×
Ad

ಸಾಮರಸ್ಯದ ಗೂಡಿಗೆ ಕಿಚ್ಚಿಡುವವರು...

Update: 2022-10-28 14:59 IST

ವಿಶ್ವಸಂಸ್ಥೆಯ ಮಹಾಸಚಿವರಾದ ಮಾನ್ಯ ಆ್ಯಂಟೊನಿಯೊ ಗುಟೆರಸ್ ಅವರ ಈಚೆಗಿನ ಎರಡು ದಿನಗಳ ಭಾರತ ಭೇಟಿಯ ವೇಳೆ, ‘ಜಾಗತಿಕ ಮಾನವ ಹಕ್ಕುಗಳ ದಾಖಲೆ’ಯಂತೆ ನಮ್ಮ ದೇಶದಲ್ಲಿ ಒಂದು ಸಮುದಾಯದ ಜನ ಮತ್ತೊಂದು ಸಮುದಾಯದ ಬಗ್ಗೆ ದ್ವೇಷಪೂರಿತ ಹೇಳಿಕೆ(ಹೇಟ್ ಸ್ಪೀಚ್) ಹಾಗೂ ಪ್ರತಿಹೇಳಿಕೆಗಳಿಂದ ಶಾಂತಿ ಸಾಮರಸ್ಯಗಳಲ್ಲಿ ಸಾತತ್ಯವಾಗಿ ಧಕ್ಕೆ ಬಂದಿರುವುದರ ಬಗ್ಗೆ ಚಿಂತೆ ವ್ಯಕ್ತಪಡಿಸಿ ಶೀಘ್ರ ಅವನ್ನು ನಿಯಂತ್ರಿಸುವ ಕರೆ ಕೊಟ್ಟ ಬೆನ್ನಲ್ಲೇ, ಅಕ್ಟೋಬರ್ ೨೧ರ ಶುಕ್ರವಾರ ಹೇಟ್ ಸ್ಪೀಚ್ ವಿರೋಧ ಬಗೆಗಿನ ಅರ್ಜಿ ಯಾಚಿಕೆಯೊಂದರ ವಿಚಾರಣೆಯ ವೇಳೆ ದೇಶದ ಸರ್ವೋಚ್ಚ ನ್ಯಾಯಾಲಯ ಸ್ವಲ್ಪ ಖಾರವಾಗಿಯೇ ಹೀಗೆ ಪ್ರತಿಕ್ರಿಯಿಸಿದೆ: ‘‘ಇದೀಗ ಇದು ಇಪ್ಪತ್ತೊಂದನೇ ಶತಮಾನ. ಧರ್ಮದ ಹೆಸರಿನಲ್ಲಿ ನಾವೆತ್ತ ಸಾಗುತ್ತಿದ್ದೇವೆ?’’ ಎಂದ ಸುಪ್ರೀಂ ಕೋರ್ಟ್ ಇದನ್ನು ಕೂಡಲೇ ತಹಬಂದಿಗೆ ತರುವಂತೆ ಆಡಳಿತಕ್ಕೆ ನಿರ್ದೇಶವೀಯುತ್ತಾ, ‘‘ವಿಳಂಬವಾದರೆ, ಆಗದೇ ಹೋದರೆ, ನ್ಯಾಯಾಂಗ ನಿಂದನೆಯ ಆಪಾದನೆಗೆ ನೀವು ಗುರಿಯಾಗಬೇಕಾದೀತು. ಧರ್ಮನಿರಪೇಕ್ಷ ದೇಶವೊಂದರಲ್ಲಿ ಹೀಗಾಗುತ್ತಿರುವುದು ಆಘಾತಕಾರೀ..’’ ಎಂದು ಹೇಳಿ, ಯಾರೇ ಇರಲಿ, ಮುಂದೆ ಹೀಗಾದಾಗ ಯಾವುದಕ್ಕೂ ಕಾಯದೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದಿದೆ.

ಸಾಮಾನ್ಯವಾಗಿ ಒಂದು ವಿಚಾರ, ಚಿಂತನೆ ಮತ್ತೊಂದು ಚಿಂತನೆಯೊಂದಿಗೆ ಸಹಕಾರ ಸಹಮತವನ್ನು ನಿರಾಕರಿಸಿದಾಗ ಸಮಸ್ಯೆ ತಲೆದೋರುತ್ತದೆ, ದೂಷಣೆ ಚರ್ಚೆಗಳು ಆರಂಭವಾಗಿ ರಂಗೇರುತ್ತದೆ, ಸಂಘರ್ಷಗಳು ಸಿಡಿಯುತ್ತವೆ. ಮಾನವ ಸಹಜ ಪ್ರವೃತ್ತಿಗಳಂತೆ- ಅದು ಯಾವುದೇ ಎರಡು ಬಣ, ಜಾತಿ, ಧರ್ಮದ ನಡುವೆ ಉಂಟಾಗಬಹುದಾದರೂ ಬಹುತೇಕವಾಗಿ, ಅದರಲ್ಲಿ ಸಮಾವೇಶಗೊಂಡಿರುವ ವ್ಯಕ್ತಿ ‘ನಮ್ಮ ಜಾತಿ ಯಾ ಧರ್ಮ’ದವನೇ ಎಂಬ ಪೂರ್ವಾಗ್ರಹದ ಮೇಲೆ ಅದರ ಉತ್ಕಟತೆ ಮತ್ತು ತೀವ್ರತೆ ಮುಂತಾದುವು ನಿರ್ಧರಿತವಾಗುತ್ತವೆ ಎನ್ನುವುದು ಮಾನವಸಮಾಜ ಇತಿಹಾಸದಲ್ಲಿನ ದುರಂತಗಳು. ಆ ಮೇಲಿನ ಸ್ಥಾನ ಅಹಂ, ಅಧಿಕಾರದಾಹ, ಮತಾಂಧತೆ ನ್ಯಾಯಭ್ರಷ್ಟತೆ ಇತ್ಯಾದಿಗಳಿಗೆ!

ಭಾರತದಲ್ಲಿ ಅನೇಕ ಕಾರಣಗಳಿಂದಾಗಿ ಮಾನವತೆ, ಕಾನೂನಿನ ಎಚ್ಚರದ ಬಗೆಗಿನ ಕೊರತೆ ಸುತ್ತೆಲ್ಲ ಕಾಣಬರುತ್ತಿದೆ. ಹಾಗೆಂದು ಇದೇ ಭಾರತೀಯರು ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಆಫ್ರಿಕ ಅಥವಾ ದುಬೈಯಂತಹ ದೇಶಗಳಲ್ಲಿ ವಾಸವಿರುವಾಗ ಮಾತ್ರ ತಮ್ಮ ಮಧ್ಯೆಯಿರುವ ಧಾರ್ಮಿಕ ಮತಭೇದಗಳನ್ನು ಬದಿಗಿಟ್ಟು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಆ ದೇಶಗಳ ನೀತಿ ನಿಯಮಾವಳಿಗಳನ್ನು ಪಾಲಿಸುವುದು ಕಂಡುಬರುತ್ತದೆ. ಉದಾಹರಣೆಗೆ ಹಿಂದೂಗಳು ಬೇರೆ ದೇಶದಲ್ಲಿನ ನಿಯಮಾವಳಿಗೆ ತಲೆಬಾಗಿ ಸ್ಥಾನೀಯರೊಂದಿಗೆ ಸಾಮರಸ್ಯದಿಂದಿದ್ದು ತಂತಮ್ಮ ಕ್ಷೇತ್ರಗಳಲ್ಲಿ ಉನ್ನತಿಗೇರಿರುವುದನ್ನು ನಾವು ನೋಡಬಹುದಾಗಿದೆ. ಜಗದಗಲದಲ್ಲಿ ಸ್ಥಳಾಂತರಗೊಂಡ ಭಾರತ ಮೂಲದವರು ಹಲವು ಕಡೆ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಮುಖ್ಯ ಸ್ಥಾನಮಾನಗಳನ್ನು ದೊರಕಿಸಿಕೊಂಡಿದ್ದಾರೆ. ಉದಾಹರಣೆಗೆ ಪಿಚೈ, ನಾದೆಳ್ಳ, ಮುಂತಾದವರು... ಅಲ್ಲದೆ ಈಗ ಕಮಲಾ ಹ್ಯಾರಿಸ್, ರಿಷಿ ಸುನಕ್ ಮುಂತಾದವರು ರಾಜಕೀಯವಾಗಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಜಾಹೀರಾಗಿ ಅಲ್ಲವಾದರೂ, ಹೊರದೇಶಗಳಲ್ಲಿ ಈ ಬಗೆಯ ಒಂದು ಜನಾಂಗದ ಪ್ರಗತಿ ಮತ್ತೊಂದು ದೇಶದ ಜನರಲ್ಲಿ-ಸ್ಥಾನೀಯರಲ್ಲಿ ಅಸೂಯೆ, ಅಸ್ವಸ್ಥತೆ ಉಂಟುಮಾಡಬಹುದು. ಹೊರಗಿನವರ ಸಂಖ್ಯೆ, ಪ್ರಭಾವ, ರಟ್ಟೆಬಲ ಹೆಚ್ಚಾದಾಗ ತಮ್ಮ ಅಸ್ತಿತ್ವಕ್ಕೆ, ಆರ್ಥಿಕ-ಸಾಂಸ್ಕೃತಿಕ -ರಾಜಕೀಯ ಧಾರ್ಮಿಕ ಏಕತೆಗೆ ಭಂಗ ಬಂದೀತೆಂಬ ಭಯ ಕಾಡಬಹುದು. ಆದರೆ ಒಳಗಿನವರ ಜೊತೆಯೇ ಅಸಹನೆ ಸರಿಯೇ?

ಈ ನೆಲದ ಕಾನೂನು ಮತ್ತು ಮಾನವತೆಯನ್ನು ಬದಿಗಿಟ್ಟು ‘ನಾವಾಡಿದ್ದೇ ಮಾತು, ಮಾಡಿದ್ದೇ ಕಾನೂನು’ ಎಂಬ ಬಹುಸಂಖ್ಯಾತರ ಅಹಂಕಾರ, ಅವರ ಭುಜಶಕ್ತಿಗೆ ಸದಾ ಅಸುರಕ್ಷಿತತೆಯ ಭಾವದಿಂದ ಬದುಕಿ ಆಗಾಗ ಕೋಪದಿಂದ ಸಿಡಿದೆದ್ದು ಸಾರ್ವಜನಿಕವಾಗಿ ತೋರುವ ಅಲ್ಪಸಂಖ್ಯಾತರ ಪ್ರತಿರೋಧ, ಬಂಡು ಇತ್ಯಾದಿಗಳು ಇಂದಿನ ಸ್ಥಿತಿಗೆ ಕಾರಣವಾಗಿದೆ. ಒಂದು ಸಾಮಾನ್ಯ ಘಟನೆಯನ್ನು ಇಂದಿನ ವೇಗದ ಪ್ರಸಾರ ಮಾಧ್ಯಮಗಳು ‘ತಾನು ಮೊದಲು’ ಎಂಬ ಭರಾಟೆಯಲ್ಲಿ ಸತ್ಯಾಸತ್ಯತೆಯ ಬಗೆಗೆ ವಿಚಾರ ಮಾಡದೆ, ರುಚಿಗೆ ಒಂದಿಷ್ಟು ಉಪ್ಪುಖಾರ ಮಸಾಲೆಗಳನ್ನು ಸೇರಿಸಿ ಕ್ಷಣದಲ್ಲಿ ಊದಿಬಿಡುವುದರಿಂದ ಈಗಿನ ಒತ್ತಡದ ಜೀವನಕ್ರಮದಿಂದ ಆ ಕ್ಷಣ ವಿವೇಕಶೂನ್ಯತೆಗೊಳಗಾಗುವ ಜನ ರೊಚ್ಚಿಗೆದ್ದು ರೋಸಿ ತೀಕ್ಷ್ಣವಾದ-ಪ್ರತಿವಾದದಿಂದ ಹಿಂಸೆಗೆ ತೊಡಗುತ್ತಾರೆ. ಜಾತಿ-ಧರ್ಮಗಳೊಳಗೆ ಅಸಹನೆ ಬಿರುಕುಗಳುಂಟಾಗುತ್ತವೆ. ಅಖಂಡತೆ ಸಹೋದರ ಭಾವನೆಗಳಿಗೆ ಕುತ್ತು ಬರುತ್ತದೆ. ಇಂತಹವುಗಳಿಗಾಗಿಯೇ ಕಾಯುವ ಸಮಾಜಕಂಟಕರು, ಮುಖವಾಡ ತೊಟ್ಟ ಕೆಲವು ರಾಜಕೀಯ ನೇತಾರರು ಮಧ್ಯೆ ತೂರಿಬಂದು ಏನೇನೆಲ್ಲ ಬಹುರೂಪೀ ಪ್ರದರ್ಶನವೀಯುತ್ತಾ ರಕ್ಷಕನಂತೆ ನಟಿಸಿ ನಂಬಿಸುತ್ತಾರೆ, ಲಾಭ ಪಡೆಯುತ್ತಾರೆ. 

ಒಂದು ಪ್ರಾಂತ, ದೇಶದ ವಿಭಿನ್ನ ಪಂಗಡ ಗುಂಪುಗಳ ಜನಾಂಗೀಯ ಇತಿಹಾಸ, ಗುರುಪರಂಪರೆ, ಸಂಸ್ಕೃತಿ, ಶಿಕ್ಷಣ ಪದ್ಧತಿ, ಜಾತಿ-ಧರ್ಮಗಳ ಬಗೆಗಿನ ಮತಾಂಧತೆ ಮೌಢ್ಯತೆಗಳು, ಅಂಧಾನುಕರಣೆಗಳು ಯಾವುದೇ ಸಮಯದಲ್ಲಿ ಯಾವುದೇ ದೇಶದ ಅಖಂಡಭಾವ ಸಾಮರಸ್ಯದ ಸ್ಥಿತಿಗತಿಗಳನ್ನು ನಿರ್ಧರಿಸುತ್ತವೆ ಅನ್ನುವುದನ್ನು ನಾವು ಸದಾ ನೆನಪಿಡಬೇಕಿದೆ.

Similar News