ಮೂಡಬಿದ್ರೆ: ಪ್ರಥಮ ಬಾರಿ ಸ್ಕೌಟ್-ಗೈಡ್ಸ್ ಅಂ.ರಾ.ಸಾಂಸ್ಕೃತಿಕ ಜಾಂಬೂರಿ
ಉಡುಪಿಯಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ
ಉಡುಪಿ : ಸ್ಕೌಟ್ಸ್- ಗೈಡ್ಸ್ ಹಾಗೂ ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳ ಮೊತ್ತ ಮೊದಲ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಮುಂದಿನ ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ವಿದ್ಯಾನಗರಿ ಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಜಾಂಬೂರಿ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಕೌಟ್-ಗೈಡ್ಸ್‌ನ ಮೈಸೂರು ವಿಭಾಗದ ಮುಖ್ಯ ಆಯುಕ್ತ ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.
ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಇಂದು ಯೋಜಿಸಲಾದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಜಾಂಬೂರಿಯ ಆಯೋಜನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಡಾ.ಆಳ್ವ ಈ ವಿಷಯ ತಿಳಿಸಿದರು.
ಒಂದು ವಾರ ಕಾಲ ನಡೆಯುವ ಈ ಜಾಂಬೂರಿಯಲ್ಲಿ ದೇಶ-ವಿದೇಶಗಳ 12ರಿಂದ 25ವರ್ಷದೊಳಗಿನ ಸುಮಾರು 50,000 ವಿದ್ಯಾರ್ಥಿಗಳು ಹಾಗೂ 10,000ಕ್ಕೂ ಅಧಿಕ ತರಬೇತುದಾರರು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದ ಜಾಂಬೂರಿನ ನಡೆಸುವ ಅವಕಾಶ ನಮಗೆ ಸಿಕ್ಕಿದ್ದು, ವಿದ್ಯಾಗಿರಿ ಯಲ್ಲಿರುವ ಆಳ್ವಾಸ್ ಕ್ಯಾಂಪಸ್‌ನಲ್ಲಿ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದವರು ನುಡಿದರು.
ಜಾಂಬೂರಿಯ ಆಯೋಜನೆಗೆ ಕೇವಲ ಒಂದೂವರೆ ತಿಂಗಳ ಅವಕಾಶ ಮಾತ್ರ ಇದ್ದು, ಎಂದಿನಂತೆ ಇದನ್ನು ಮಾದರಿಯಾಗಿ ನಡೆಸಲು ಸರಕಾರ ಹಾಗೂ ದಾನಿಗಳು ಮುಂದೆ ಬರಬೇಕಾಗಿದೆ. ಆದರೆ ಈ ನಿಟ್ಟಿನಲ್ಲಿ ಸರಕಾರ ಇದುವರೆಗಿನ ಪ್ರತಿಕ್ರಿಯೆಯಿಂದ ತಮಗೆ ನಿರಾಶೆಯಾಗಿದ್ದು, ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ನೆರವಿನ ಭರವಸೆ ನೀಡಿದ್ದಾರೆ ಎಂದರು.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸ್ಕೌಟ್ ಮತ್ತು ಗೈಡ್ಸ್‌ಗೆ ಶತಮಾನದ ಇತಿಹಾಸವಿದೆ. ಸದ್ಯ ದಕ್ಷಿಣ ಕನ್ನಡದಲ್ಲಿ 65,000 ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಹಾಗೂ 2000 ಮಂದಿ ತರಬೇತುದಾರರಿದ್ದರೆ, ಉಡುಪಿಯಲ್ಲಿ 25,000 ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ 500 ಮಂದಿ ತರಬೇತುದಾರರಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಈ ಸಂಸ್ಥೆಗೆ ಮಂಗಳೂರಿನ ಪಿಲಿಕುಳದಲ್ಲಿ ಹಾಗೂ ಉಡುಪಿಯ ಅಲೆವೂರಿನಲ್ಲಿ ತಲಾ 15 ಎಕರೆ ಜಾಗವಿದ್ದು, ಅಲ್ಲಿ ಯುವ ಶಕ್ತಿ ಕೇಂದ್ರಗಳನ್ನು ನಿರ್ಮಿಸುವ ಯೋಜನೆ ಇದ್ದು, ಅಲ್ಲಿ ವರ್ಷಪೂರ್ತಿ ಎನ್ನೆಸ್ಸೆಸ್, ಎನ್‌ಸಿಸಿ, ಹಾಗೂ ರೆಡ್‌ಕ್ರಾಸ್ ಚಟುವಟಿಕೆ ನಡೆಯುವಂತಾಗಬೇಕು ಎಂದು ಡಾ.ಆಳ್ವ ವಿವರಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ 24 ಜಾಂಬೂರಿಗಳು ನಡೆದಿವೆ. ಭಾರತದಲ್ಲಿ ನಡೆದಿರುವ ಪ್ರಥಮ ಜಾಂಬೂರಿ ಮೂಡಬಿದ್ರೆಯಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ 17 ಜಾಂಬೂರಿಗಳು ನಡೆದಿದ್ದು, ಮೂರು ಕರ್ನಾಟಕದಲ್ಲಿ (ಬೆಂಗಳೂರಿನಲ್ಲಿ 2, ಮೈಸೂರಿನಲ್ಲಿ 1) ನಡೆದಿವೆ ಎಂದವರು ವಿವರಿಸಿದರು.
ಸರಕಾರದ ನೆರವು ಸಿಗಬೇಕಿದೆ: ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದಾಗ ಮೈಸೂರಿನಲ್ಲಿ ನಡೆದ ಜಂಬೂರಿಗೆ 30 ಕೋಟಿ ನೀಡಿದ್ದರು. ಮುಂದಿನ ವರ್ಷ ರಾಜಸ್ತಾನದಲ್ಲಿ ನಡೆಯುವ ರಾಷ್ಟ್ರೀಯ ಜಂಬೂರಿಗೆ ಅಲ್ಲಿನ ಸರಕಾರ ಈಗಾಗಲೇ 25 ಕೋಟಿ ರೂ. ಬಿಡುಗಡೆ ಮಾಡಿದೆ, ಇನ್ನೂ 20 ಕೋಟಿ ನೀಡುವ ಭರವಸೆ ನೀಡಿದೆ. ಆದರೆ ನಮ್ಮಲ್ಲಿ ನಡೆಯುವ ಅಂ.ರಾ.ಜಂಬೂರಿಗೆ ಸರಕಾರ ಈವರೆಗೆ ಯಾವುದೇ ನೆರವು ಘೋಷಿಸಿಲ್ಲ ಎಂದು ಡಾ.ಆಳ್ವ ಬೇಸರ ವ್ಯಕ್ತಪಡಿಸಿದರು.
ಸ್ಕೌಟ್ ಮತ್ತು ಗೈಡ್ಸ್ ಮುಖ್ಯವಾಗಿ ಸೇವಾ ಮನೋಭಾವವನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದೆ. ಪ್ರತಿ ಶಾಲೆಯಲ್ಲೂ ಸ್ಕೌಟ್ ಮತ್ತು ಗೈಡ್ಸ್ ಪ್ರಾರಂಭಗೊಳ್ಳಬೇಕೆಂಬುದು ನಮ್ಮ ಉದ್ದೇಶ. ಹೀಗಾಗಿ ಅಂ.ರಾ.ಜಂಬೂರಿನಲ್ಲಿ ಇಲ್ಲಿ ಆಯೋಜಿಸುತಿದ್ದೇವೆ. ಇದಕ್ಕಾಗಿ 100 ಎಕರೆ ಪ್ರದೇಶದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನ್ನು ಇದಕ್ಕಾಗಿ ಬಿಟ್ಟುಕೊಡುತ್ತೇವೆ. ನಮ್ಮ ಹಾಸ್ಟೆಲ್‌ಗಳಲ್ಲೇ ಶಿಬಿರಾರ್ಥಿಗಳು ಇರಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದರು.
ಜಾಂಬೂರಿಯಲ್ಲಿ ಭಾಗವಹಿಸುವ 12ರಿಂದ 25 ವರ್ಷದೊಳಗಿನ 50,000 ಮಂದಿ ವಿದ್ಯಾರ್ಥಿಗಳಿಗೆ ಒಂದು ವಾರ ಕಾಲ ದಿನವಿಡೀ ಮುಂಜಾನೆ 6:00ರಿಂದರಾತ್ರಿ 9:00ರವರೆಗೆಕ್ರಿಯಾಶೀಲರಾಗಿರುವಂತೆ ವಿವಿಧ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತದೆ. ಇವುಗಳಲ್ಲಿ ಯೋಗ, ದೈಹಿಕ ಕಸರತ್ತು, ವ್ಯಾಯಾಮ, ವಿವಿಧ ತರಬೇತಿ, ವಿವಿಧ ಚಟುವಟಿಕೆಗಳು ಸೇರಿವೆ. ಪ್ರವಾಸ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳಲ್ಲೂ ಅವರನ್ನು ತೊಡಗಿಸಿಕೊಳ್ಳ ಲಾಗುತ್ತದೆ ಎಂದು ಹೇಳಿದರು.
ಏಳು ದಿನಗಳ ಕಾಲ ವಿದ್ಯಾಗಿರಿಯ ಆಳ್ವಾಸ್ ಆವರಣದಲಿಲ ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳವನ್ನೂ ಆಯೋಜಿಸಲಾಗುತ್ತದೆ. ಪ್ರತಿದಿನ 50ಸಾವಿರದಷ್ಟು ಮಂದಿ ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ಹೀಗಾಗಿ ಪ್ರತಿದಿನ ಒಂದು ಲಕ್ಷ ಮಂದಿಗೆ ಉಚಿತ ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದರು.
ಸರಕಾರದಲ್ಲೇ ಗೊಂದಲ: ಸ್ಕೌಟ್ಸ್ ಮತ್ತು ಗೈಡ್ಸ್ ಸರಕಾರದ ಯಾವ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೋ ಅಥವಾ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೋ ಎಂಬ ಬಗ್ಗೆಯೇ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲದಿರುವುದು ಖೇದಕರ ಸಂಗತಿ. ಹೀಗಾಗಿ ಜಾಂಬೂರಿಗೆ ಕೇವಲ 50 ದಿನ ಬಾಕಿ ಉಳಿದಿದ್ದರೂ ಅನುದಾನ ಬಿಡುಗಡೆಗೆ ಮೀನಮೇಷ ಎಣಿಸುತ್ತಿದೆ ಎಂದ ಬೇಸರ ವ್ಯಕ್ತಪಡಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಸಭಾ ಆಯುಕ್ತ ಡಾ.ಉದಯ ಶೆಟ್ಟಿ ವೇದಿಕೆಯಲ್ಲಿದ್ದರು.
ಡಿಡಿಪಿಯು ಮಾರುತಿ, ಡಿಡಿಪಿಐ ಎನ್.ಕೆ.ಶಿವರಾಮ್, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬಿಇಓಗಳು, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ಗೈಡ್ಸ್ ಆಯುಕ್ತೆ ಜ್ಯೋತಿ ಪೈ,, ಗೋಪಾಲ್ ಶೆಟ್ಟಿ, ಉಪಾಧ್ಯಕ್ಷೆ ಎಡ್ವಿನ್ ಆಳ್ವ, ಆನಂದ ಅಡಿಗ, ಡಾ.ಜಯರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಜಿಲ್ಲಾ ಸ್ಕೌಟ್ ಆಯುಕ್ತ ಡಾ.ವಿಜಯೇಂದ್ರ ವಸಂತ್ ಸ್ವಾಗತಿಸಿದರೆ, ಪ್ರಭಾಕರ ಭಟ್ ವಂದಿಸಿದರು. ಡಾ.ಜಯರಾಮ ಶೆಟ್ಟಿಗಾರ್ ನಿರೂಪಿಸಿದರು.