×
Ad

ಹಾಲಿನ ಖರೀದಿ ಬೆಲೆ ಕನಿಷ್ಠ 10 ರೂ.ಏರಿಕೆಗೆ ಸಿಎಂಗೆ ಮನವಿ

Update: 2022-10-27 19:52 IST

ಉಡುಪಿ, ಅ.27: ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹೈನುಗಾರ ರೈತರಿಂದ ಖರೀದಿಸುವ ಹಾಲಿನ ಖರೀದಿ ದರವನ್ನು ಕನಿಷ್ಠ 10 ರೂಪಾಯಿ ಹೆಚ್ಚಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಸಹಕಾರ ಭಾರತೀಯ ಪದಾಧಿಕಾರಿಗಳು ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿದರು.

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ನಷ್ಟದಲ್ಲಿ ನಡೆಯುತ್ತಿದ್ದು, ಹೈನುಗಾರಿಕೆಗೆ ಅಗತ್ಯವಾದ ಪಶು ಆಹಾರ, ಬೈಹುಲ್ಲು, ಕೆಲಸಗಾರರ ಕೂಲಿ, ಪಶುಗಳಿಗೆ ಬೇಕಾಗುವ ಔಷಧಿ ಇತ್ಯಾದಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರು ವುದು ಕಳವಳಕರ ವಿಷಯವಾಗಿದ್ದು, ಇದರಿಂದ ದೊಡ್ಡ ಸಂಖ್ಯೆಯ ಹೈನುಗಾರರರು ಹೈನುಗಾರಿಕೆಯಿಂದ ವಿಮುಖರಾಗುವಂತೆ ಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದೊಂದು ವರ್ಷದಲ್ಲಿ ಹೆಚ್ಚಿನೆಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಏರಿದ್ದರೂ ಹಾಲಿನ ಬೆಲೆ ಮಾತ್ರ ಏರದಿರುವುದು ವಿಪರ್ಯಾಸ.ಈ ಬಗ್ಗೆ ಹೈನುಗಾರರರು ಹಾಲಿನ ಖರೀದಿ ಬೆಲೆ ಏರಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಆದ್ದರಿಂದ ದೀಪಾವಳಿ ಹಬ್ಬ ಮುಗಿದ ಕೂಡಲೇ ಹಾಲಿನ ಬೆಲೆಯನ್ನು ಕನಿಷ್ಠ 5ರೂ.ನಷ್ಟು ಹೆಚ್ಚಿಸಬೇಕು. ಚುನಾವಣೆ ಮತ್ತಿತರ ಕಾರಣಗಳಿಂದ ಇದು ಅಸಾಧ್ಯವೆಂದಾದಲ್ಲಿ ಪ್ರಸಕ್ತ ಹೈನುಗಾರರಿಗೆ ಸರಕಾರ ನೀಡುತ್ತಿರುವ ಲೀಟರ್ ಒಂದರ ಮೇಲಿನ ಪ್ರೋತ್ಸಾಹ ಧನವನ್ನು ತಕ್ಷಣದಿಂದ ಅನ್ವಯವಾಗುವಂತೆ ೫ರೂ. ಹೆಚ್ಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಅರ್ಪಿಸಿದ ನಿಯೋಗದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್, ಜಿಲ್ಲಾ ಸಂಚಾಲಕ ಕೆ. ಕಮಲಾಕ್ಷ ಹೆಬ್ಬಾರ್, ಸಹಕಾರ ಭಾರತಿ ಮಹಿಳಾ ಪ್ರಮುಖ್ ವಿದ್ಯಾ ಪೈ, ಉಡುಪಿ ತಾಲೂಕು ಅಧ್ಯಕ್ಷ ದಿನೇಶ್ ಹೆಗಡೆ, ಕಾರ್ಕಳ ತಾಲೂಕು ಅಧ್ಯಕ್ಷ ಹರೀಶ್ ಕಲ್ಯಾ ಉಪಸ್ಥಿತರಿದ್ದರು. 

Similar News