ಕೇಜ್ರಿವಾಲ್‌ ʼನೋಟುʼ ಹೇಳಿಕೆ: ಪರೋಕ್ಷವಾಗಿ ಕುಟುಕಿದ ಸಂಗೀತ ನಿರ್ದೇಶಕ ವಿಶಾಲ್‌ ದದ್ಲಾನಿ

Update: 2022-10-27 14:01 GMT

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲಿಗರೂ ಆಗಿರುವ ಗಾಯಕ ಮತ್ತು ಸಂಗೀತ ಸಂಯೋಜಕ ವಿಶಾಲ್ ದಾದ್ಲಾನಿ ಅವರು ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಪರಿಚಯಿಸುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಬೇಡಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಹಾಕುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದು, ದೇವಿಯ ಫೋಟೋಗಳನ್ನು ಮುದ್ರಿಸಿದರೆ 'ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ ಮತ್ತು ಅದರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ' ಎಂದು ಹೇಳಿದ್ದರು.

ಹೊಸ ನೋಟುಗಳು ಒಂದು ಬದಿಯಲ್ಲಿ ಮಹಾತ್ಮ ಗಾಂಧಿ ಮತ್ತು ಇನ್ನೊಂದು ಬದಿಯಲ್ಲಿ ಎರಡು ದೇವತೆಗಳ ಚಿತ್ರವನ್ನು ಹೊಂದಬಹುದು ಎಂದು ಅವರು ಸಲಹೆ ನೀಡಿದ್ದರು. ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾ, ಕರೆನ್ಸಿ ನೋಟಿನಲ್ಲಿ ಗಣೇಶನ ಚಿತ್ರವಿರುವ ಉದಾಹರಣೆಯನ್ನೂ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿಶಾಲ್, "ಭಾರತದ ಸಂವಿಧಾನವು ನಾವು ಜಾತ್ಯತೀತ ಸಮಾಜವಾದಿ ಗಣರಾಜ್ಯ ಎಂದು ಹೇಳುತ್ತದೆ. ಆದ್ದರಿಂದ, ಧರ್ಮವು ಆಡಳಿತದಲ್ಲಿ ಯಾವುದೇ ಸ್ಥಾನವನ್ನು ಹೊಂದಿರಬಾರದು. ಸಂಪೂರ್ಣವಾಗಿ ಸ್ಪಷ್ಟವಾಗಿ ಹೇಳಬೇಕೆಂದರೆ, ಸರ್ಕಾರದ ಯಾವುದೇ ಅಂಶಕ್ಕೆ ಧರ್ಮದ ಯಾವುದೇ ಭಾಗವನ್ನು ತರುವ ಯಾರೊಂದಿಗೂ ನನಗೆ ಯಾವುದೇ ಸಂಬಂಧವಿಲ್ಲ.. ಜೈ ಹಿಂದ್" ಎಂದಿದ್ದಾರೆ.

Similar News