×
Ad

ಬಿಹಾರ: ಯುವತಿಯೊಂದಿಗೆ ಪ್ರೇಮ; ನೆಲ ನೆಕ್ಕುವಂತೆ ದಲಿತ ಯುವಕನಿಗೆ ಬಲವಂತ

Update: 2022-10-27 22:40 IST

ಪಾಟ್ನಾ, ಅ. 27: ಯುವತಿಯನ್ನು ಪ್ರೀತಿಸಿದ 22 ವರ್ಷದ ದಲಿತ ಯವಕನನ್ನು ಯುವತಿಯ ಸಮುದಾಯ ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ಬಿಹಾರದ ಸಮಷ್ಠಿಪುರದಲ್ಲಿ  ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಯುವತಿಯನ್ನು ಪ್ರೀತಿಸಿದ ದಲಿತ ಯುವಕ ನೆಲ ನೆಕ್ಕುವಂತೆ ಯುವತಿಯ ಸಮುದಾಯ ಬಲವಂತಪಡಿಸಿದೆ. ಅಲ್ಲದೆ, ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಿದೆ ಎಂದು ಪೊಲೀಸ್ ಅಧೀಕ್ಷಕ ಹೃದಯ್ ಕಾಂತ್ ಅವರು ಹೇಳಿದ್ದಾರೆ. 

‘‘ಈ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಕಳೆದ ವಾರ ಘಟನೆ ನಮ್ಮ ಗಮನಕ್ಕೆ ಬಂತು. ತನಿಖೆ ನಡೆಸಿದಾಗ ಈ ಘಟನೆ ಬಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಕ್ ಹಬೀಬ್ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮದ ಚೌಕಿದಾರರ ಹೇಳಿಕೆಯ ಆಧಾರದಲ್ಲಿ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ’’ ಎಂದು ಕಾಂತ್ ಹೇಳಿದ್ದಾರೆ. 

ಉದಯಪುರ ಮೂಲದ ದಲಿತ ಯುವಕ ಅಕ್ಟೋಬರ್ 21ರಂದು ಚಾಕ್ ಹಬೀಬ್‌ಗೆ ಆಗಮಿಸಿದಾಗ ಘಟನೆ ನಡೆದಿದೆ. ಗ್ರಾಮಸ್ಥರು ಯುವತಿಯೊಂದಿಗೆ ಆತನನ್ನು ಸೆರೆ ಹಿಡಿದಿದ್ದಾರೆ ಹಾಗೂ ಯುವಕ ನೆಲ ನೆಕ್ಕುವಂತೆ ಬಲವಂತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. 
ಈ ಘಟನೆಯಿಂದ ಆಘಾತಗೊಂಡ ದಲಿತ ಯುವಕ ಮನೆಗೆ ಹಿಂದಿರುಗಿಲ್ಲ. ಈ ಹಿನ್ನೆಲೆಯಲ್ಲಿ ಯುವಕನ ಕುಟುಂಬ ನಾಪತ್ತೆ ದೂರು ದಾಖಲಿಸಿದೆ ಎಂದು ಕಾಂತ್ ಹೇಳಿದ್ದಾರೆ.

Similar News