ಉಡುಪಿ: ಹೊಟೇಲ್ ಉದ್ಯಮಿ ಜಯರಾಂ ಬನಾನ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ, ಅ.30: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದ ಮಠದಬೆಟ್ಟುವಿನ ಜಯರಾಂ ಬನಾನ್ ಭಾಜನರಾಗಿದ್ದಾರೆ.
ತಮ್ಮ 13ನೇ ವಯಸ್ಸಿನಲ್ಲಿ ಮನೆಬಿಟ್ಟು, ಮುಂಬೈಗೆ ತೆರಳಿ ಅತ್ಯಂತ ಕಷ್ಟಗಳ ನಡುವೆಯೇ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲೇರಿದ ಇವರು, ಕೇವಲ 5000 ರೂ. ಬಂಡವಾಳದೊಂದಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಸಾಗರ್ ರತ್ನ ರೆಸ್ಟೋರೆಂಟ್ ಆರಂಭಿಸಿದರು.
ಇವರು ಸಾಗರ್ ರತ್ನ ಮತ್ತು ಶ್ರೀರತ್ನಂ ರೆಸ್ಟೋರೆಂಟ್‌ಗಳ ಮಾಲಕರಾಗಿದ್ದು, ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ಮಂಗಳೂರು ಹಾಗೂ ಉಡುಪಿಯಲ್ಲೂ ಓಷಿಯನ್ ಪರ್ಲ್ ಹೋಟೆಲ್ ನಡೆಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಸಾಗರ್ ರತ್ನ ಮತ್ತು ಶ್ರೀರತ್ನಂ ಹೆಸರಿನ ಸುಮಾರು 105ಕ್ಕೂ ಹೆಚ್ಚು ಶಾಖೆಗಳು ಮತ್ತು ಅದರ ಅಂಗಸಂಸ್ಥೆ ಸ್ವಾಗತ್ ಹೆಸರಿನಲ್ಲಿ ಇನ್ನಷ್ಟು ಶಾಖೆಗಳು ಸ್ಥಾಪಿತವಾಗಿವೆ.
ಇವರು ಸಾಧಿಸಿದ ಪ್ರಗತಿಯನ್ನು ‘ಇಂಕ್ ಇಂಡಿಯಾ’ ಎಂಬ ಇಂಗ್ಲಿಷ್ ನಿಯತಕಾಲಿಕೆ ಲೇಖನದಲ್ಲಿ ಬನಾನ್‌ರನ್ನು ’ಸಾಂಬಾರಿನ ಸುಲ್ತಾನ್’ ಎಂದು ಉಲ್ಲೇಖಿಸಿದೆ. ಗುಣಮಟ್ಟದ ಶುಚಿ-ರುಚಿಯಾದ ಆಹಾರಕ್ಕೆ ಇವರ ಸಂಸ್ಥೆಗಳು ಹೆಸರುವಾಸಿಯಾಗಿದೆ. ಇವರು ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಸ್ಥೆಗಳು, ದೇವಾಲಯಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಇವರು, ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಜಯರಾಂ ಬನಾನ್ ಮಾಲಕತ್ವದ ಜೆಆರ್‌ಬಿ ಸಂಸ್ಥೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿನ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ಒದಗಿಸ ಲಾಗಿದೆ.