ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ಮೂವರು ಆರೋಪಿಗಳನ್ನು ಮತ್ತೆ ಬಂಧಿಸಿದ ಪೊಲೀಸರು
ಹೈದರಾಬಾದ್,ಅ.30: ಬಿಜೆಪಿಗೆ ಸೇರುವಂತೆ ಆಡಳಿತಾರೂಢ ಟಿಆರ್‌ಎಸ್ ಶಾಸಕರಿಗೆ ಆಮಿಷವನ್ನೊಡ್ಡಿದ್ದ ಮೂವರು ಆರೋಪಿಗಳಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ರವಿವಾರ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ತೆಲಂಗಾಣ ಉಚ್ಚ ನ್ಯಾಯಾಲಯದ ಶನಿವಾರದ ಆದೇಶದ ಮೇರೆಗೆ ಆರೋಪಿಗಳನ್ನು ಮರುಬಂಧಿಸಿ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
ಅ.27ರಂದು ಪೊಲೀಸರು ಹಿಂದು ಸಂತ ಡಿ.ಸಿಂಹಯಾಜಿ,ಅವರ ಶಿಷ್ಯ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ ಶರ್ಮಾ ಮತ್ತು ಉದ್ಯಮಿ ನಂದಕುಮಾರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಆರೋಪಿಗಳು ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಭಾರೀ ಹಣದ ಆಮಿಷವನ್ನೊಡ್ಡಿ ಅವರು ಬಿಜೆಪಿಗೆ ಸೇರುವಂತೆ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ನಾಲ್ವರು ಶಾಸಕರಾದ ಪಿ.ರೋಹಿತ ರೆಡ್ಡಿ,ಭೀರಂ ಹರ್ಷವರ್ಧನ ರೆಡ್ಡಿ,ಪಿ.ರೇಗಾ ಕಾಂತರಾವ್ ಮತ್ತು ಗುವ್ವಲ ಬಾಲರಾಜು ಅವರು ಅ.26ರಂದು ಹೈದರಾಬಾದ್‌ನ ಅಝೀಝ್ ನಗರದಲ್ಲಿಯ ತೋಟದ ಮನೆಯೊಂದರಲ್ಲಿ ಕಂಡುಬಂದಿದ್ದರು.
ಮೂವರು ಆರೋಪಿಗಳನ್ನು ಭ್ರಷ್ಟಾಚಾರ ನಿಗ್ರಹ ಘಟಕ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದ ಪೊಲೀಸರು ಅವರ ಕಸ್ಟಡಿಯನ್ನು ಕೋರಿದ್ದರು. ಆದರೆ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಗಳಿಲ್ಲ ಎಂದು ಹೇಳಿದ ನ್ಯಾಯಾಲಯವು ಕಸ್ಟಡಿಯನ್ನು ನಿರಾಕರಿಸಿದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಆರೋಪಿಗಳಿಂದ ಹಣವನ್ನು ವಶಪಡಿಸಿಕೊಂಡಿದ್ದಕ್ಕೆ ಯಾವುದೇ ಸಾಕ್ಷವನ್ನು ಪೊಲೀಸರು ಮಂಡಿಸಿಲ್ಲ,ಹೀಗಾಗಿ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯು ಅನ್ವಯಿಸುವುದಿಲ್ಲ ಎಂದೂ ನ್ಯಾಯಾಲಯವು ಹೇಳಿತ್ತು.
ಇದನ್ನು ತೆಲಂಗಾಣ ಪೊಲೀಸರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,ಅದು ಪೊಲೀಸರ ಪರವಾಗಿ ತೀರ್ಪು ನೀಡಿತ್ತು ಮತ್ತು ಶರಣಾಗುವಂತೆ ಆರೋಪಿಗಳಿಗೆ ಆದೇಶಿಸಿತ್ತು.