×
Ad

ಕಟಪಾಡಿ ಚರ್ಚಿನ ಅಮೃತ ಮಹೋತ್ಸವ ವರ್ಷಕ್ಕೆ ಚಾಲನೆ

Update: 2022-10-30 16:14 IST

ಉಡುಪಿ, ಅ.30: ಒಂದು ದೇವಾಲಯದ ಅಮೃತ ಮಹೋತ್ಸವ ಆಚರಣೆ ನಮಗೆ ಹಿಂದಿನ ಘಟನೆಗಳನ್ನು ಹಾಗೂ ನೆನಪುಗಳನ್ನು ಮೆಲುಕು ಹಾಕಲು ಮತ್ತೊಮ್ಮೆ ಅವಕಾಶ ನೀಡುವುದರೊಂದಿಗೆ ಮುಂದೆ ದೇವಾಲಯದ ಮೂಲಕ ಸಮಾಜಕ್ಕೆ ಯಾವ ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಉಡುಪಿ ವಲಯದ ಪ್ರಧಾನ ಧರ್ಮಗುರು ಹಾಗೂ ಶೋಕಮಾತಾ ಇಗರ್ಜಿಯ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಹೇಳಿದ್ದಾರೆ.

ಕಟಪಾಡಿ ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚಿನ ಅಮೃತ ಮಹೋತ್ಸವ ವರ್ಷಕ್ಕೆ ರವಿವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ನಮ್ಮ ಆಚರಣೆ ಕೇವಲ ಹೊರಗಿನ ಸಂಭ್ರಮ ಮಾತ್ರ ಆಗಿರದೆ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತ್ತಿರುವವರು ಮುಖದಲ್ಲಿ ನಗು ಮೂಡಿಸುವಂತಾಗಬೇಕು. ಆಗ ಮಾತ್ರ ನಾವು ಮಾಡುವ ಸಂಭ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ಅಮೃತ ಮಹೋತ್ಸವ ಆಚರಣೆಯ ಪ್ರಯುಕ್ತ ಭಾರತೀಯ ಕೆಥೊಲಿಕ್ ಯುವ ಸಂಚಾಲನ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜೋಸನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಜರುಗಿತು.

ಚರ್ಚಿನಲ್ಲಿ ಸೇವೆ ಸಲ್ಲಿಸಿದ ಅಂದಿನ ಧರ್ಮಗುರುಗಳಾದ ವಂ.ರೋನ್ಸನ್, ವಂ.ಪ್ರೀತಮ್, ಧರ್ಮಗುರುಗಳಾದ ವಂ.ಜಾನಿ, ಚರ್ಚಿನ ಧರ್ಮಗುರು ವಂ. ರಾಜೇಶ್ ಪಾಸನ್ನಾ, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 20 ಆಯೋಗಗಳ ಸಂಚಾಲಕ ವಿಲ್ಫ್ರೆಡ್ ಲೂವಿಸ್ ಉಪಸ್ಥಿತರಿದ್ದರು.

Similar News