ಗುಜರಾತ್: ಗೂಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌ಪ್ರೆಸ್
ಒಂದು ತಿಂಗಳಲ್ಲಿ ಮೂರನೇ ಘಟನೆ
ಹೊಸದಿಲ್ಲಿ: ಗಾಂಧಿನಗರ-ಮುಂಬೈ ಮಾರ್ಗದಲ್ಲಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ ಗುಜರಾತ್‌ನಲ್ಲಿ ಗೂಳಿಗೆ ಡಿಕ್ಕಿ ಹೊಡೆದಿದೆ. ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.
ಡಿಕ್ಕಿಯ ನಂತರ ಸೆಮಿ-ಹೈ-ಸ್ಪೀಡ್ ರೈಲನ್ನು ಸುಮಾರು 15 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಡಿಕ್ಕಿಯಿಂದಾಗಿ ಚಾಲಕನ ಕೋಚ್ ಗೆ ಹಾನಿಯಾಯಿತು.
ಈ ತಿಂಗಳ ಆರಂಭದಲ್ಲಿ ಹೊಸದಾಗಿ ಆರಂಭಿಸಲಾದ ರೈಲು ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಹಸುವಿಗೆ ಡಿಕ್ಕಿ ಹೊಡೆದಿತ್ತು.
ಇಂದಿನ ಘಟನೆಯು ಅತುಲ್ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 8.17 ಕ್ಕೆ ಸಂಭವಿಸಿದೆ.
"ಜಾನುವಾರುಗಳೊಂದಿಗೆ ಇಂತಹ ಢಿಕ್ಕಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ" ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಹೇಳಿದ್ದಾರೆ.
ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಈ ರೈಲಿಗೆ ಕಳೆದ ತಿಂಗಳು ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದರು.