×
Ad

ತೆಲಂಗಾಣದಲ್ಲಿ 'ಆಪರೇಶನ್ ಕಮಲ': ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರಿಗೆ ಅವಕಾಶ ನೀಡಿದ ಹೈಕೋರ್ಟ್

Update: 2022-10-29 14:48 IST

ಹೈದರಾಬಾದ್: ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ(ಬಿಆರ್ ಎಸ್)ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಆರೋಪದಲ್ಲಿ ಮೂವರನ್ನು ತೆಲಂಗಾಣದಲ್ಲಿ ಬಂಧಿಸಲಾಗಿದ್ದು, ಇವರನ್ನು ಕಸ್ಟಡಿಗೆ ಪಡೆಯಲು ಪೊಲೀಸರಿಗೆ ಹೈಕೋರ್ಟ್ ಶನಿವಾರ ಅವಕಾಶ ನೀಡಿದೆ.

ಆರೋಪಿಗಳನ್ನು ಕಸ್ಟಡಿಗೆ ಕೋರಿದ್ದ ಪೊಲೀಸರ ಮನವಿಯನ್ನು ಗುರುವಾರ ಕೆಳ ನ್ಯಾಯಾಲಯವು ತಿರಸ್ಕರಿಸಿತ್ತು. ಹೀಗಾಗಿ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು.

ಆರೋಪಿಗಳನ್ನು ಬುಧವಾರ ರಾತ್ರಿ ಹೈದರಾಬಾದ್ ಸಮೀಪದ ಫಾರ್ಮ್ ಹೌಸ್ ನಿಂದ ವಶಪಡಿಸಿಕೊಳ್ಳಲಾಗಿತ್ತು.

ಬಿಜೆಪಿಗೆ ಪಕ್ಷಾಂತರವಾಗಲು ನಾಲ್ವರು ಬಿಆರ್ ಎಸ್ ಶಾಸಕರಿಗೆ ಲಂಚ ನೀಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಫಾರ್ಮ್ ಹೌಸ್ ನ ಮಾಲಕನಾಗಿರುವ ಓರ್ವ ಶಾಸಕ ಪೈಲಟ್ ರೋಹಿತ್ ರೆಡ್ಡಿ ಡೀಲ್ ನಡೆಯುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಾಲ್ವರು ಶಾಸಕರಿಗೆ 250 ಕೋ.ರೂ. ನೀಡಲು ಮುಂದಾಗಲಾಗಿತ್ತು ಎಂಬ ರೆಡ್ಡಿಯ ದೂರಿನ ಮೇರೆಗೆ ಎಫ್ ಐಆರ್  ದಾಖಲಾಗಿತ್ತು.

ಶಾಸಕರು ಬಿಜೆಪಿಗೆ ಸೇರದಿದ್ದರೆ, "ಕ್ರಿಮಿನಲ್ ಪ್ರಕರಣಗಳು ಮತ್ತುಈಡಿ  (ಜಾರಿ ನಿರ್ದೇಶನಾಲಯ) / ಸಿಬಿಐ ದಾಳಿಗಳು ನಡೆಯುತ್ತವೆ ಹಾಗೂ  ಬಿಆರ್‌ಎಸ್ ಪಕ್ಷದ ನೇತೃತ್ವದ ತೆಲಂಗಾಣ ಸರಕಾರವನ್ನು ಉರುಳಿಸಲಾಗುವುದು ಎಂದು ಬೆದರಿಸಲಾಗಿತ್ತು ಎನ್ನುವುದಾಗಿ ರೋಹಿತ್ ರೆಡ್ಡಿ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ಪಕ್ಷವನ್ನು ಬದಲಾಯಿಸಲು ತಮಗೆ ದೊಡ್ಡ ಮೊತ್ತ, ಗುತ್ತಿಗೆ ಹಾಗೂ ಹುದ್ದೆಯ ಆಮಿಷ ನೀಡಲಾಗಿದೆ ಎಂದು ಶಾಸಕರು ಪೊಲೀಸರಿಗೆ ತಿಳಿಸಿದ್ದರು ಎಂದು ತೆಲಂಗಾಣ ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ಎನ್ ಡಿಟಿವಿಗೆ ತಿಳಿಸಿದ್ದಾರೆ.

Similar News