×
Ad

ಸಾಹಿತ್ಯಿಕ ಪುಸ್ತಕ ವಿತರಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದ ಇಮ್ತಿಯಾಝ್

Update: 2022-11-01 19:25 IST

ಉಡುಪಿ‌ : ಕೆಮ್ಮಣ್ಣು ತೂಗು ಸೇತುವೆ ನೋಡಲು ಬರುವ ಪ್ರವಾಸಿಗರಿಗೆ  ಉಚಿತ ಸಾಹಿತ್ಯಿಕ ಪುಸ್ತಕ ವಿತರಣೆ ಹಾಗೂ ಪ್ರವಾಸಿಗರಿಗೆ ಉಚಿತ ಬೋಟ್ ರೈಡಿಂಗ್ ಕಲ್ಪಿಸುವ ಮೂಲಕ ಕನ್ನಡಾಭಿಮಾನಿ ಮುಹಮ್ಮದ್ ಇಮ್ತಿಯಾಝ್ ಕರ್ನಾಟಕ ರಾಜ್ಯೋತ್ಸವವನ್ನು ಇಂದು ವಿಶಿಷ್ಟವಾಗಿ ಆಚರಿಸಿದರು.  

ಸಾಹಿತ್ಯದಲ್ಲಿ ಅತೀವ ಆಸಕ್ತಿ ಇರುವ ಇಮ್ತಿಯಾಝ್, ಬೇಂದ್ರೆ, ಕುವೆಂಪು, ಜವಹರಲಾಲ್ ನೆಹರು, ಗಾಂಧೀಜಿ ಸೇರಿದಂತೆ ಅನೇಕ ವಿಜ್ಞಾನಿಗಳ ಜೀವನ ಚರಿತ್ರೆ ಪುಸ್ತಕಗಳನ್ನು ಖರಿದಿಸಿ ಪ್ರವಾಸಿಗರಿಗೆ ವಿತರಿಸಿದರು. ಇಷ್ಟೇ ಮಾತ್ರವಲ್ಲದೆ  ಕೆಮ್ಮಣ್ಣು ತೂಗುಸೇತುವೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ವಾಟರ್ ಎಡ್ವೆಂಚರ್ಸ್ ಕೆಮ್ಮಣ್ಣು ಸಂಸ್ಥೆ ಮೂಲಕ ಉಚಿತ ಸುವರ್ಣ ನದಿ ದರ್ಶನವನ್ನು ಕಲ್ಪಿಸಿದರು.

‘ನಮ್ಮ ನಾಡಿನ ಸಂಸ್ಕೃತಿಯ ಆಚರಣೆಗೆ ಹೆಚ್ಚಿನ ಮಹತ್ವವಿದೆ. ಅದಕ್ಕಾಗಿ ಈ ಬಾರಿ ಬಲು ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಯೋಚಿಸಿ ದ್ದೇವು. ಅದಕ್ಕಾಗಿ ಶ್ರೇಷ್ಠ ವಿಜ್ಞಾನಿಗಳು, ಸಾಧಕರ ಜೀವನ ಚರಿತ್ರೆಯ ಪುಸ್ತಕ ಗಳನ್ನು ವಿತರಿಸುವ ಮೂಲಕ ಎಲ್ಲರಿಗೂ ಕನ್ನಡ ಜ್ಞಾನ ಪಸರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಮುಹಮ್ಮದ್ ಇಮ್ತಿಯಾಝ್ ಕೆಮ್ಮಣ್ಣು ತಿಳಿಸಿದರು.

ಉಡುಪಿಯಲ್ಲಿ 2020ರಲ್ಲಿ ಭಾರಿ ಮಳೆಯಿಂದ ಸುವರ್ಣ ನದಿಯಲ್ಲಿ ಪ್ರವಾಹ ಉಂಟಾದಾಗ ಇಮ್ತಿಯಾಝ್, ಇಲ್ಯಾಸ್, ಸುಹೇಲ್ ಈ ಮೂವರು ಸಹೋದರರು ಪ್ರವಾಹದಲ್ಲಿ  ಸಿಲುಕಿಕೊಂಡ 242 ಕುಟುಂಬದವರನ್ನು ತಮ್ಮ ಕಯಾಕಿಂಗ್ ಬೋಟುಗಳಲ್ಲಿ ರಕ್ಷಿಸಿದ್ದರು.  ಅಂದಿನ ಜಿಲ್ಲಾಧಿಕಾರಿ ಜಿ.ಜಗದೀಶ್   ಅವರ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.

Similar News