35 ಮಂದಿ ಸಾವಿಗೆ ಕಾರಣವಾದ ಸೇತುವೆ ದುರಂತದ ಹೊಣೆ ಹೊತ್ತುಕೊಂಡ ಗುಜರಾತ್‌ ಸರ್ಕಾರ

Update: 2022-10-30 16:13 GMT

ಹೊಸದಿಲ್ಲಿ:  35 ಮಂದಿಯ ಸಾವಿಗೆ ಹಾಗೂ ಹಲವರು ಗಾಯಗೊಂಡ ಸೇತುವೆ ಕುಸಿತ ದುರಂತದ ಹೊಣೆಯನ್ನು ಗುಜರಾತ್ ಸರಕಾರ ಹೊತ್ತುಕೊಂಡಿದೆ ಎಂದು ರಾಜ್ಯ ಸಚಿವರೊಬ್ಬರು ರವಿವಾರ ಹೇಳಿದ್ದಾರೆ. ಸುಮಾರು ಶತಮಾನದಷ್ಟು ಹಳೆಯದಾದ ಐತಿಹಾಸಿಕ ಸೇತುವೆಯನ್ನು ನವೀಕರಣಕ್ಕಾಗಿ ಮುಚ್ಚಲಾಗಿತ್ತು, ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಸಾರ್ವಜನಿಕರಿಗೆ ತೆರೆಯಲಾಗಿತ್ತು.

ಕುಸಿದ  ಕೇಬಲ್ ಸೇತುವೆಯ ಮೇಲೆ ಸುಮಾರು 500 ಜನರಿದ್ದರು, ಅದು ಕುಸಿಯುವಾಗ ಅವರಲ್ಲಿ ಸುಮಾರು 100 ಜನರು ಮಚ್ಚು ನದಿಗೆ ಬಿದ್ದಿದ್ದಾರೆ.

"ಸೇತುವೆಯನ್ನು ಕಳೆದ ವಾರ ನವೀಕರಿಸಲಾಗಿದೆ. ನಮಗೂ ಆಘಾತವಾಗಿದೆ. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ" ಎಂದು ರಾಜ್ಯ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಬ್ರಿಜೇಶ್ ಮೆರ್ಜಾ NDTV ಗೆ ತಿಳಿಸಿದ್ದಾರೆ.

"ಎಲ್ಲಾ ಉನ್ನತ ಸರ್ಕಾರಿ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ" ಎಂದು ಸಚಿವರು ಹೇಳಿದ್ದಾರೆ.

ಕುಸಿತದ ನಂತರ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕಾಣೆಯಾದವರನ್ನು ಹುಡುಕಲು ಈಜುಪಟುಗಳನ್ನು ನಿಯೋಜಿಸಲಾಗಿದೆ.

ಮೂರು ದಿನಗಳ ಭೇಟಿಗಾಗಿ ತವರು ರಾಜ್ಯ ಗುಜರಾತ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಅವರು ಮಾತನಾಡಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳನ್ನು ತುರ್ತು ಸಜ್ಜುಗೊಳಿಸುವಂತೆ ಅವರು ಕೋರಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ.

Similar News