"ರಿಶಿ ಸುನಕ್‌ ಪ್ರಧಾನಿಯಾಗಿದ್ದರಿಂದ ಬ್ರಿಟನ್‌, ಭಾರತ ಸಹಿತ ವಿಶ್ವದಲ್ಲೇ ಫ್ಯಾಸಿಸಂ ಗಟ್ಟಿಯಾಗಲಿದೆ"

Update: 2022-10-26 17:36 GMT

ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್‌ ಅವರು ಬ್ರಿಟನ್ ನ ನೂತನ ಪ್ರಧಾನಿಯಾಗಿದ್ದು ಭಾರತೀಯರ ಹೆಮ್ಮೆ ಎಂಬಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮೂಲದ ಅಜ್ಜ-ಅಜ್ಜಿಯ ಮೊಮ್ಮಗ ಹಾಗೂ ಆಫ಼್ರಿಕಾ ಮೂಲದ ತಂದೆತಾಯಿಗಳು ಬ್ರಿಟನ್ ಗೆ ವಲಸೆ ಹೋದ ಮೇಲೆ ಹುಟ್ಟಿದ ಯುಕೆ ನಾಗರಿಕ ರಿಶಿಯವರು ನಾರಾಯಣಮೂರ್ತಿಯವರ ಮಗಳನ್ನು ಮದುವೆಯಾಗಿದ್ದಾರೆ ಎನ್ನುವುದನ್ನು ಬಿಟ್ಟರೆ ಅವರಿಗೆ ಭಾರತೀಯ ಮೂಲಗಳು ಎಂದು ಹೇಳಿಕೊಳ್ಳುವಂತಹ ಯಾವುದೇ ಸಂಬಂಧಗಳು ಇಲ್ಲ ಎಂದು South Asia Solidarity Groupʼ ಹೇಳಿಕೆಯಲ್ಲಿ ತಿಳಿಸಿದೆ.
 
ಆದರೆ ರಿಶಿ ಸುನಕ್‌ ಪ್ರಧಾನಿಯಾದ ವಿಷಯದಲ್ಲಿ ಭಾರತೀಯರಲ್ಲಿ ಕೆಲವರು ಹೆಮ್ಮೆ ಪಡುತ್ತಿದ್ದರೆ, ಬ್ರಿಟನ್‌ ನ ಹಲವು ಸಮುದಾಯಗಳು ಆತಂಕ ಪಡುತ್ತಿದೆ. ಬಂಡವಾಳಶಾಹಿ ನಿಯಮಗಳಿಗೆ ಪೂರಕವಾದ ಚಿಂತನೆಗಳಿರುವ ರಿಶಿ ಅವರ ಆಯ್ಕೆಯಿಂದ ನಿಜವಾದ ಕುಶಿ ಪಟ್ಟುಕೊಂಡಿರುವುದು ಕಾರ್ಪೊರೇಟ್ ಶಕ್ತಿಗಳು. ವರದಿಯ ಪ್ರಕಾರ ಬ್ರಿಟನ್ನಿನ ಕೆಳ ಮಧ್ಯಮ ವರ್ಗದ ಜನರು ಹಾಗೂ ಬಿಳಿಯೇತರ ವರ್ಣೀಯರು, ಅಲ್ಪಸಂಖ್ಯಾತರು, ನಿರಾಶ್ರಿತರು, ವಲಸಿಗರು ರಿಶಿ ಆಯ್ಕೆಯಿಂದ ಆತಂಕಿತರಾಗಿದ್ದಾರೆ‌ ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

ಅತ್ಯಂತ ಜನವಿರೋಧಿ ಆರ್ಥಿಕ ಹಾಗೂ ರಾಜಕೀಯ ನೀತಿಗಳ ಪ್ರತಿಪಾದನೆ ಮಾಡುವ ಪ್ರತಿಗಾಮಿ ಕನ್ಸರ್ವೇಟಿವ್‌ ಪಕ್ಷದ ಪ್ರಧಾನಿಯಾಗಿರುವ ರಿಶಿಯ ಬಗ್ಗೆ, ಬ್ರಿಟನ್ ನಲ್ಲಿ ಕಳೆದ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಏಷಿಯಾ ದೇಶಗಳ ಮೂಲದವರ ಸಂಘಟನೆಯಾಗಿರುವ ʼSouth Asia Solidarity Groupʼ (ದಕ್ಷಿಣ ಏಷಿಯ ಸೌಹಾರ್ದ ಸಂಘಟನೆ)  ಪ್ರಕಟನೆಯನ್ನು ಬಿಡುಗಡೆ ಮಾಡಿದೆ.

‌ಲೇಖಕ, ಸಾಮಾಜಿಕ ಹೋರಾಟಗಾರ ಶಿವಸುಂದರ್‌ ರವರು ಸಂಘಟನೆಯ ಪ್ರಕಟನೆಯ ಕನ್ನಡಾನುವಾದ ಮಾಡಿರುವುದು ಇಲ್ಲಿದೆ. 

“ರಿಶಿ ಸುನಕ್‌ ಅವರನ್ನು ಯುನೈಟೆಡ್ ಕಿಂಗ್‌ಡಂನ ಮೊಟ್ಟ ಮೊದಲ ಏಶಿಯನ್ ಪ್ರಧಾನಿ ಎಂದು ಕೊಂಡಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ, ಅವರ ನಿಜವಾದ ಅಸ್ಮಿತೆ ಯಾವುದು? ಅದು ಅವರ ದೇಶೀಯ ಮತ್ತು ವಿದೇಶಿ ನೀತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಿಂಗ್ ಚಾರ್ಲ್ಸ್‌ಗಿಂತ ದುಪ್ಪಟ್ಟು ಶ್ರೀಮಂತನಾಗಿರುವ ರಿಶಿ ಸುನಕ್‌ ಅವರು ಯು.ಕೆಯ ಸಂಸದರಲ್ಲೇ ಅತಿ ಶ್ರೀಮಂತ ಸಂಸದ. ಚಿಕ್ಕಂದಿನಲ್ಲಿ ಅತ್ಯಂತ ದುಬಾರಿ ಖಾಸಗಿ ಶಿಕ್ಷಣವನ್ನು ಪಡೆದುಕೊಂಡ ಅವರು, ಆನಂತರ ಅಕ್ಸ್‌ಫ಼ರ್ಡ್ ಹಾಗೂ ಗೋಲ್ದ್‌ಮಾನ್ ಸಾಶ್ಸ್ ನಲ್ಲಿ ಕಲಿತವರು. ಇವೆಲ್ಲದರಿಂದ ಅವರು ಬ್ರಿಟಿಶ್ ಮೇಲ್ ವರ್ಗಗಳಲ್ಲಿ ಮನೆಮಾಡಿರುವ ದುರಹಂಕಾರಿ ಶ್ರೇಷ್ಟತೆಗಳನ್ನು ಹಾಗೂ ಬಡವರು ಹಾಗೂ ಸವಲತ್ತು ಇಲ್ಲದವರ ಬಗ್ಗೆ ತಿರಸ್ಕಾರ ಹಾಗೂ ದ್ವೇಷಗಳನ್ನು ಹೊಂದಿದ್ದಾರೆ.”
 
“ಹಣಕಾಸಿನ ಕುಸಿತದ ವೇಳೆ ಸರ್ಕಾರದ ಕಠಿಣ ನೀತಿಗಳ ಪರಿಣಾಮವಾಗಿ UKಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದಾಗ ರಿಶಿ ಅವರು ತಮ್ಮ ಅಗಾಧವಾದ ವೈಯಕ್ತಿಕ ಸಂಪತ್ತನ್ನು ಸಂಗ್ರಹಿಸಿದ್ದರು. ಕೋವಿಡ್ ಕಾಲದಲ್ಲಿ ಬ್ರಿಟನ್ ಸರ್ಕಾರದ ಚಾನ್ಸಲರ್ (Chancellor) ಆಗಿದ್ದ ರಿಶಿ ಸುನಕ್‌ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ನಿಭಾಯಿಸಲು ಅತ್ಯಂತ ಬಡಕುಟುಂಬಗಳಿಗೆ ಅನುಕೂಲಕಾರಿಯಾಗಿದ್ದ ಸಾಲ ಯೋಜನೆಯನ್ನು ವಾರಕ್ಕೆ 20 ಪೌಂಡುಗಳಷ್ಟು ಹೆಚ್ಚಿಸುವ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. ಈ ಜುಲೈನಲ್ಲಿ ಈ ಸಾರ್ವತ್ರಿಕ ಸಾಲ ಕಡಿತವನ್ನು ಘೋಷಿಸುವ ವೇಳೆ, ರಿಶಿ ಸುನಕ್‌ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ 2015ರಲ್ಲಿ 1.5 ಮಿಲಿಯನ್ ಪೌಂಡ್ ಕೊಟ್ಟು ಯಾರ್ಕ್ ಶೈರ್ ನಲ್ಲಿ ಖರೀದಿಸಿದ್ದ ಐಶರಾಮಿ ವಿಲ್ಲಾದಲ್ಲಿ ಈಜುಕೊಳ, ಜಿಮ್ ಮತ್ತು ಟೆನ್ನಿಸ್ ಕೋರ್ಟನ್ನು ನಿರ್ಮಿಸುವ ಯೋಜನೆಯಲ್ಲಿ ನಿರತರಾಗಿದ್ದರು. ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಬಿಲಿಯನೇರ್ ನಾರಾಯಣ ಮೂರ್ತಿಯವರ ಮಗಳು ಹಾಗೂ ವ್ಯವಹಾರದಲ್ಲಿ ಗಣನೀಯ ಷೇರುಗಳನ್ನು ಹೊಂದಿದ್ದಾರೆ. 
 
ಆಡಂ ಬೈಶಾಸ್ಕಿ ಯವರು ಬರೆದಂತೆ, 'ದಿ ಸುನಾಕ್ಸ್' ಜಾರ್ಜಿಯನ್ ಮ್ಯಾನ್ಷನ್ ನಲ್ಲಿ ಮ್ಯಾಗ್ನಮ್‌ಗಳಿಂದ ಷಾಂಪೇನ್ ಸುರಿಯುವ ಉತ್ಸಾಹಭರಿತ ಸಿಬ್ಬಂದಿಗಳೊಂದಿಗೆ ಪಾರ್ಟಿಗಳಿಗೆ ಹಾಜರಾಗುವುದನ್ನು ವಿವರಿಸಿದ್ದಾರೆ, ಅದು ಅವರು ಹೊಂದಿರುವ ಏಕೈಕ ಆಸ್ತಿಯಲ್ಲ. ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಅಪಾರ್ಟ್ಮೆಂಟ್, ಪಶ್ಚಿಮ ಲಂಡನ್‌ನ ಕೆನ್ಸಿಂಗ್‌ಟನ್‌ನಲ್ಲಿ ಪೌಂಡ್ ಬೆಲೆಬಾಲುವ ಐಷರಾಮಿ ಬಂಗಲೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಕೇಮ್ಯಾನ್ ಐಲಾಂಡ್‌ ನಲ್ಲಿ ತಮ್ಮ ಅತಿಥಿಗಳಿಗಾಗಿ ಎಂದೇ 5 ಬೆಡ್‌ ರೂಮ್‌ ಗಳ ಬಂಗಲೆಯನ್ನು ಹೊಂದಿದ್ದಾರೆ. 
 
ಅಷ್ಟು ಮಾತ್ರವಲ್ಲ ಈ ಹಿಂದೆ ಲೇಬರ್ ಪಾರ್ಟಿಯು (ಬಹಳಷ್ಟು ಜನ ಏಷಿಯನ್ನರು ಇರುವ) ಸೌಲಭ್ಯವಂಚಿತ ನಗರ ಪ್ರದೇಶಗಳಲ್ಲಿ ಬಡವರಿಗೆಂದು ವಿತರಿಸಿದ್ದ ಸಂಪನ್ಮೂಲಗಳನ್ನು ಕಸಿದುಕೊಂಡು ವಿಲಾಸಿ ವರ್ಗಗಳ ಐಷಾರಾಮಕ್ಕೆ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಮ್ಮ ವರ್ಗಮಿತ್ರರಿಗೆ ಭರವಸೆ ನೀಡಿದ್ದಾರೆ.
 
ಟೋರಿ (ಕನ್ಸರ್ವೇಟಿವ್) ಪಕ್ಷವು ಸಮಾಜದ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ತಮ್ಮ ನಿಲುವಿನ ಬಗ್ಗೆ ಎಷ್ಟೇ ಹೇಳಿಕೊಂಡರೂ ರಿಶಿ ಸುನಕ್‌ ಮಾತ್ರ ಇತರ ವರ್ಣೀಯರ ಸ್ನೇಹಿತರಂತೂ ಅಲ್ಲ. ಕಪ್ಪು ಜನರನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿ ಬ್ರಿಟನ್ನಿನ ಪೊಲೀಸರು ನಡೆಸುವ ಜನಾಂಗೀಯ ಮತ್ತು ಹಿಂಸಾತ್ಮಕ Stop And Search ( ಬೇಕಾಬಿಟ್ಟಿ ತಡೆದು, ಶೋಧಿಸುವ) ನೀತಿಗಳನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ. ರಾಜಕೀಯ ಸರಿತನಗಳು (political correctness) ತನ್ನ ದಾರಿಯನ್ನು ತಡೆಯಲು ಬಿಡುವುದಿಲ್ಲ ಎಂದು ಘೋಷಿಸಿರುವ ರಿಷಿಯವರು, ಮುಸ್ಲಿಮರನ್ನು ವಿನಾಕಾರಣ ನಿಂದಿಸುವ ತೀವ್ರ ಬಲಪಂಥೀಯ ಹೇಳಿಕೆಗಳಾದ "ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮರು" ಎಂಬ ಹೇಳಿಕೆಯನ್ನು ಪದೇಪದೇ ಬಳಸುತ್ತಾರೆ.  
 
ಇದರ ಜೊತೆಗೆ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿರುವ ಹಾಗೂ ತನ್ನ ಇಸ್ಲಾಮೋಫ಼ೋಬಿಕ್ (ಮುಸ್ಲಿಮರನ್ನು ದುರುಳೀಕರಿಸುವ) ಧೋರಣೆಯಿಂದಾಗಿ ತೀವ್ರ ಟೀಕೆಗೊಳಗಾಗಿದ್ದ PREVENT ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಭರವಸೆಯನ್ನೂ ನೀಡಿದ್ದಾರೆ. ಇದು ಬ್ರಿಟನ್‌ನಲ್ಲಿ ಪ್ರಮುಖ ಬೆದರಿಕೆಯಾಗಿರುವ ಬಲಪಂಥೀಯ ಉಗ್ರವಾದವನ್ನು ಗುರಿ ಮಾಡುವುದಿಲ್ಲ.

ಇನ್ನು ನಿರಾಶ್ರಿತ ವಲಸೆಗಾರರ ಪ್ರಶ್ನೆಗೆ ಬರುವುದಾದರೆ, ರಿಶಿ ಸುನಕರ ಪೂರ್ವಜರು ನಿರಾಶ್ರಿತರಾಗಿ ಯುನೈಟೆಡ್ ಕಿಂಗ್‌ಡಂ ಗೆ ಬಂದಿದ್ದರೂ ನಿರಾಶ್ರಿತರನ್ನು ರವಾಂಡಾ ದೇಶದ ಶಿಬಿರಗಳಿಗೆ ಅಟ್ಟಿಬಿಡಬೇಕೆಂಬ ಪ್ರೀತಿ ಪಟೇಲರ ಫ಼್ಯಾಸಿಸ್ಟ್ ನೀತಿಯನ್ನು ಅಪ್ಪಿಕೊಳ್ಳಲು ಅವರು ಉತ್ಸುಕರಾಗಿದ್ದಾರೆ. (ಈ ರವಾಂಡಾ ನೀತಿಯು ದುಬಾರಿಯಾಗಿದ್ದು ಪರಿಣಾಮಕಾರಿಯಾಗಿಲ್ಲವೆಂಬುದು ಈಗಾಗಲೇ ರುಜುವಾತಾಗಿದ್ದರೂ ಸಹ).

ಇದಲ್ಲದೆ ರಿಷಿ ಸುನಕ್‌ ಅವರು ಮೋದಿ ಅಳ್ವಿಕೆಗೆ ಸನಿಹವಾಗಿರುವುದು ಕೂಡ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಹಿಂದೂತ್ವವಾದಿ ಶಕ್ತಿಗಳೊಂದಿಗೆ ಮಿತ್ರತ್ವ ಹೊಂದಿರುವ ಇಸ್ರೇಲಿನೊಂದಿಗೆ ಅವರಿಗಿರುವ ಸ್ನೇಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ರಿಶಿ ಸುನಕ್‌ ಅವರು ಜೆರುಸಲೆಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಜಗತ್ತು ಒಪ್ಪಿಕೊಳ್ಳಬೇಕೆಂಬುದನ್ನು ಬೆಂಬಲಿಸುತ್ತಾರೆ. ಅಲ್ಲದೇ ಇಸ್ರೇಲಿನ ಘಾತುಕತನವನ್ನು ಜಗತ್ತಿನಾದ್ಯಂತ ಬಯಲು ಮಾಡುತ್ತಿರುವ Boycott, Disinvest, Sanction(BDS)- (ಇಸ್ರೇಲನ್ನು-ಬಹಿಷ್ಕರಿಸಿ, ಹೂಡಿಕೆ ಹಿಂತೆಗೆದುಕೊಳ್ಳಿ ಮತ್ತು ನಿರ್ಬಂಧ ವಿಧಿಸಿ) ಚಳವಳಿಯ ಮೇಲೆ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಅವರ ಮಾವ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್‌ಫ಼ೋಸಿಸ್ ಸಂಸ್ಥೆಯು ಇಸ್ರೇಲಿನಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡಿದ್ದು ಅದರ ಸಹ ಉಸ್ತುವಾರಿಯನ್ನು ಇಸ್ರೇಲಿನ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಘಟಕ-8200ರ ಭಾಗವಾಗಿದ್ದ ಉರಿ ಲೆವಿನ್ ನಿರ್ವಹಿಸುತ್ತಾರೆ.

ಮೋದಿ ಸರ್ಕಾರದ ಬಗೆಗಿನ ಯಾವುದೇ ವಿಮರ್ಶೆಯನ್ನು ಅಥವಾ ಬ್ರಿಟನ್ ನಲ್ಲಿರುವ ಹಿಂದುತ್ವ ಫ್ಯಾಸಿಸ್ಟರ ಯಾವುದೇ ಶಾಖೆಗಳ ಮೇಲಿನ ವಿಮರ್ಶೆಯನ್ನು - ಹಿಂದೂಫೋಬಿಯ- ಹಿಂದುಗಳನ್ನು ದುರುಳಿಕರಿಸುವ ತಂತ್ರ ಎಂದು ಪ್ರಚಾರ ಮಾಡುವ ಹಿಂದೂತ್ವ ಫ್ಯಾಸಿಸ್ಟರ ಪ್ರಯತ್ನಗಳನ್ನು ರಿಶಿ ಸುನಕ್‌ ಅವರು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ. ಕಳೆದ ಹಲವಾರು ವರ್ಷಗಳಿಂದ ಹೆಚ್ಚೆಚ್ಚು ಪಾಶ್ಚಿಮಾತ್ಯ ರಾಜಕಾರಣಿಗಳು ಮತ್ತು ವಿಶ್ಲೇಷಕರು ಮೋದಿಯವರ ನರಮೇಧ ನೀತಿಗಳನ್ನು ಟೀಕಿಸುವುದು ಹೆಚ್ಚುತ್ತಿದ್ದಂತೆ ಮೋದಿ ಸರ್ಕಾರದ ವಿದೇಶಿ ಕಚೇರಿಗಳು ಅವನ್ನು ನಗಣ್ಯಗೊಳಿಸುವ ಹತಾಷ ಪ್ರಯತ್ನದಲ್ಲಿ ತೊಡಗಿಕೊಂಡಿವೆ. 
 
ಹಿಂದೂಫ಼ೋಬಿಯಾ- ಹಿಂದು ದುರುಳೀಕರಣ ಎಂಬುದು Black Lives Matter Movement - ಕಪ್ಪು ಜನರ ಜೀವಕ್ಕೂ ಬೆಲೆ ಇದೆ ಎಂಬ ಚಳವಳಿಯನ್ನು ನಗಣ್ಯಗೊಳಿಸಲು ಹುಟ್ಟಿಕೊಂಡ ’ White Lives Matter’- (ಬಿಳಿ ಜೀವಕ್ಕೆ ಬೆಲೆ ಇದೆ) -ಎಂಬ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಬಿಳಿ ದುರಭಿಮಾನಿ ಜನಾಂಗೀಯ ಪ್ರತಿಕ್ರಿಯೆಗೆ ಸಮಾನವಾದದ್ದು ಎಂಬುದನ್ನು ನಾವು ಸೂಚಿಸುತ್ತಲೇ ಬಂದಿದ್ದೇವೆ. ಇದು ತನ್ನಂತೆಯೇ ಒಂದು ನವನಾಝಿ ಚಳವಳಿಯಾಗಿ ಬೆಳೆಯುತ್ತಿದೆ.
 
ಭಾರತದಲ್ಲಿರುವ ಹಿಂದೂ ಬಹುಸಂಖ್ಯಾತರು ಅಲ್ಲಿನ ಅಲ್ಪಸಂಖ್ಯಾತರಿಂದ ಯೋಜಿತ ದಾಳಿಗೆ ತುತ್ತಾಗುತ್ತಿದ್ದಾರೆ ಎಂಬ ಹಿಂದೂಫೋಬಿಯಾದ ತಿಳವಳಿಕೆಯು ಪಾಶ್ಚಿಮಾತ್ಯ ಸಂದರ್ಭದಲ್ಲಿ ಬಿಳಿಯರಿಗೆ ಅನ್ವಯವಾಗುತ್ತದೆ.

ಎರಡನ್ನೂ ಕೂಡ ಅಲ್ಪಸಂಖ್ಯಾತ ಹಾಗೂ ದಮನಿತ ಜನರ ಮೇಲೆ ತಾವು ನಡೆಸುವ ಜನಾಂಗೀಯ ಮತ್ತು ಫ್ಯಾಸಿಸ್ಟ್ ದಾಳಿಗಳ ವಿರುದ್ಧ ನಡೆಯುವ ಪ್ರತಿರೋಧಗಳ ವಿರುದ್ಧ ನೆಪವಾಗಿ ಹಾಗೂ ಪ್ರತಿಕ್ರಿಯೆಯಾಗಿ ಬಳಸಲಾಗುತ್ತದೆ. ಕಳೆದ ತಿಂಗಳು ಲೈಸೆಸ್ಟರ್ ನಲ್ಲಿ ಮುಸುಕು ಧರಿಸಿದ ಸಶಸ್ತ್ರ ಹಿಂದೂತ್ವವಾದಿಗಳು ಏಶಿಯನ್ ಸಮುದಾಯಗಳ ವಸತಿ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರ ಹಿಂದಿನ ಉದ್ದೇಶ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ಹಿಂದೂಫೋಬಿಯಾ ಎಂಬ ಕಥನವನ್ನು ಮತ್ತಷ್ಟು ಗಟ್ಟಿಗೊಳಿಸಿಕೂಳ್ಳುವುದೇ ಆಗಿತ್ತು.ರಿಶಿ ಸುನಕ್‌ ಅವರು ಪ್ರಧಾನಿಯಾಗುವುದರೊಂದಿಗೆ ಈ ಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತಾರೆ. ಅಲ್ಲದೇ ಈ ಬಗೆಯ ಕೋಮುವಾದಿ ಹಿಂಸಾಚಾರವನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇದನ್ನು ತಡೆಗಟ್ಟಲೇಬೇಕು."

ಕೃಪೆ: southasiasolidarity.org, ಶಿವಸುಂದರ್

Writer - ಕನ್ನಡ ಅನುವಾದ: ಶಿವಸುಂದರ್

contributor

Editor - ಕನ್ನಡ ಅನುವಾದ: ಶಿವಸುಂದರ್

contributor

Similar News