ಅದಾನಿ ಬಂದರು ವಿರುದ್ಧದ ಪ್ರತಿಭಟನೆ 100ನೇ ದಿನಕ್ಕೆ, ದೋಣಿಗೆ ಬೆಂಕಿ

Update: 2022-10-28 02:29 GMT

ತಿರುವನಂತಪುರಂ: ವಿಝಿಂಜಂ ಅಂತರರಾಷ್ಟ್ರೀಯ ಬಂದರನ್ನು (Vizhinjam international seaport) ವಿರೋಧಿಸಿ ಸ್ಥಳೀಯ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಗುರುವಾರ 100ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದಿದೆ. ಮೀನುಗಾರಿಕೆ ದೋಣಿಯೊಂದಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಟ್‍ಗಳನ್ನು ಕಿತ್ತು ಸಮುದ್ರಕ್ಕೆ ಎಸೆದರು.

ಮಹಿಳೆಯರು ಸೇರಿದಂತೆ ನೂರಾರು ಮಂದಿ ಮೀನುಗಾರರು ರಸ್ತೆ ಮತ್ತು ಸಮುದ್ರದ ಮೂಲಕ ಅಗಮಿಸಿ ಪ್ರಾಜೆಕ್ಟ್ ಸ್ಥಳದ ಗೇಟಿನ ಬೀಗ ಮುರಿದು ಘೋಷಣೆಗಳನ್ನು ಕೂಗಿದರು.

ಸ್ಥಳೀಯ ಕರಾವಳಿ ಗ್ರಾಮಗಳಿಂದ ಮಾತ್ರವಲ್ಲದೇ ಅಕ್ಕಪಕ್ಕದ ಸ್ಥಳಗಳಿಂದಲೂ ದೋಣಿಗಳಲ್ಲಿ ಆಗಮಿಸಿದ ಮೀನುಗಾರರು ಪ್ರತಿಭಟನೆಗೆ ಬೆಂಬಲ ನೀಡಿದರು. ಮೀನುಗಾರರ ಭವಿಷ್ಯದ ಬಗ್ಗೆ ಅಧಿಕಾರಿಗಳಿಗೆ ಅರ್ಥ ಮಾಡಿಸಲು ದೋಣಿ ಸುಡುವುದು ಬಿಟ್ಟು ಅನ್ಯ ಮಾರ್ಗ ಇರಲಿಲ್ಲ ಎಂದು ಪ್ರತಿಭಟನಾಕಾರರ ಪೈಕಿ ಒಬ್ಬರು ವಿವರಿಸಿದರು.

"ಕಡಲ ತೀರ ಇಲ್ಲದಿದ್ದರೆ ನಮಗೆ ಜೀವನವೇ ಇಲ್ಲ. ನಮ್ಮ ಜೀವನಾಧಾರಕ್ಕೆ ನಾವು ಬೆಂಕಿ ಹಚ್ಚಿಕೊಂಡಿದ್ದೇವೆ. ಬಂದರು ಕಾರ್ಯಾರಂಭ ಮಾಡಿದರೆ ನಮ್ಮ ದೋಣಿಯನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ" ಎಂದು ಹೇಳಿದರು.

ಮೀನುಗಾರರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಂದರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Similar News