×
Ad

ಆಹಾರ ಮತ್ತು ಅಸ್ಪೃಶ್ಯತೆ

Update: 2022-10-29 11:29 IST

ವಿವಿಧ ಜಾನಪದ ಅಧ್ಯಯನಗಳಲ್ಲಿ ಕಾಣುವ ಮಾಂಸಾಹಾರದ ಬಗ್ಗೆ ಬಳಕೆಗೆ ಬಂದ ಕಟ್ಟಲೆಗಳು, ಈ ಪೂರ್ವಾಗ್ರಹಗಳು ಕಳೆದ ವಿವಿಧ ರೂಪಗಳನ್ನು ತಿಳಿಸುತ್ತವೆ. ವಾರದಲ್ಲಿ ಕೆಲ ದಿನಗಳು ದೇವರ ವಾರಗಳು, ಆ ದಿನಗಳಲ್ಲಿ ಮಾಂಸಾಹಾರ ನಿಷಿದ್ಧವೆಂಬ ನಂಬಿಕೆ ವ್ಯಾಪಕವಾಗಿದೆ. ಇದೇ ರೀತಿಯ ಕಟ್ಟಲೆಯ ಮತ್ತೊಂದು ರೂಪವಾಗಿ ಹಬ್ಬಗಳ ದಿನಗಳಲ್ಲಿ ಮಾಂಸಾಹಾರ ನಿಷೇಧವಾಗಿದೆ. ಯುಗಾದಿಯಂತಹ ಹಬ್ಬಗಳಲ್ಲಿ ಬೆೇಟೆ ಒಂದು ಮುಖ್ಯ ಅಂಗವೆಂದು ಜಾನಪದ ಅಧ್ಯಯನಗಳು ಹೇಳುತ್ತವೆ. ಆದರೂ ಇಂದು ಹಬ್ಬದ ದಿನ ಸಿಹಿ, ಅಡುಗೆಗಳಿಗೆ ಸೀಮಿತವಾಗಿದೆ.

ವಚನ ಚಳುವಳಿಗೆ ಮೊದಲಿನ ಕಾಲದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲರೂ ಮಾಂಸಾಹಾರಿಗಳಾಗಿದ್ದರು. ಬುಡಕಟ್ಟು ಮೂಲದ ಪರಿಸ್ಥಿತಿಯಲ್ಲಿ ಇವರೆಲ್ಲರೂ ವಿವಿಧ ಪ್ರಾಣಿ-ಪಕ್ಷಿಗಳನ್ನು ಆಹಾರವಾಗಿ ತಿನ್ನುತ್ತಿದ್ದರು. ಶಿಲಾಯುಗಗಳ ವಿವಿಧ ಹಂತಗಳಲ್ಲಿ ಅವುಗಳಲ್ಲಿ ಇತಿಹಾಸ ಪೂರ್ವ ಕಾಲಕ್ಕೆ ಸೇರುವ ಬೃಹತ್ ಶಿಲಾಯುಗ ಮತ್ತು ಕಬ್ಬಿಣ ಯುಗಗಳ ಬಗ್ಗೆ ಕೈಗೊಂಡಿರುವ ಶೋಧಗಳು ಅವರು ತಿನ್ನುತ್ತಿದ್ದ ಮಾಂಸಾಹಾರದ ವಿವರಗಳನ್ನು ನೀಡುತ್ತವೆ. ಅವು ವಿವಿಧ ರೀತಿಯ ದನಗಳು, ಕಾಡೆಮ್ಮೆ, ಕೋಣಗಳು, ಜಿಂಕೆ-ಸಾರಂಗಗಳು, ಹಂದಿ, ವಿವಿಧ ರೀತಿಯ ಹಲ್ಲಿ, ಉಡಗಳು, ಆಮೆ, ಮೀನುಗಳು ಹಾಗೂ ಪಕ್ಷಿಗಳು ಅವರ ಆಹಾರವಾಗಿದ್ದವು. ಕೃಷಿ ಆರಂಭಗೊಂಡ ನಂತರವೂ ಈ ಮಾಂಸಾಹಾರಗಳನ್ನು ಅವರು ತಿನ್ನುತ್ತಿದ್ದುದನ್ನು ಈ ಸಂಶೋಧನೆಗಳು ಹೇಳುತ್ತವೆ. (ರವಿ ಕೋರಿಶೆಟ್ಟರ್, ಕರ್ನಾಟಕ ಚರಿತ್ರೆ ಸಂಪುಟ. 1.)

ನಂತರದ ದಿನಗಳಲ್ಲಿ ಕೃಷಿಯಾಧಾರಿತ ಆಹಾರ ಹೆಚ್ಚಾಯಿತು. ಆದರೆ ಜೊತೆ ಜೊತೆಗೆ ಪಶು ಸಂಗೋಪನೆಯನ್ನೂ ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡ ಸಮುದಾಯಗಳೂ ಇದ್ದವು. ಕೃಷಿಯ ಅಗತ್ಯಗಳಿಗಾಗಿ ಹಾಗೂ ಕೃಷಿಯ ಉಪ ಉತ್ಪನ್ನಗಳಾದ ಹುಲ್ಲು ಹೊಟ್ಟುಗಳನ್ನು ಬಳಸಿಕೊಳ್ಳಲು ರೈತಾಪೀ ಜನರೂ ಸೀಮಿತ ಪಶುಸಂಗೋಪನೆಯಲ್ಲಿ ತೊಡಗುತ್ತಿದ್ದರು. ರೈತರಾದ ಶೂದ್ರರು ತಾವು ಬೆಳೆಗಳನ್ನು ಬೆಳೆದರೂ ಅವುಗಳ ಗಣನೀಯ ಪಾಲನ್ನು ಕಂದಾಯವಾಗಿ ಕೊಡಬೇಕಾಗಿತ್ತು, ಜೊತೆಗೆ ಹಲವು ರೀತಿಯ ತೆರಿಗೆಗಳನ್ನು, ಗೊಬ್ಬರಗಳ ತಿಪ್ಪೆಯ ಮೇಲೆ ಕೂಡ ತೆರಿಗೆ ನೀಡಬೇಕಾಗುತ್ತಿತ್ತು. ಸಂತೆಗೊಯ್ದ ಫಸಲುಗಳ ಮೇಲೆ ಮತ್ತು ಇತರ ಹಲವಾರು ರೀತಿಯ ತೆರಿಗೆಗಳನ್ನು ನೀಡಬೇಕಾಗಿತ್ತು. ಇವುಗಳು ಎಷ್ಟು ಭಾರವಾಗಿರುತ್ತಿತ್ತೆಂದರೆ ರಾಜರಿಗೆ ತೆರಿಗೆಗಳನ್ನು ಕಡಿಮೆ ಮಾಡಲು ಬೇಡಿಕೊಳ್ಳುವ ಪರಿಸ್ಥಿತಿ ಇರುತ್ತಿತ್ತು. ಕೆಲವೊಮ್ಮೆ ಈ ತೆರಿಗೆಗಳ ಭಾರ ಸಹಿಸಲಾಗದೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಂಭವಗಳೂ ಇರುತ್ತಿತ್ತು. ಈ ತೆರಿಗೆಗಳ ಜೊತೆಗೆ ಗೇಣಿದಾರ ರೈತರು ಬೆಳೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಗೇಣಿಯಾಗಿ ತಮ್ಮ ಭೂ ಒಡೆಯರಿಗೆ ನೀಡಬೇಕಾಗಿತ್ತು. ಬರಗಾಲಗಳಲ್ಲಿ ಬೆಳೆಯಾಗದೆ ಇದ್ದರೂ ಕಂದಾಯ, ಇತರ ತೆರಿಗೆಗಳು, ಗೇಣಿ ಇವೆಲ್ಲವನ್ನು ಪೂರೈಸಬೇಕಾದ ಸಂದರ್ಭ ಅವರನ್ನು ಹಣ್ಣು ಹಣ್ಣು ಮಾಡುತ್ತಿತ್ತು. ಇವೆಲ್ಲಾ ಒಂದು ಕಡೆಯಾದರೆ ಕೃಷಿಯ ಶ್ರಮದ ದುಡಿಮೆಯ ಜೊತೆಗೆ ಆಗಾಗ ಗಾವುಂಡರಿಂದ ರಾಜರವರೆಗೂ ವಿವಿಧ ಹಂತದ ಅಧಿಕಾರಿಗಳ ಅಗತ್ಯಗಳನ್ನು, ಯುದ್ಧಕಾಲದ ಸೈನ್ಯದ ಅಗತ್ಯಗಳನ್ನು ಪೂರೈಸಲು ಬಿಟ್ಟಿ ದುಡಿಮೆ ಅವರ ಶ್ರಮವನ್ನು ಹೆಚ್ಚಿಸುತ್ತಿತ್ತು. ಅದಕ್ಕಾಗಿ ಹೆಚ್ಚು ಪೋಷಕಾಂಶದ ಆಹಾರದ ಅಗತ್ಯವೂ ಇತ್ತು. ಈ ಎಲ್ಲ ಕಾರಣಗಳಿಂದ ಶೂದ್ರರೂ ಮಾಂಸಾಹಾರವನ್ನು ಅವಲಂಬಿಸಿದ್ದರು. ಸಾಕು ಪ್ರಾಣಿಗಳಲ್ಲದೆ ಬೇಟೆಯಾಡಿಯೂ ಕಾಡಿನ ಪ್ರಾಣಿಗಳನ್ನೂ ಆಹಾರವಾಗಿ ಬಳಸುತ್ತಿದ್ದರು. ರೈತರಲ್ಲದ ಭೂರಹಿತ ಕುಶಲಕರ್ಮಿ ಶೂದ್ರರು ಸ್ವಂತ ಬೆಳೆಯೂ ಇಲ್ಲದೆ ರೈತರು ವರ್ಷಕ್ಕೊಮ್ಮೆ ನೀಡುವ ಸೀಮಿತ ಆಯವನ್ನು ಅವಲಂಬಿಸಿಯೇ ಬದುಕಬೇಕಾಗಿತ್ತು. ಅದೂ ಮಳೆಯನ್ನವಲಂಬಿಸಿದ ಬೆಳೆಯ ಒಂದು ಸಣ್ಣ ಪಾಲಾಗಿದ್ದುದರಿಂದ ಸೀಮಿತವಾಗಿತ್ತು. ಈ ಕಾರಣದಿಂದಾಗಿ ಮತ್ತು ಕುಶಲ ಕರ್ಮಿಗಳ ಕಠಿಣ ದುಡಿಮೆಯಿಂದಾಗಿ ಬೇಟೆ ಮೊದಲಾದ ಮೂಲಗಳಿಂದ ಮಾಂಸಾಹಾರ ಅನಿವಾರ್ಯವಾಗಿತ್ತು.

 ಆದರೆ ಕಾಲಕ್ರಮೇಣ ಕೃಷಿ ಕೈಗೊಂಡು ನೆಲೆಗೊಂಡ ಸಮಾಜಗಳಲ್ಲಿ ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು ಎಂಬ ಪೂರ್ವಗ್ರಹಗಳನ್ನು ಬೆಳೆಸಲಾಯಿತು. ವಿವಿಧ ಜಾನಪದ ಅಧ್ಯಯನಗಳಲ್ಲಿ ಕಾಣುವ ಮಾಂಸಾಹಾರದ ಬಗ್ಗೆ ಬಳಕೆಗೆ ಬಂದ ಕಟ್ಟಲೆಗಳು, ಈ ಪೂರ್ವಾಗ್ರಹಗಳು ಕಳೆದ ವಿವಿಧ ರೂಪಗಳನ್ನು ತಿಳಿಸುತ್ತವೆ. ವಾರದಲ್ಲಿ ಕೆಲ ದಿನಗಳು ದೇವರ ವಾರಗಳು, ಆ ದಿನಗಳಲ್ಲಿ ಮಾಂಸಾಹಾರ ನಿಷಿದ್ಧವೆಂಬ ನಂಬಿಕೆ ವ್ಯಾಪಕವಾಗಿದೆ. ಇದೇ ರೀತಿಯ ಕಟ್ಟಲೆಯ ಮತ್ತೊಂದು ರೂಪವಾಗಿ ಹಬ್ಬಗಳ ದಿನಗಳಲ್ಲಿ ಮಾಂಸಾಹಾರ ನಿಷೇಧವಾಗಿದೆ. ಯುಗಾದಿಯಂತಹ ಹಬ್ಬಗಳಲ್ಲಿ ಬೆೇಟೆ ಒಂದು ಮುಖ್ಯ ಅಂಗವೆಂದು ಜಾನಪದ ಅಧ್ಯಯನಗಳು ಹೇಳುತ್ತವೆ. ಆದರೂ ಇಂದು ಹಬ್ಬದ ದಿನ ಸಿಹಿ, ಅಡುಗೆಗಳಿಗೆ ಸೀಮಿತವಾಗಿದೆ. ಆ ದಿನ ಮಾಂಸಾಹಾರ ನಿಷೇಧಿತವಾಗಿ ವರುಷದೊಡಕು ಎಂದು ಕರೆಯಲ್ಪಡುತ್ತಿರುವ ಆಚರಣೆ ಮರುದಿನಕ್ಕೆ ಮುಂದೂಡಲ್ಪಟ್ಟಿದೆ. ಇತರ ಹಬ್ಬದ ದಿನಗಳಲ್ಲಿಯೂ ಸಸ್ಯಾಹಾರವೇ ಶ್ರೇಷ್ಠ ಮತ್ತು ಮಾಂಸಾಹಾರ ಕರಿ ಎಂದು ಕರೆಯಲಾಗುವ ಮರುದಿನಕ್ಕೆ ಸೀಮಿತವಾಗಿದೆ. ಮದುವೆ, ನಾಮಕರಣ ಇತ್ಯಾದಿ ಶುಭ ಕೆಲಸಗಳ ಸಂದರ್ಭದಲ್ಲಿಯೂ ಮಾಂಸಾಹಾರ ವರ್ಜ್ಯವಾಗಿದೆ. ಈ ಸಂದರ್ಭಗಳು ಸ್ನಾನ, ಮಡಿ, ದೇವರ ಪೂಜೆ, ದೇವಸ್ಥಾನಗಳ ಭೇಟಿ, ಬ್ರಾಹ್ಮಣರ ನೇತೃತದ ಆಚರಣೆಗಳಿಗೆ ಸಂಬಂಧಿಸಲ್ಪಟ್ಟವುಗಳೆಂಬುದನ್ನು ಗಮನಿಸಬೇಕು. ದೇವಸ್ಥಾನಗಳಿಗೆ ಹೋಗಬೇಕಾದರೆ ಮಾಂಸಾಹಾರ ವರ್ಜ್ಯ. ಅದೇ ರೀತಿಯಲ್ಲಿ ಮನೆಯ ಒಳಗೆ ಮಾಂಸದ ಅಡುಗೆ ಮಾಡಬಾರದು, ಮಾಂಸಾಹಾರದ ಊಟ ಕೂಡ ಮನೆಯ ಹೊರಗೆ ಮಾಡಬೇಕೆಂಬ ಕಟ್ಟಲೆಗಳು ಕೂಡ ಇವೆ. ಇದೂ ಮಾಂಸಾಹಾರ ತಿಂದ ಮೇಲೆ ದೇವಸ್ಥಾನದ ಒಳಗೆ ಪ್ರವೇಶಿಸಬಾರದು ಎಂಬ ಕಟ್ಟಲೆಯ ವಿಸ್ತರಣೆಯಾಗಿದೆ. ಹೀಗೆ ಮಾಂಸಾಹಾರವನ್ನು ಕೀಳ್ಗೆಳೆಯುವ ಕಟ್ಟಲೆಗಳನ್ನು ದೇವರು, ಧಾರ್ಮಿಕ ಆಚರಣೆಗಳ ಭಾಗವಾಗಿಸಿದ್ದು ಮಾಂಸಹಾರಿಗಳನ್ನೂ ಕೀಳ್ಗೆಳೆಯುವ ಸಾಧನವಾಗಿದೆ. ಮಾಂಸಾಹಾರಿಗಳನ್ನು ಶೂದ್ರ ಅಥವಾ ಅದಕ್ಕಿಂತ ಕೀಳು ಎಂದು ಪರಿಗಣಿಸುವ ನಿಕಷವಾಗಿದೆ. ಅಷ್ಟೇ ಅಲ್ಲದೆ ಮಾಂಸಾಹಾರಿಗಳ ಒಳಗೆ ಕೂಡ ಮೇಲು ಕೀಳು ವಿಭಜನೆಯನ್ನು ಮಾಡುವ ಸಾಧನ ಕೂಡಾ ಆಗಿದೆ. ಆಹಾರಕ್ಕಾಗಿ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾದ ಸಮುದಾಯಗಳಿಗೆ ಒಂದು ಕಡೆ ಸಸ್ಯಾಹಾರದ ಲಭ್ಯತೆ ಹೆಚ್ಚಾಯಿತು. ಪಶುಸಂಗೋಪನೆಯಿಂದಾಗಿ ಮಾಂಸಾಹಾರಕ್ಕಾಗಿ ಕೂಡಾ ಶ್ರಮಪೂರಿತ ಮತ್ತು ಅನಿಶ್ಚಿತವಾದ ಬೇಟೆಯಲ್ಲಿ ತೊಡಗಬೇಕಾದ ಅಗತ್ಯ ನಿವಾರಣೆಯಾಯಿತು. ಈ ಪರಿಸ್ಥಿತಿಯಲ್ಲಿ ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲಿಯೇ ಶ್ರೇಷ್ಠ ಕನಿಷ್ಠ, ಪವಿತ್ರ-ಅಪವಿತ್ರ ಎಂಬ ಭಾವನೆಗಳನ್ನು ಬೆಳೆಸಲಾಯಿತು. ಸಾಕು ಪ್ರಾಣಿಗಳಾದ ಕೋಳಿ, ಕುರಿ, ಮೇಕೆಗಳು ಮಾಂಸಾಹಾರಗಳಲ್ಲಿಯೇ ಶ್ರೇಷ್ಠ, ಕೃಷಿಗೆ ಅಗತ್ಯವಾದ ಹಸು, ಎತ್ತುಗಳು ಪೂಜ್ಯ ಆದ್ದರಿಂದ ಅವುಗಳನ್ನು ಆಹಾರಕ್ಕಾಗಿ ಬಲಿಕೊಡುವುದು ಪಾಪಕರ ಎಂಬ ಭಾವನೆಗಳನ್ನು ಬಿತ್ತಲಾಯಿತು. ವೈದಿಕ ಮೂಲದ ಗೋವು ಪೂಜ್ಯ ಎಂಬ ಭಾವನೆಯಂತೂ ಸಾವಿರಾರು ಶಾಸನಗಳಲ್ಲಿನ ಶಾಪಾಶಯಗಳ ಅನಿವಾರ್ಯ ಭಾಗವಾಗಿದೆ. ಇವುಗಳನ್ನು ಹೊರತುಪಡಿಸಿದ ವೈವಿಧ್ಯಮಯವಾದ ಪ್ರಾಣಿಗಳನ್ನು ಆಹಾರವನ್ನಾಗಿ ಬಳಸುವುದು ಮತ್ತು ಬಳಸುವವರು ಕೀಳು ಎಂಬ ಭಾವನೆಯನ್ನು ವ್ಯಾಪಕಗೊಳಿಸಲಾಯಿತು. ಇದು ಮಾಂಸಾಹಾರಿಗಳಲ್ಲಿಯೇ ಕೆಲವರು ಉಳಿದವರಿಗಿಂತ ಮೇಲು ಎಂದು ಬಿಂಬಿಸಲು ಕಾರಣವಾಯಿತು. ತಾವು ಅಸ್ಪೃಶ್ಯರಂತೆ ಕೀಳಲ್ಲ ಎಂದು ಗಣಿಸಲ್ಪಡಲೆಂದೇ ಹಲವು ಸಮುದಾಯಗಳು ಮುಖ್ಯವಾಗಿ ಸಸ್ಯಾಹಾರ ಹೆಚ್ಚು ಲಭ್ಯವಾಗದ ಭೂಹೀನ ಕುಶಲ ಕರ್ಮಿಗಳು ಕೂಡಾ ಕೆಲವು ಪ್ರಾಣಿಗಳ ಮಾಂಸವನ್ನು ಬಳಸುವುದನ್ನು ಕೈಬಿಡುವ ಒತ್ತಾಯಕ್ಕೊಳಗಾಗಿವೆ.

 ತೊತ್ತುಗಳು, ಕೂಲಿಕಾರರು ಮತ್ತು ಇತರ ಕೀಳೆಂದು ಪರಿಗಣಿಸಲ್ಪಟ್ಟ ಚರ್ಮಕಾರ ಮೊದಲಾದ ಕುಶಲ ಕರ್ಮಿಗಳಾಗಿದ್ದ ಭೂಹೀನ ಅಸ್ಪಶ್ಯರಿಗೆ ದುಡಿಮೆ ಹೆಚ್ಚು ಮತ್ತು ಭೂ ಒಡೆಯರು ಮತ್ತು ರೈತರ ಮನೆಯಲ್ಲಿ ಉಳಿದ ತಂಗಳು, ಹಳಸಿದ ಆಹಾರಕ್ಕೇ ಬಹಳಷ್ಟು ದಿನಗಳು ಸೀಮಿತ. ಒಡೆಯರ ಪ್ರೀತಿಗೆ ಪಾತ್ರರಾಗಿದ್ದ ಕೆಲ ಭಂಟರ ಹೊರತಾಗಿ, ಸ್ವಂತ ಭೂಮಿ ಇಲ್ಲದ ಮತ್ತು ಪ್ರಾಣಿಗಳನ್ನು ಸಾಕಲೂ ಗುಡಿಸಲುಗಳ ಬಳಿ ಸ್ಥಳಾವಕಾಶವೂ ಇಲ್ಲದ ಇವರ ಆಹಾರದ ಅಗತ್ಯಗಳನ್ನು ಪೂರೈಸಲು ಪಡುತ್ತಿದ್ದ ಕಷ್ಟಗಳ ಪರಿಯನ್ನು ಯಾವ ರಾಜ ಶಾಸನಗಳೂ ಅಥವಾ ಸಾಹಿತ್ಯಕ ಆಕರಗಳೂ ವಿವರಿಸದಿರುವುದರಿಂದ ಊಹಿಸಿಕೊಳ್ಳಬೇಕಷ್ಟೆ. ಕೃಷಿಗೊಂಡ ಬಯಲು ಪ್ರದೇಶಗಳಲ್ಲಿ ಅರಣ್ಯಗಳೂ ಸೀಮಿತವಾದ್ದರಿಂದ ಬೇಟೆಯಿಂದ ಆಹಾರ ದೊರಕುವುದು ಕಠಿಣವಾಗುತ್ತಿತ್ತು. ಬೇಟೆಯ ಮೇಲೆ ಕೂಡ ಸ್ಥಳೀಯ ಅಧಿಕಾರಿಗಳು, ಭೂ ಒಡೆಯರು ಹಕ್ಕು ಚಲಾಯಿಸುತ್ತಿದ್ದರು. ಆದ್ದರಿಂದ ಇವರು ಹಂದಿ, ಇಲಿ, ಮೊಲ, ಅಳಿಲು, ಉಡ, ವಿವಿಧ ಹಾವುಗಳು, ಕಾಡು ಹಕ್ಕಿಗಳು ಮೊದಲಾದವುಗಳ ಮೇಲೆ ಅವಲಂಬಿಸಬೇಕಾಗುತ್ತಿತ್ತು. ಕೇವಲ ಕೆಲ ಸೀಮಿತ ಸಂಖ್ಯೆಯ ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಅವಲಂಬಿಸಿದ ಬ್ರಾಹ್ಮಣ ಮತ್ತು ಶೂದ್ರರ ಆಹಾರಕ್ಕೆ ಹೋಲಿಸಿದರೆ ಇವರ ಆಹಾರದ ಬುಟ್ಟಿ ವೈವಿಧ್ಯಮಯವಾದ ನೂರಾರು ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿತ್ತು. ಬುಡಕಟ್ಟು ಮೂಲದ ಆಹಾರವನ್ನು ಅವರು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಅಸ್ಪಶ್ಯರ ಬದುಕನ್ನು ಆವರಿಸಿತ್ತು. ಈ ಸಣ್ಣ ಪ್ರಾಣಿಗಳು ಕೆಲ ಜನರಿಗೆ ಮಾತ್ರ ಬಹಳ ಸೀಮಿತವಾದ ಆಹಾರವನ್ನಷ್ಟೇ ಒದಗಿಸುತ್ತಿತ್ತು. ಆದ್ದರಿಂದ ನವಶಿಲಾಯುಗ, ಬೃಹತ್ ಶಿಲಾಯುಗದಲ್ಲಿಯೂ ಕೂಡ ಬುಡಕಟ್ಟುಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಆನೆ, ಕಾಡೆಮ್ಮೆ, ದನಗಳು, ಜಿಂಕೆ, ಸಾರಂಗ ಮೊದಲಾದ ದೊಡ್ಡ ಪ್ರಾಣಿಗಳನ್ನು ಒಟ್ಟಾಗಿ ಬೇಟೆಯಾಡುತ್ತಿದ್ದರು ಮತ್ತು ಬೇಟೆ ಸಿಕ್ಕ ನಂತರ ಎಲ್ಲರೂ ಸೇರಿ ಕೂಡಿ ಹಬ್ಬದಂತೆ ಆಚರಿಸಿ ತಿನ್ನುತ್ತಿದ್ದರು, ಕುಡಿದು, ಹಾಡಿ, ಕುಣಿದು ಸಂತೋಷ ಪಡುತ್ತಿದ್ದರು. ಇಂತಹ ಆಚರಣೆಗಳ ಅವಶೇಷಗಳು ವೇದಕಾಲೀನ ಯಜ್ಞ ಯಾಗಗಳಲ್ಲಿಯೂ ಉಳಿದುಕೊಂಡಿವೆ. ನಾಗರಿಕರೆನಿಸಿಕೊಂಡ ಇತರ ಸಮುದಾಯಗಳು ಇಂತಹ ಬದುಕಿನಿಂದ ದೂರ ಸಾಗಿ ರಾಜನ್ಯರು ಮಾತ್ರ ಆಚರಿಸಲಾಗುವ ವೈಭವೋಪೇತ ಅಶ್ವಮೇಧ, ವಾಜಪೇಯ ಯಾಗಳನ್ನಾಗಿಸಿದರು. ಇಂದು ಆ ನೆನಪನ್ನೂ ಅಳಿಸಿಹಾಕಲು ಇನ್ನಿಲ್ಲದ ಪ್ರಯತ್ನಗಳನ್ನು ಪಡುತ್ತಿದ್ದಾರೆ, ಅಸ್ಪೃಶ್ಯ ಸಮುದಾಯಗಳು ತಮ್ಮ ಜೀವನ ಸ್ಥಿತಿಯಿಂದಾಗಿ ಅವುಗಳನ್ನು ಬಹುಕಾಲ ಉಳಿಸಿಕೊಂಡಿದ್ದಾರೆ. ಇಂತಹ ಬೃಹತ್ ಪ್ರಾಣಿಗಳನ್ನು ಎಲ್ಲರೂ ಕೂಡಿ ತಿನ್ನುವುದು ಅವರ ಸಾಮುದಾಯಿಕ ಬದುಕಿನ ಭಾಗವಾಗಿತ್ತು. ಆದರೆ ಕೃಷಿಯ ವಿಸ್ತರಣೆ ಮತ್ತು ಅರಣ್ಯ ನಾಶದ ನಂತರ ಇಂತಹ ಪ್ರಾಣಿಗಳು ಬೇಟೆಯಾಗಿ ದೊರಕುವ ಅವಕಾಶಗಳು ಮಲೆನಾಡಿನ ಹೊರತಾಗಿ ಬಯಲು ಪ್ರದೇಶಗಳಲ್ಲಿ ತಪ್ಪಿ ಹೋದವು. ಭೂ ಹೀನರಾಗಿರಿಸಲ್ಪಟ್ಟ ಅಸ್ಪಶ್ಯರಿಗೆ ಎಮ್ಮೆ, ದನಗಳನ್ನು ಸಾಕುವ ಅವಕಾಶವೂ ಬಹುಮಟ್ಟಿಗೆ ಇಲ್ಲದಾಯಿತು. (ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹಸುಗಳ ಮತ್ತು ಎಮ್ಮೆಗಳ ಮಾಂಸದ ತಳಿಗಳ ಬೆಳವಣಿಗೆಯಾಗಲೇ ಇಲ್ಲವೆಂಬುದನ್ನು ಗಮನಿಸಬೇಕು.) ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರು ಗೋಮಾಂಸ ಭಕ್ಷಣೆಯ ನಿಷೇಧವೇ ಅಸ್ಪಶ್ಯತೆಯ ಆರಂಭದ ನಿರ್ಣಾಯಕ ಎಂದು ಗುರುತಿಸುತ್ತಾರೆ. ಗೋವಧೆ ನಿಷೇಧದ ನಂತರವೂ ಗೋಮಾಂಸ ಸೇವನೆಯನ್ನು ಮುಂದುವರಿಸಿದವರು ಅನಿವಾರ್ಯವಾಗಿ ಸತ್ತ ದನಗಳನ್ನು ತಿನ್ನಬೇಕಾಯಿತು. ಇಂತಹವರನ್ನು ಅಸ್ಪಶ್ಯರೆಂದು ಪರಿಗಣಿಸಲಾರಂಭವಾಯಿತೆಂದು ಅವರ ಅಭಿಪ್ರಾಯದ ಮತಿತಾರ್ಥ, ಗುಪ್ತರ ಕಾಲದಲ್ಲಿ ಬೌದ್ಧ ಧರ್ಮವನ್ನು ಹಿಂದೂಡಿ ಮತ್ತೆ ವೈದಿಕ ಧರ್ಮಕ್ಕೆ ಲಭಿಸಿದ ರಾಜ ಮನ್ನಣೆಯ ಫಲವಾಗಿ ಈ ಕಟ್ಟಲೆ ಆರಂಭವಾಗಿರಬಹುದು. ಆದ್ದರಿಂದ ಕ್ರಿ.ಶ. ನಾಲ್ಕನೇ ಶತಮಾನದಿಂದ ಅಸ್ಪೃಶ್ಯತೆ ಆರಂಭವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಗೋವಧೆ ನಿಷೇಧದ ಬಗೆಗಂತೂ ಸಾವಿರಾರು ಶಾಸನಗಳಲ್ಲಿನ ಶಾಪಾಶಯಗಳು ನಿಚ್ಚಳವಾಗಿ ಸಾರುತ್ತವೆ. ಒಡೆಯರ ಮನೆಗಳಲ್ಲಿ ಅಸ್ಪೃಶ್ಯರೇ ಸಾಕುವ ಹಾಗೂ ಇತರ ರೈತರ ಮನೆಗಳ ದನ, ಎಮ್ಮೆಗಳು ಸತ್ತ ಮೇಲೆ ಮಾತ್ರ ಇವರಿಗೆ ಲಭ್ಯ. ಹಸಿವನ್ನು ನೀಗಿಸಿ ಕೊಳ್ಳಲು ಮತ್ತು ತಮ್ಮ ದುಡಿಮೆಗೆ ಅವಶ್ಯವಾದ ಪೋಷಕಾಂಶಗಳನ್ನು ದೊರಕಿಸಿಕೊಳ್ಳಲು ಇವರು ಪಡುತ್ತಿದ್ದ ಪರಿಪಾಟಲು ಎಂತಹದ್ದೆಂದು ಅರಿವಾಗಬಹುದು. ಇಂತಹ ಪರಿಸ್ಥಿತಿಗೆ ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳಬಹುದಾದ ಕೃಷಿ ಭೂಮಿಯ ಒಡೆತನ ನಿರಾಕರಿಸಿದ್ದು ಒಂದು ಕಾರಣ, ಅಷ್ಟೇ ಅಲ್ಲದೇ ಕನಿಷ್ಠ ಅವಶ್ಯಕತೆಗಳನ್ನೂ ಪೂರೈಸುವಂತಹ ಎಮ್ಮೆ, ದನಗಳನ್ನು ಸಾಕಲು ಅಗತ್ಯವಾದ ಕನಿಷ್ಠ ಉದ್ದಗಲಗಳ ಮನೆಗಳನ್ನು ಕೂಡ ಕಟ್ಟಿಕೊಳ್ಳಲು ಕೂಡ ಅವಕಾಶ ನೀಡದ ವಸತಿ ನಿರಾಕರಣೆಯೇ ಮೂಲವೆಂಬುದನ್ನು ನಾವು ಕಾಣಬೇಕಾಗಿದೆ. ಇಂತಹ ಅನಿವಾರ್ಯತೆಯಲ್ಲಿ ಸತ್ತ ದನಗಳ ಮಾಂಸವನ್ನು ತಿನ್ನಲಾರಂಭಿಸಿದುದನ್ನೇ ಇವರನ್ನು ಅಸ್ಪಶ್ಯರೆಂದು ಕೀಳ್ಗೆಳೆಯಲು ಬಳಸಿಕೊಳ್ಳಲಾಯಿತು.

ಮಾಂಸಾಹಾರಿಗಳು ಕೀಳು ಎಂಬ ವರ್ಗೀಕರಣ ಕೇವಲ ಮನುಷ್ಯರಿಗೆ ಮಾತ್ರವಲ್ಲ ದೇವತೆಗಳಿಗೂ ಅನ್ವಯಿಸಿತು. ಬುಡಕಟ್ಟು ಮೂಲದ ಪ್ರಾಚೀನ ಕಾಲದಿಂದ ಪ್ರಾಣಿ ಬಲಿ, ಮಾಂಸದ ಎಡೆ ನೀಡಲಾಗುತ್ತಿದ್ದ ದೇವತೆಗಳು ಕೂಡ ಕೀಳು, ಕೀಳು ಜನರ ದೈವಗಳು ಎಂದು ಪರಿಗಣಿಸಲ್ಪಟ್ಟವು. ಅವುಗಳಲ್ಲಿಯೂ ಕೂಡ ಎರಡು ವರ್ಗಗಳು- ಕುರಿ, ಆಡು, ಕೋಳಿಗಳನ್ನು ಬಲಿ ನೀಡಲಾಗುವ ದೇವತೆ, ದೇವರುಗಳು ಮತ್ತು ಕೋಣ ಬಲಿ ನೀಡಲಾಗುವ ದೇವತೆಗಳು. ಎರಡನೇ ವರ್ಗಕ್ಕೆ ಸೇರಿದ ದೇವತೆಗಳು ಎಲ್ಲಕ್ಕಿಂತ ಕೀಳು. ಬೇರೆ ಶೂದ್ರ ಸಮುದಾಯಗಳು ಈ ದೇವತೆಗಳಿಗೆ ಪೂಜೆ ಸಲ್ಲಿಸಿದರೂ ಅವು ಅಸ್ಪಶ್ಯರ ದೇವತೆಗಳಾದುವು. ಶಿವ ಬೇಟೆಗಾರ ದೇವತೆಯಾಗಿ ಮಾಂಸಾಹಾರಿಯಾದರೂ ನಂತರ ಇವನ ಭಕ್ತರು ಶಿವನನ್ನು ಸಸ್ಯಾಹಾರಿಗಳ ಮುಖ್ಯ ದೇವತೆಯನ್ನಾಗಿಸಿದ್ದಾರೆ. ಅದೇ ದೇವರಿಗೆ, ಶಿವನ ಪರಿವಾರ ದೇವತೆಗಳಿಗೆ, ಶಿವನ ಪತ್ನಿಯರು, ಪತ್ನಿಯ ವಿವಿಧ ರೂಪಗಳೆಂದು ಪರಿಗಣಿತವಾದ ಹಲವು ಮಾತೃ ದೇವತೆಗಳಿಗೆ ಹಲವು ಭಕ್ತ ಸಮುದಾಯಗಳು ಮಾಂಸದ ಎಡೆಗಳು ನೀಡುವುದು ಸಾಮಾನ್ಯವಾಗಿದೆ. ಹೀಗೆ ದೇವರುಗಳ ಆಹಾರದ ವಿಷಯದಲ್ಲಿಯೂ ದ್ವಂದ್ವ ಎದ್ದು ಕಾಣಿಸುವಂತಿದ್ದರೂ ಮಾಂಸಾಹಾರಿ ಮಾನವ ಸಮುದಾಯಗಳ ವಿಷಯದಲ್ಲಿ ಕೀಳು ಭಾವನೆ ಸ್ಪಷ್ಟವಾಗಿದೆ.

(‘ಬಹುರೂಪಿ’ ಪ್ರಕಟಿತ ‘ಜಾತಿ ಹೇಗೆ ಬಂತು’ ಕೃತಿಯಿಂದ ಆಯ್ದ ಭಾಗ)

Similar News