‘ನೀರು ಪೂರೈಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮವಿಲ್ಲ’
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೋಟ್ಯಂತರ ರೂ. ಖರ್ಚು
‘ಒಂದು ಹನಿ ನೀರು ಸರಬರಾಜಾಗಿಲ್ಲ’
ಕೆಲವು ದಶಕಗಳಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯಕ್ಕಾಗಿ ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳು ವಾರ್ಷಿಕವಾಗಿ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ರಾಜ್ಯ ಸರಕಾರವು ಸಾಕಷ್ಟು ಹಣವನ್ನು ವ್ಯಯ ಮಾಡಿದೆ.ಕೋಟ್ಯಂತರ ರೂ. ಖರ್ಚು ಮಾಡಿದರೂ ಉದ್ದೇಶವು ಈಡೇರಿಲ್ಲ. ಒಂದೊಂದು ಬಹುಗ್ರಾಮ ಕುಡಿಯುವ ನೀರಿನ ಒಂದೊಂದು ಯೋಜನೆಗೆ ಕನಿಷ್ಠ 10 ಕೋಟಿ ರೂ.ಗೂ ಮಿಗಿಲಾಗಿ ಹಣವನ್ನು ತೊಡಗಿಸಲಾಗಿತ್ತು. ಆದರೆ ಈ ಯೋಜನೆಗಳಿಗೆ ಅಗತ್ಯವಿರುವ ಪಂಪ್‌ಲೈನ್ ಜೋಡಣೆಯಾಗಿದೆ. ಆದರೆ, ಈ ಬಹುಗ್ರಾಮ ಯೋಜನೆಗಳಿಂದ ಇದುವರೆಗೂ ಒಂದು ಹನಿ ಕುಡಿಯುವ ನೀರನ್ನು ಸರಬರಾಜು ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ’’the-file.in’’ಗೆ ಪ್ರತಿಕ್ರಿಯಿಸಿದರು.
ಬೆಂಗಳೂರು, ಅ.28: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಂಸ್ಕರಿಸಲಾದ ನೀರನ್ನು ಗುರುತ್ವಾಕರ್ಷಣೆ ಮೂಲಕ ಹರಿಸುವ ಯೋಜನೆಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಗ್ರಾಮಗಳಿಗೆ ನೀರು ಪೂರೈಕೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಮೀನಮೇಷ ಎಣಿಸುತ್ತಿದೆ.
ಉಪ ವಿಭಾಗದ ಮುಖ್ಯಸ್ಥರು ಮತ್ತು ವಿಭಾಗದ ಮುಖ್ಯಸ್ಥರ ಮೂಲಕವೇ ಈ ಯೋಜನೆಯ ಅನುಷ್ಠಾನವು ನಡೆಯಬೇಕಿದ್ದರೂ ಸಹ ಇವರಿಗಿಂತ ಕೆಳದರ್ಜೆಯ ಅಧಿಕಾರಿ, ನೌಕರರು ನಿಭಾಯಿಸಿರುವ ಕಾರಣ ಬಾಗಲಕೋಟೆ ಜಿಲ್ಲೆಯೊಂದರ 13 ಗ್ರಾಮಗಳೊಂದರಲ್ಲೇ 1.50 ಕೋಟಿ ರೂ. ಆರ್ಥಿಕ ಹೊರೆಯುಂಟಾಗಿದೆ.
ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದ ಅಧಿಕಾರಿಗಳ ವಿರುದ್ಧ ನಡೆದಿದ್ದ ಇಲಾಖೆ ವಿಚಾರಣೆಯಲ್ಲಿ ಆರೋಪವು ಸಾಬೀತಾಗಿದೆ. ಆದರೂ ಸರಕಾರವು ದೋಷಾರೋಪ ಜಾರಿಯಲ್ಲಿಯೇ ಕಾಲಹರಣ ಮಾಡಿ ಸಕಾಲದಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಆರೋಪಿತ ಅಧಿಕಾರಿಗಳು ಯಾವುದೇ ಶಿಸ್ತು ಕ್ರಮವನ್ನು ಅನುಭವಿಸದೆಯೇ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅಲ್ಲದೆ ಇಂತಹ ಅಧಿಕಾರಿಗಳಿಂದ ಹಣವನ್ನು ವಸೂಲು ಮಾಡುವಲ್ಲಿಯೂ ವಿಫಲರಾಗುತ್ತಿರುವುದು ಇದೀಗ ಬಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನಿಯರ್‌ಗಳಿಗೆ ಹಲವು ಪತ್ರಗಳನ್ನು ಬರೆಯುತ್ತಲೇ ಇದೆ. ಆದರೂ ಯಾವ ಕ್ರಮವೂ ಜರುಗಿಲ್ಲ ಎಂದು ತಿಳಿದು ಬಂದಿದೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಕಟೆಗೇರಿ ಮತ್ತಿತರ 13 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಸಂಸ್ಕರಿಸಲಾದ ನೀರನ್ನು ಗುರುತ್ವಾಕರ್ಷಣೆ ಮೂಲಕ ಹರಿಸುವ ಕಾಮಗಾರಿಗೆ ಮಂಜೂರಾಗಿದ್ದ ಸಂಪೂರ್ಣ ಅನುದಾನ ವೆಚ್ಚವಾಗಿತ್ತು. ಆದರೆ, ಯೋಜನೆ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳಿಗೆ ನೀರನ್ನು ಒದಗಿಸುವಲ್ಲಿ ಕಿರಿಯ ಇಂಜಿನಿಯರ್‌ಗಳು ವಿಫಲರಾಗಿದ್ದರು. ಈ ಸಂಬಂಧ ಕ್ರಮಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಯೋಜನೆಯ ಮುಖ್ಯ ಇಂಜನಿಯರ್‌ಗೆ 2022ರ ಜೂನ್ 27ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ''the-file.in'' ಗೆ ಲಭ್ಯವಾಗಿದೆ.
ಬಾದಾಮಿ ತಾಲೂಕಿನಲ್ಲಿ ಯೋಜನೆ ಅನುಷ್ಠಾನದಲ್ಲಿ ವಿಫಲರಾಗಿದ್ದ ಕಿರಿಯ ಇಂಜಿನಿಯರ್‌ಗಳಾದ ಎಂ.ಆರ್.ಚಿತ್ತರಗಬಿ, ಎಂ.ಎಚ್.ತೋಟಗೇರ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು. ಇದರಲ್ಲಿ ಭಾಗಿ ಆಗಿದ್ದ ಕೆಲವು ಇಂಜಿನಿಯರ್‌ಗಳು, ಅಧಿಕಾರಿಗಳು ಮತ್ತು ನೌಕರರು ಸೇವೆಯಿಂದಲೇ ನಿವೃತ್ತರಾಗಿದ್ದಾರೆ. ಅಲ್ಲದೆ ಈ ಪ್ರಕರಣವು 2011ಕ್ಕೂ ಹೆಚ್ಚು ಪೂರ್ವದಲ್ಲಿ ನಡೆದ ಘಟನೆಯಾದ ಕಾರಣ ಅವರುಗಳ ವಿರುದ್ಧ ಇಲಾಖೆ ವಿಚಾರಣೆಯನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬ ಸಂಗತಿಯು ಪತ್ರದಿಂದ ತಿಳಿದು ಬಂದಿದೆ.
ಪ್ರಕರಣದ ವಿವರ: ಬಾದಾಮಿ ತಾಲೂಕಿನ ಕಟಗೇರಿ ಮತ್ತು ಇತರ 13 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 7.21 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಗುತ್ತಿಗೆದಾರರು ನಿರ್ಮಿಸಿದ್ದ ಎಂಬಿಟಿ ಗ್ರೌಂಡ್ ಲೆವೆಲ್ 598.48 ಇತ್ತು. ಅನುಮೋದಿತ ವಿನ್ಯಾಸಕ್ಕಿಂತ 26.52 ಮೀಟರ್‌ನಷ್ಟು ಕಡಿಮೆ ಇತ್ತು ಹಾಗೂ ವಿನ್ಯಾಸದಲ್ಲಿ ನಿಗದಿಪಡಿಸಿದ್ದ ಎತ್ತರಕ್ಕಿಂತ 29 ಮೀಟರ್ ಕೆಳಮಟ್ಟದಲ್ಲಿ ನಿರ್ಮಾಣವಾಗಿತ್ತು. ವಿನ್ಯಾಸದಲ್ಲಿನ ಇಂತಹ ವ್ಯತ್ಯಾಸದಿಂದಾಗಿ 14 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಿನಿಂದ ವಂಚಿತವಾಗಿತ್ತು ಎಂಬ ಸಂಗತಿಯು ಪತ್ರದಿಂದ ಗೊತ್ತಾಗಿದೆ.
ಕಾಮಗಾರಿಯನ್ನು ಮಂಜೂರಾದ ಅಂದಾಜಿನ ಅನುಸಾರ ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಕಾಮಗಾರಿಯನ್ನು ಪುನಃ ಅಭಿವೃದ್ಧಿಪಡಿಸಲು 1.50 ಕೋಟಿ ರೂ. ಅನುದಾನ ವೆಚ್ಚವಾಗಿತ್ತು.ಇದು ಆರ್ಥಿಕ ನಷ್ಟ ಎಂದು ಆರೋಪಣೆ ಪಟ್ಟಿಯಲ್ಲಿ ನಮೂದಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ನೌಕರರು ಸಂಪೂರ್ಣ ಜವಾಬ್ದಾರರಾಗಿದ್ದರು. ಹಾಗೆಯೇ ಕಾಮಗಾರಿಯ ಅನುಷ್ಠಾನದ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ಪೈಕಿ ಅತೀ ಕಡಿಮೆ ದರ್ಜೆಯ ನೌಕರರಿದ್ದರು.
ಕಾಮಗಾರಿಗಳ ಅನುಷ್ಠಾನದ ಸ್ಥಳ ಗುರುತಿಸುವ ಜವಾಬ್ದಾರಿಯು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ವಿಭಾಗದ ಇಂಜಿನಿಯರ್‌ಗಳ ಮೇಲೆ ಇದೆ. ಈ ರೀತಿ ಸ್ಥಳ ನಿಗದಿಪಡಿಸುವುದು ಮತ್ತು ಕಾಮಗಾರಿಯು ಮಂಜೂರಾದ ಅಂದಾಜು ಮತ್ತು ವಿನ್ಯಾಸದ ಅನುಸಾರ ಪೂರ್ಣಗೊಂಡಿದೆಯೇ ಇಲ್ಲವೇ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸುವ ಜವಾಬ್ದಾರಿಯು ಕಿರಿಯ ಇಂಜಿನಿಯರ್‌ಗಳಿಗಿಂತಉಪ ವಿಭಾಗದ ಮುಖ್ಯಸ್ಥರು ಮತ್ತು ವಿಭಾಗದ ಮುಖ್ಯಸ್ಥರ ಮೇಲೂ ಇರುತ್ತದೆ. ಆದರೆ ಕೆಳ ದರ್ಜೆ ಅಧಿಕಾರಿ, ನೌಕರರಿಂದ ಈ ಕಾಮಗಾರಿಯು ನಡೆದು 1.50 ಕೋಟಿ ರೂ. ಆರ್ಥಿಕ ಹೊರೆಗೆ ಕಾರಣರಾಗಿದ್ದಾರೆ ಎಂಬ ಅಂಶವು ಪತ್ರದಿಂದ ತಿಳಿದು ಬಂದಿದೆ.