×
Ad

ಟ್ವಿಟರ್ ಸ್ವಾಧೀನದಲ್ಲಿ ಎಲಾನ್ ಮಸ್ಕ್ ಗೆ ನೆರವಾಗುತ್ತಿರುವ ಸಾಫ್ಟ್ ವೇರ್ ತಂತ್ರಜ್ಞ ಶ್ರೀರಾಮ ಕೃಷ್ಣನ್ ಯಾರು?

Update: 2022-11-01 20:21 IST

ಹೊಸದಿಲ್ಲಿ,ನ.1: ಟ್ವಿಟರ್‌ನಲ್ಲಿ ಉನ್ನತ ಹಂತದಲ್ಲಿ ಬದಲಾವಣೆಗಳನ್ನು ಮಾಡುತ್ತಿರುವ ಎಲಾನ್ ಮಸ್ಕ್ ತನ್ನ ಸುತ್ತಲೂ ಸಲಹೆಗಾರರ ಗುಂಪೊಂದನ್ನು ಇಟ್ಟುಕೊಂಡಿದ್ದಾರೆ. ಈ ಗುಂಪಿನಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಡೇವಿಡ್ ಸ್ಯಾಕ್ಸ್,ಮಸ್ಕ್ ಅವರ ಹಲವಾರು ನಿಕಟ ಉದ್ಯಮ ಸಹವರ್ತಿಗಳೊಂದಿಗೆ ಭಾರತೀಯ ಅಮೆರಿಕನ್ ಶ್ರೀರಾಮ ಕೃಷ್ಣನ್ ಅವರೂ ಸೇರಿದ್ದಾರೆ.

ಈ ಹಿಂದೆ ಟ್ವಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣನ್ ಸಿಲಿಕಾನ್ ವ್ಯಾಲಿಯ ಹೂಡಿಕೆ ಸಂಸ್ಥೆ ಆ್ಯಂಡ್ರೀಸನ್ ಹೊರೊವಿಝ್(a16z)ನ ಪಾಲುದಾರರಾಗಿದ್ದಾರೆ. ಇದು ಮಸ್ಕ್ ಅವರಿಂದ ಟ್ವಿಟರ್ ಖರೀದಿಯಲ್ಲಿ ಹೂಡಿಕೆ ಮಾಡಿದೆ.

ದಿ ನ್ಯೂಯಾರ್ಕ್ ಟೈಮ್ಸ್‌ನ ವರದಿಯಂತೆ ಅ.31ರಂದು ಮಸ್ಕ್ ನ್ಯೂಯಾರ್ಕ್‌ಗೆ ತೆರಳಿದ್ದಾಗ ಕೃಷ್ಣನ್ ಮತ್ತು ಇತರರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್‌ನ ಮುಖ್ಯಕಚೇರಿಯ ಹೊಣೆಯನ್ನು ವಹಿಸಿಕೊಂಡಿದ್ದರು. ಅ.31ರಂದು ಟ್ವಿಟರ್ ಕಚೇರಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕೃಷ್ಣನ್,ತಾನು ‘ತಾತ್ಕಾಲಿಕ ನೆಲೆಯಲ್ಲಿ ’ ಮಸ್ಕ್ ಅವರಿಗೆ ನೆರವಾಗುತ್ತಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷದ ಜುಲೈನಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ಪ್ರೊಫೈಲ್‌ನಂತೆ ಕೃಷ್ಣನ್ ಮತ್ತು ಅವರ ಪತ್ನಿ ಆರತಿ ರಾಮಮೂರ್ತಿ ಚೆನ್ನೈನ ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳಲ್ಲಿ ಜನಿಸಿದ್ದರು. 2003ರಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಮಾಡುತ್ತಿದ್ದಾಗ ಅವರಿಬ್ಬರೂ ಕಾಲೇಜಿನಲ್ಲಿ ಭೇಟಿಯಾಗಿದ್ದರು. ಅದಕ್ಕೂ ಮುನ್ನ ಕೋಡಿಂಗ್ ಪ್ರಾಜೆಕ್ಟ್‌ಗಾಗಿ ಯಾಹೂ ಚಾಟ್‌ರೂಮ್‌ನಲ್ಲಿ ಅವರಿಬ್ಬರೂ ವರ್ಚುವಲ್ ಆಗಿ ಪರಸ್ಪರರನ್ನು ಭೇಟಿಯಾಗಿದ್ದರು. ಈಗ 37ರ ಹರೆಯದ ದಂಪತಿ ಸ್ಯಾನ್‌ಫ್ರಾನ್ಸಿಸ್ಕೋದ ನೋ ವ್ಯಾಲಿಯಲ್ಲಿ ವಾಸವಿದ್ದಾರೆ. ಕೃಷ್ಣನ್ ದಂಪತಿಗೆ ಎರಡು ವರ್ಷದ ಪುತ್ರಿಯಿದ್ದಾಳೆ.

ಟ್ವಿಟರ್ ಅಲ್ಲದೆ ಯಾಹೂ,ಫೇಸ್‌ಬುಕ್ ಮತ್ತು ಸ್ನಾಪ್‌ಗಳಲ್ಲಿಯೂ ಕೃಷ್ಣನ್ ಮ್ಯಾನೇಜರ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2020ರಲ್ಲಿ ಅವರು ಆ್ಯಂಡ್ರೀಸನ್ ಹೊರೊವಿಝ್ ಅನ್ನು ಸೇರಿದ್ದರು. ಹೊರೊವಿಝ್ 2020ರಲ್ಲಿ ಬಿಡುಗಡೆಗೊಂಡ ಸಾಮಾಜಿಕ ಆಡಿಯೋ ಆ್ಯಪ್ ಕ್ಲಬ್‌ಹೌಸ್‌ನಲ್ಲಿ ಪ್ರಮುಖ ಹೂಡಿಕೆದಾರನಾಗಿದೆ. ಆರತಿ ರಾಮಮೂರ್ತಿ ನೆಟ್‌ಫ್ಲಿಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಕೆಲಸ ಮಾಡಿದ್ದು,ಟ್ರೂ ಆ್ಯಂಡ್ ಕೋ. ಮತ್ತು ಲುಮಾಯ್ಡ್ ಸ್ಟಾರ್ಟ್ ಅಪ್‌ಗಳನ್ನು ಪರಿಚಯಿಸಿದ್ದಾರೆ.

2021,ಫೆಬ್ರವರಿಯಲ್ಲಿ ಕ್ಲಬ್‌ಹೌಸ್‌ನಲ್ಲಿ ಕೃಷ್ಣನ್ ಮತ್ತು ಆರತಿ ಅವರ ಪ್ರಭಾವಿ ‘ಗುಡ್ ಟೈಮ್ಸ್ ಶೋ’ ದಲ್ಲಿ ಮಸ್ಕ್ ಕಾಣಿಸಿಕೊಂಡಿದ್ದರು. ಕೃಷ್ಣನ್ ದಂಪತಿ ಅದಕ್ಕೂ ಮುನ್ನ ಕ್ಯಾಲಿಫೋರ್ನಿಯಾದ ಹಾಥ್ರೋನ್‌ನಲ್ಲಿರುವ ಸ್ಪೇಸ್ ಎಕ್ಸ್ ಕೇಂದ್ರಕಚೇರಿಯಲ್ಲಿ ಮಸ್ಕ್‌ರನ್ನು ಭೇಟಿಯಾಗಿದ್ದರು. ಮಸ್ಕ್ ಮಾತ್ರವಲ್ಲ,ಮಾರ್ಕ್ ಝಕರ್‌ಬರ್ಗ್ ಮತ್ತು ದಿವಂಗತ ಫ್ಯಾಷನ್ ವಿನ್ಯಾಸಕ ವರ್ಜಲ್ ಆಬ್ಲೋ ಅವರನ್ನೂ ಕೃಷ್ಣನ್ ದಂಪತಿ ತಮ್ಮ ಶೋಕ್ಕೆ ಕರೆತಂದಿದ್ದರು.

Similar News