕಾಯ್ದೆ ಹಿಂದೆಗೆಯುವ ತೆರೇಸಾ ಮೇಯವರ ಒಪ್ಪಂದದ ಪರ ಅವರು ಮೂರು ಬಾರಿ ಮತ ಚಲಾಯಿಸಿದರು. ಮೇ ರಾಜೀನಾಮೆಯ ಬಳಿಕ ಪಕ್ಷದ ನಾಯಕತ್ವಕ್ಕೆ ಬೋರಿಸ್ ಜಾನ್ಸನ್ ಅವರನ್ನು ಬೆಂಬಲಿ ಸಿದರು. ಜಾನ್ಸನ್ ಪ್ರಧಾನಿಯಾದಾಗ- ಸುನಕ್ ಅವರನ್ನು ಹಣಕಾಸು ಮುಖ್ಯ ಕಾರ್ಯ ದರ್ಶಿಯಾಗಿ ನೇಮಕ ಮಾಡಿದರು. 2020ರಲ್ಲಿ ಸಾಜಿದ್ ಜಾವೇದ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ- ಆ ಸ್ಥಾನಕ್ಕೆ ಸುನಕ್ ಅವರನ್ನೇ ತಂದರು.

ವೈಯಕ್ತಿಕ ಜೀವನ

ಆಗಸ್ಟ್ 2009ರಲ್ಲಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಅವರನ್ನು ಪ್ರೇಮ ವಿವಾಹವಾದರು ರಿಷಿ ಸುನಕ್. ಅಕ್ಷತಾ ಇನ್ಫೋಸಿಸ್‌ನಲ್ಲಿ 0.91 ಶೇಕಡಾ ಶೇರುಗಳನ್ನು ಹೊಂದಿದ್ದು, ಅದರ ಮೌಲ್ಯ 6,500 ಕೋಟಿ ರೂ.ಗಳಿಗಿಂತಲೂ ಹೆಚ್ಚಾಗುತ್ತದೆ. ಅಂದರೆ ನಿಕಟಪೂರ್ವ ಬ್ರಿಟಿಷ್ ರಾಣಿಗಿಂತ ಅಕ್ಷತಾ ಮೂರ್ತಿ ಹೆಚ್ಚು ಶ್ರೀಮಂತರು. ಅಕ್ಷತಾ ಸ್ವತಃ ಫ್ಯಾಷನ್ ಮತ್ತು ಹೊಟೇಲ್ ಮತ್ತಿತರ ಉದ್ದಿಮೆಗಳನ್ನು ಹೊಂದಿದ್ದಾರೆ. ಈ ದಂಪತಿ ಜಂಟಿಯಾಗಿ ಸಂಡೇ ಟೈಮ್ಸ್ ನ 2022ರ ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಬ್ರಿಟನ್‌ನಲ್ಲಿ ಹಲವು ಮನೆಗಳನ್ನು ಹೊಂದಿರುವುದರ ಜೊತೆಗೆ ಕ್ಯಾಲಿಫೋರ್ನಿಯಾದಲ್ಲೂ ಬಂಗಲೆ ಹೊಂದಿದ್ದಾರೆ. ಈ ದಂಪತಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳು. ಬ್ರಿಟನ್‌ನ ಪ್ರಪ್ರಥಮ ಹಿಂದೂ ವಿತ್ತ ಸಚಿವರಾದ ರಿಷಿ ಸುನಕ್ ಸಂಸತ್ ಸದಸ್ಯರಾಗಿ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು.

ಈಗ ಅವರು ಭಾರತವನ್ನು ಆಳಿದ ದೇಶದ ಪ್ರಧಾನಿ ಹುದ್ದೆಗೆ ತಲುಪಿದ್ದಾರೆ. ಬೆಂಗಳೂರಿನ ಅಳಿಯನಾಗಿರುವ ಭಾರತ ಮೂಲದ, ಪ್ರತಿಭಾವಂತ ಯುವ ನಾಯಕರೊಬ್ಬರು ಬ್ರಿಟನ್‌ನ ಪ್ರಧಾನಿಯಾಗಿರುವುದು ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ಕನ್ನಡಿಗರಿಗೆ ಖುಷಿ ತಂದಿದೆ. ಪತ್ನಿ, ಮಕ್ಕಳ ಜೊತೆ ಬೆಂಗಳೂರಿಗೆ ಮಾವನ ಮನೆಗೆ ಬರುತ್ತಿದ್ದ ರಿಷಿ ಸುನಕ್ ಬ್ರಿಟನ್ ದೇಶದ ಪ್ರಧಾನ ಮಂತ್ರಿಯಾಗಿ ಬರುತ್ತಾರೆಂದರೆ ಸಹಜವಾಗಿಯೇ ನಮಗೆ ಸಂತಸದ ವಿಷಯ. ಆದರೆ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಅವರ ಹಾದಿ ಸುಲಭವಿಲ್ಲ. ಹಳಿ ತಪ್ಪಿರುವ ದೇಶದ ಆರ್ಥಿಕತೆಯನ್ನು ಸುಧಾರಿಸುವ ತುರ್ತು ಕೆಲಸ ಆಗಬೇಕಿದೆ. ಪಕ್ಷದೊಳಗೆ ಸದ್ಯಕ್ಕೆ ಇದಕ್ಕಿಂತ ಉತ್ತಮ ಆಯ್ಕೆ ಬೇರೆ ಇಲ್ಲ ಎಂದು ಅವರಿಗೆ ನಾಯಕತ್ವ ಬಿಟ್ಟು ಕೊಡಲಾಗಿದೆ. ಆದರೆ ಜನಾಂಗೀಯವಾದ, ವರ್ಣಭೇದ ಇನ್ನೂ ಆಳವಾಗಿ ಬೇರೂರಿರುವ ಬ್ರಿಟನ್ ರಾಜಕೀಯದಲ್ಲಿ ರಿಷಿಯನ್ನು, ಅವರ ಆಡಳಿತವನ್ನು ಟೀಕಿಸಲು ನೆಪ ಹುಡುಕುವವರು ಅವರ ಪಕ್ಷದೊಳಗೇ ಬೇಕಾದಷ್ಟು ಮಂದಿಯಿದ್ದಾರೆ. ಪ್ರಧಾನಿಯಾದರೂ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ರಿಷಿಗೆ ಇಲ್ಲ ಎಂದು ಸ್ವಪಕ್ಷೀಯರೇ ಗೊಣಗುತ್ತಿದ್ದಾರೆ. ಜೊತೆಗೆ ತನಗೆ ಮೊದಲು ಅವಕಾಶ ಕೊಟ್ಟ ಬೋರಿಸ್ ಜಾನ್ಸನ್‌ಗೇ ತಿರುಗು ಬಾಣವಾದ ರಾಜಕಾರಣಿ ಸುನಕ್ ಎಂಬ ಅಸಹನೆಯೂ ಕನ್ಸರ್ವೇಟಿವ್ ನಾಯಕರಲ್ಲಿದೆ. ವಿಪಕ್ಷ ಲೇಬರ್ ಪಾರ್ಟಿಯಂತೂ ರಿಷಿಗೆ ಜನಾದೇಶವೇ ಇಲ್ಲ, ಅವರ ಆಯ್ಕೆ ದೇಶಕ್ಕೆ ನಾಚಿಕೆಗೇಡು, ಎಂದು ಹೇಳುವ ಮೂಲಕ ಬರುವ ದಿನಗಳ ಮುನ್ಸೂಚನೆ ಕೊಟ್ಟಿದೆ. ಜೊತೆಗೆ ರಿಷಿ ಕುಟುಂಬದ ಭಾರೀ ಸಂಪತ್ತು, ವಿಲಾಸಿ ಜೀವನ ಶೈಲಿ ಬಗ್ಗೆಯೂ ವ್ಯಾಪಕ ಟೀಕೆ, ಅಸಮಾಧಾನ ಇದ್ದೇ ಇದೆ. ಬಡ ಬ್ರಿಟನ್ ಪ್ರಜೆಗಳ ಕಷ್ಟ ಅವರಿಗೆ ಗೊತ್ತಾಗದು ಎಂಬ ಆರೋಪವೂ ಇದೆ.ಹಾಗಾಗಿ ಇನ್ನು ಅವರು ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಜತನದಿಂದ ಇಡಬೇಕಾಗುತ್ತದೆ.

ರಿಷಿ ಸುನಕ್ ಕುಟುಂಬ, ಶೈಕ್ಷಣಿಕ ಹಿನ್ನೆಲೆ 

ಪೂರ್ವ ಆಫ್ರಿಕದಿಂದ ವಲಸೆ ಬಂದಿದ್ದ ಭಾರತೀಯ ಮೂಲದ ದಂಪತಿಯ ಮೂರು ಮಕ್ಕಳಲ್ಲಿ ಮೊದಲ ಮಗನಾದ ರಿಷಿ ಸುನಕ್, ಮೇ 12, 1980ರಲ್ಲಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ಹುಟ್ಟಿದರು. ತಂದೆ ಯಶ್‌ವೀರ್ ಸುನಕ್- ಬ್ರಿಟಿಷ್ ವಸಾಹತಾಗಿದ್ದ ಕೆನ್ಯಾದಲ್ಲಿ ಹುಟ್ಟಿದವರು. ತಾಯಿ ಉಷಾ- ಟಾಂಗನೀಕ ಆಂದರೆ, ಈಗಿನ ತಾಂಜಾನಿಯಾದಲ್ಲಿ ಹುಟ್ಟಿದವರು. ಅವರ ಅಜ್ಜಂದಿರು ಹಿಂದೆಯೇ ಬ್ರಿಟಿಷ್ ಕಾಲದಲ್ಲೇ ಪಂಜಾಬಿನಿಂದ ಪೂರ್ವ ಆಫ್ರಿಕಾಕ್ಕೆ ವಲಸೆ ಹೋಗಿದ್ದು, 1960ರ ದಶಕ ದಲ್ಲಷ್ಟೇ ಬ್ರಿಟನ್‌ನಲ್ಲಿ ನೆಲೆಸಿದರು. ಯಶ್‌ವೀರ್ ವೈದ್ಯರಾಗಿದ್ದು, ಉಷಾ ಸ್ಥಳೀಯ ಮೆಡಿಕಲ್ ಸ್ಟೋರ್ ಹೊಂದಿದ್ದರು.

ರಿಷಿ ಸುನಕ್ ಮೊದಲಿಗೆ ವಿಂಚೆಸ್ಟರ್ ಕಾಲೇಜಿನಲ್ಲಿ, ನಂತರ ಆಕ್ಸ್‌ಫರ್ಡ್ ನ ಲಿಂಕನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಕಲಿತರು. ನಂತರ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಫುಲ್‌ಬ್ರೈಟ್ ಸ್ಕಾಲರ್ ಆಗಿ ಎಂಬಿಎ ಪದವಿ ಪಡೆದರು. ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯ ದಲ್ಲಿಯೇ ಭಾವಿ ಪತ್ನಿ ಅಕ್ಷತಾ ಮೂರ್ತಿಯ ಪರಿಚಯವಾದದ್ದು. ನಂತರ ಖಾಸಗಿ ಗೋಲ್ಡ್ ಮನ್ ಸಾಚ್ಸ್ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ನಂತರ ಎರಡು ಹೆಜ್ ಫಂಡ್ ಗಳಲ್ಲಿ ಪಾಲುದಾರರಾದರು. ಶಾಲೆಯಲ್ಲಿ ಇರುವಾಗ ವಿದ್ಯಾರ್ಥಿ ನಾಯಕನಾಗಿ ಮತ್ತು ಶಾಲೆಯ ಪತ್ರಿಕೆಯ ಸಂಪಾದಕನಾಗಿಯೂ ಇದ್ದರು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News