ದೊಡ್ಡ ಹುದ್ದೆಗಾಗಿ ಆಪ್‍ಗೆ 50 ಕೋಟಿ ರೂ. ನೀಡಿದ್ದೆ: ವಂಚನೆ ಪ್ರಕರಣದ ಆರೋಪಿಯಿಂದ ದಿಲ್ಲಿ ಗವರ್ನರ್‌ ಗೆ ಪತ್ರ

Update: 2022-11-01 17:56 GMT

ಹೊಸದಿಲ್ಲಿ,ನ.1: ಪ್ರಸ್ತುತ ಬಂಧನದಲ್ಲಿರುವ ಆಪ್ ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ಪ್ರೊಟೆಕ್ಷನ್ ಮನಿ’ ರೂಪದಲ್ಲಿ ತಾನು 10 ಕೋ.ರೂ.ಗಳನ್ನು ನೀಡಿದ್ದೆ,ಆದಾಗ್ಯೂ ಅವರು ತನಗೆ ಬೆದರಿಕೆಯೊಡ್ಡುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಹಾಲಿ ಜೈಲಿನಲ್ಲಿರುವ ವಂಚಕ ಸುಕೇಶ ಚಂದ್ರಶೇಖರ ದಿಲ್ಲಿಯ ಉಪ ರಾಜ್ಯಪಾಲ ವಿ.ಕೆ.ಸಕ್ಸೇನಾ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾನೆ. 

ದಕ್ಷಿಣ ವಲಯದಲ್ಲಿ ಪಕ್ಷದ ಪ್ರಮುಖ ಸ್ಥಾನದ ಭರವಸೆ ನೀಡಿದ್ದರಿಂದ ಆಪ್‌ಗೂ ತಾನು 50 ಕೋ.ರೂ. ನೀಡಿರುವುದಾಗಿ ಆತ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು,ವಂಚಕನನ್ನು ಬಿಜೆಪಿ ಅವಲಂಬಿಸಬೇಕಾಗಿರುವುದು ಗುಜರಾತಿನಲ್ಲಿ ಅದರ ಹತಾಶ ಸ್ಥಿತಿಯನ್ನು ತೋರಿಸುತ್ತಿದೆ ಮತ್ತು ಇದು ಮೊರ್ಬಿ ದುರಂತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಂಚಾಗಿದೆ ಎಂದು ಹೇಳಿದ್ದಾರೆ. 

ಈ ನಡುವೆ ಆಪ್ ವಿರುದ್ಧ ದಾಳಿ ನಡೆಸಿರುವ ಬಿಜೆಪಿ,ಅದೊಂದು ‘ಭ್ರಷ್ಟ ಪಕ್ಷ ’ಎಂದು ಬಣ್ಣಿಸಿದೆ.ಸುಕೇಶ ಹೇಳಿಕೆಗಳ ಕುರಿತು ಜಾರಿ ನಿರ್ದೇಶನಾಲಯ (ಈ.ಡಿ)ವು ತನಿಖೆಯನ್ನು ಆರಂಭಿಸಿದೆ.2015ರಿಂದಲೂ ತಾನು ಜೈನ್‌ರನ್ನು ಬಲ್ಲೆ ಎಂದು ಸುಕೇಶ ಪತ್ರದಲ್ಲಿ ಹೇಳಿದ್ದಾನೆ. ಜೈನ್,ಆಪ್ ಮತ್ತು ಕಾರಾಗೃಹಗಳ ಮಹಾ ನಿರ್ದೇಶಕರಿಗೆ ಹಣ ನೀಡಿದ್ದನ್ನು ತಾನು ಕಳೆದ ತಿಂಗಳು ಸಿಬಿಐ ತಂಡಕ್ಕೆ ತಿಳಿಸಿದ್ದೆ ಮತ್ತು ಸಿಬಿಐ ತನಿಖೆಯನ್ನು ಕೋರಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ದೂರುಅರ್ಜಿಯನ್ನೂ ಸಲ್ಲಿಸಿದ್ದೇನೆ ಎಂದು ಆತ ತಿಳಿಸಿದ್ದಾನೆ. ದೂರನ್ನು ಹಿಂದೆಗೆದುಕೊಳ್ಳುವಂತೆ ಜೈನ್ ತನಗೆ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ.

ಹಿರಿಯ ಜೈಲು ಅಧಿಕಾರಿಗಳು ಸುಕೇಶನಿಂದ ಲಂಚವನ್ನು ಪಡೆದಿದ್ದು ತನಿಖೆಯ ಸಂದರ್ಭ ಬೆಳಕಿಗೆ ಬಂದಿತ್ತಾದರೂ,ಆತ ಈಗ ತಿಳಿಸಿರುವ ವಿಷಯಗಳು ಸಂಪೂರ್ಣ ಹೊಸದಾಗಿವೆ. ತಾನು ಇದನ್ನು ಗಂಭೀರವಾಗಿ ಪರಿಗಣಿಸಿದ್ದು,ಸಮಗ್ರ ತನಿಖೆಯನ್ನು ನಡೆಸಲಿದ್ದೇನೆ. ಈ ಕುರಿತು ಶೀಘ್ರವೇ ಸುಕೇಶನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಈ.ಡಿ.ತಿಳಿಸಿದೆ

Similar News