ರೈಲು ಶೌಚಾಲಯದಲ್ಲೇ 900 ಕಿ.ಮೀ. ಶವಪ್ರಯಾಣ!

Update: 2022-11-01 02:47 GMT

ಬರೇಲಿ: ಅಪರಿಚಿತ ವ್ಯಕ್ತಿಯೊಬ್ಬನ ಕೊಳೆತ ಮೃತದೇಹ ಅಮೃತಸರದಿಂದ ಹೊರಟ ಜನಸೇವಾ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಉತ್ತರ ಪ್ರದೇಶದ ಶಹಜಹಾನ್‍ಪುರ ಜಿಲ್ಲೆಯ ರೋಝಾ ಸ್ಟೇಷನ್‍ನಲ್ಲಿ ಪತ್ತೆಯಾಗಿದೆ.

ಬಿಹಾರದ ಬನ್‍ಮಂಖಿ ಜಂಕ್ಷನ್‍ನಿಂದ 900 ಕಿಲೋಮೀಟರ್ ದೂರ ರೈಲು ಹೋಗುವವರೆಗೂ ಈ ಮೃತದೇಹ ಯಾರ ಗಮನಕ್ಕೂ ಬರಲಿಲ್ಲ ಎನ್ನಲಾಗಿದೆ. ಮುಚ್ಚಿದ ರೈಲು ಶೌಚಾಲಯದಿಂದ ಕೊಳೆತ ದೇಹದ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಕಾರಿ ರೈಲ್ವೆ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಕರುಣೇಶ್ ಚಂದ್ರ ಶುಕ್ಲಾ ಅವರು ರೈಲು ಸಿಬ್ಬಂದಿಯ ಜತೆಗೆ ಶೌಚಾಲಯದ ಬಾಗಿಲು ಒಡದು ನೋಡಿದಾಗ ಕೊಳೆತ ಶವ ಪತ್ತೆಯಾಗಿದೆ. ಐದು ಗಂಟೆ ನಿಲುಗಡೆ ಬಳಿಕ ಅಮೃತಸರಕ್ಕೆ ರೈಲು ತೆರಳಿತು.

ಅಪರಿಚಿತ ವ್ಯಕ್ತಿ ಹಸಿರು ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದ. ಆತನಲ್ಲಿ ಯಾವುದೇ ಐಡಿ ಕಾರ್ಡ್ ಇರಲಿಲ್ಲ. ಜಿಆರ್‍ಪಿ ಸ್ಟೇಷನ್‍ಗಳಿಗೆ ಮಾಹಿತಿ ನೀಡಲಾಗಿದ್ದು, ಶೌಚಾಲಯದ ಒಳಗಿನಿಂದ ಬಾಗಿಲು ಹಾಕಿಕೊಂಡು ಇದ್ದ ಹಿನ್ನೆಲೆಯಲ್ಲಿ ಯಾವುದೇ ಸಂಶಯಕ್ಕೆ ಆಸ್ಪದ ಇಲ್ಲ ಎಂದು ಶುಕ್ಲಾ ಹೇಳಿದರು.

ಅಟಾಪ್ಸಿ ವರದಿಯಿಂದ ತಿಳಿದುಬರುವಂತೆ ಬನಮಂಖಿ ನಿಲ್ದಾಣದಿಂದ ರೈಲು ಹೊರಡುವ ಮುನ್ನವೇ ವ್ಯಕ್ತಿ ಮೃತಪಟ್ಟಿದ್ದಾನೆ. ಅಲ್ಲಿ ರೈಲು ತೊಳೆದ ವ್ಯಕ್ತಿ ಗಮನ ಹರಿಸಿದ್ದರೆ ಪ್ರಕರಣ ಗಮನಕ್ಕೆ ಬರುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಮೂರು ದಿನಗಳ ಹಿಂದೆ ಸಾವು ಸಂಭವಿಸಿರಬೇಕು ಹಾಗೂ ದೇಹ ಕೊಳೆತು ಹೋಗಲು ಆರಂಭವಾಗಿತ್ತು ಎಂದು ರೈಲ್ವೆ ಆಸ್ಪತ್ರೆಯ ಡಾ.ಸಂಜಯ್ ರಾಯತ್ ಹೇಳಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಸಾಧ್ಯತೆ ಇದ್ದು, ಯಾವುದೇ ದೈಹಿಕ ಗಾಯಗಳು ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News