ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿ ಹಿಂಪಡೆಯಲಾಗಿದೆ: ಹೈಕೋರ್ಟ್ ಗೆ ತಿಳಿಸಿದ ತೆಲಂಗಾಣ ಸರಕಾರ
ಹೈದರಾಬಾದ್,ಅ.30: ಸಿಬಿಐಗೆ ತಾನು ನೀಡಿದ್ದ 'ಮುಕ್ತ ಸಮ್ಮತಿ'ಯನ್ನು ಹಿಂದೆಗೆದುಕೊಂಡಿರುವುದಾಗಿ ತೆಲಂಗಾಣ ಸರಕಾರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಮುಕ್ತ ಅಥವಾ ಸಾರ್ವತ್ರಿಕ ಒಪ್ಪಿಗೆಯ ಅನುಪಸ್ಥಿತಿಯಲ್ಲಿ ಸಿಬಿಐ ಪ್ರತಿಯೊಂದು ಪ್ರಕರಣದ ತನಿಖೆಗೂ ರಾಜ್ಯ ಸರಕಾರದಿಂದ ಪ್ರತ್ಯೇಕ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ತೆಲಂಗಾಣ ಸರಕಾರವು ಮುಕ್ತ ಸಮ್ಮತಿಯನ್ನು ಹಿಂದೆಗೆದುಕೊಂಡ ಆದೇಶವನ್ನು ಆ.30ರಂದೇ ಹೊರಡಿಸಿತ್ತಾದರೂ ಅದನ್ನು ಬಹಿರಂಗಗೊಳಿಸಿರಲಿಲ್ಲ. ಶನಿವಾರ ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ತೆಲಂಗಾಣ ಉಚ್ಚ ನ್ಯಾಯಾಲಯಕ್ಕೆ ಸರಕಾರದ ನಿರ್ಧಾರವನ್ನು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜುಲ ಪ್ರೇಮೇಂದರ್ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ತನ್ನ ಪಕ್ಷದವರೆನ್ನಲಾದ ಕೆಲವರು ಆಡಳಿತ ಟಿಆರ್‌ಎಸ್ ಶಾಸಕರ ಖರೀದಿಗೆ ಪ್ರಯತ್ನಿಸಿದ್ದರು ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ರೆಡ್ಡಿ ತನ್ನ ಅರ್ಜಿಯಲ್ಲಿ ಕೋರಿದ್ದಾರೆ.
ಶಾಸಕರ ಖರೀದಿ ಆರೋಪ ಬಿಜೆಪಿಯ ಹೆಸರು ಕೆಡಿಸಲು ಟಿಆರ್‌ಎಸ್‌ನ ಸಂಚಾಗಿದೆ,ಇದು ಟಿಆರ್‌ಎಸ್ ಆಡುತ್ತಿರುವ, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ ಅವರು ಬರೆದು ನಿರ್ದೇಶಿಸಿರುವ ನಾಟಕವಾಗಿದೆ ಎಂದು ರೆಡ್ಡಿ ಆರೋಪಿಸಿದರು.
ತೆಲಂಗಾಣ ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂದೆಗೆದುಕೊಂಡಿರುವ ಒಂಭತ್ತನೇ ರಾಜ್ಯವಾಗಿದೆ. ಮೇಘಾಲಯ,ಪ.ಬಂಗಾಳ,ಕೇರಳ,ಪಂಜಾಬ,ರಾಜಸ್ಥಾನ,ಜಾರ್ಖಂಡ್,ಛತ್ತೀಸ್‌ಗಡ ಮತ್ತು ಮಿರೆರಾಮ್ ಇತರ ಎಂಟು ರಾಜ್ಯಗಳಾಗಿವೆ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಈ ಪೈಕಿ ಹೆಚ್ಚಿನ ರಾಜ್ಯಗಳು ಆರೋಪಿಸಿವೆ. ಸಿಬಿಐಗೆ ನೀಡಿರುವ ಮುಕ್ತ ಸಮ್ಮತಿಯನ್ನು ಎಲ್ಲ ರಾಜ್ಯಗಳು ಹಿಂದೆಗೆದುಕೊಳ್ಳಬೇಕು ಎಂದು ರಾವ್ ಕಳೆದ ಆಗಸ್ಟ್‌ನಲ್ಲಿ ಕರೆ ನೀಡಿದ್ದರು.