ಮಣಿಪಾಲ: ಚಲಿಸುವ ಕಾರಿನಲ್ಲಿ ಪಟಾಕಿ ಸಿಡಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲು
ಕಾರು ಪೊಲೀಸರ ವಶಕ್ಕೆ
ಉಡುಪಿ, ಅ.27: ಮಣಿಪಾಲದ ಡಾ.ವಿ.ಎಸ್.ಆಚಾರ್ಯ ರಸ್ತೆಯಲ್ಲಿ ಅ.25ರ ರಾತ್ರಿ ಕಾರನ್ನು ನಿರ್ಲಕ್ಷ್ಯದಿಂದ, ಅಪಾಯಕಾರಿ ರೀತಿಯಲ್ಲಿ ಚಲಾಯಿಸುತ್ತಾ, ಕಾರಿನ ಮೇಲ್ಗಡೆ ಪಟಾಕಿ ಇಟ್ಟು ಸಿಡಿಸಿ ಮನುಷ್ಯನ ಪ್ರಾಣಕ್ಕೆ ಅಪಾಯವಾಗುವ ರೀತಿಯ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ಚಾಲಕನನ್ನು 26 ವರ್ಷದ ಯುವಕ ವಿಶಾಲ್ ಕೊಹ್ಲಿ ಎಂದು ಗುರುತಿಸಲಾಗಿದೆ. ಮಣಿಪಾಲದ ವಿ.ಪಿ.ನಗರದಲ್ಲಿ ವಾಸವಾಗಿರುವ ಈತ ಸೆಲೂನ್ ಒಂದರಲ್ಲಿ ಕೆಲಸ ಮಾಡುತಿದ್ದಾನೆ ಎಂದು ತಿಳಿದುಬಂದಿದೆ.
ಅ.25ರ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮ ಮಣಿಪಾಲದ ಡಾ.ವಿ.ಎಸ್.ಆಚಾರ್ಯ ರಸ್ತೆಯಲ್ಲಿ ಕಾರು ನಂ. ಕೆ.ಎ.20 ಎಂ 9232ನ್ನು ಈತ ನಿರ್ಲಕ್ಷ್ಯತನ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಕಾರಿನ ಮೇಲೆ ಪಟಾಕಿ ಇಟ್ಟು ಸಿಡಿಸುತ್ತಾ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದು, ವೈರಲ್ ಆಗಿತ್ತು.
ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರ ಮಾರ್ಗದರ್ಶನದಂತೆ ಮಣಿಪಾಲ ಪೊಲೀಸ್ ಠಾಣಾ ಪಿಎಸ್‌ಐ ರಾಜಶೇಖರ್ ವಂದಲಿ, ಎಎಸ್ಸೈ ಶೈಲೇಶ್ ಕುಮಾರ್ ಹಾಗೂ ಹೆಡ್‌ಕಾನ್‌ಸ್ಟೇಬಲ್ ಪ್ರಸನ್ನ ಅವರು ಸಂಬಂಧಿತ ಕಾರು ಹಾಗೂ ಚಾಲಕ ವಿಶಾಲ್ ಕೊಹ್ಲಿಯನ್ನು ಸಿಂಡಿಕೇಟ್ ವೃತ್ತದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮಣಿಪಾಲ ಪಿಎಸ್‌ಐ ರಾಜಶೇಖರ ವಂದಲಿ ಅವರ ಸ್ವ ದೂರಿನ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.