ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ರೋಹಿತ್‌ ವೇಮುಲಾ ತಾಯಿ

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದಾಳಿಯಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್‌ಗೆ ಬೆಂಬಲಿಸಲು ಕರೆ

Update: 2022-11-01 16:12 GMT

ಹೈದರಾಬಾದ್:‌ 2016 ರಲ್ಲಿ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ ಅವರು ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಆತ್ಮಹತ್ಯಾ ಪತ್ರದಲ್ಲಿ ವಿಶ್ವವಿದ್ಯಾಲಯದಿಂದ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳವನ್ನು ಆರೋಪಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮುಖಂಡರೊಬ್ಬರ ದೂರಿನ ಮೇರೆಗೆ ವೇಮುಲಾ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಲಾಗಿತ್ತು. ಈ ಪ್ರಕರಣವು ದೇಶಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಹಬ್ಬಿರುವ ಜಾತೀಯತೆ ಬಗ್ಗೆ ಚರ್ಚೆಗೆ ಕಾರಣವಾಗಿತ್ತು.

ಮಂಗಳವಾರ ಬೆಳಿಗ್ಗೆ, ರಾಧಿಕಾ ವೇಮುಲಾ ಅವರು ಕಾಂಗ್ರೆಸ್‌ನ ಭಾರತ್‌ ಜೋಡೋ ಅಭಿಯಾನವು ಹೈದರಾಬಾದ್ ಪ್ರವೇಶಿಸುತ್ತಿದ್ದಂತೆ ಗಾಂಧಿಯವರೊಂದಿಗೆ ನಡೆದರು.

ಭಾರತ್ ಜೋಡೋ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ದಾಳಿಯಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್‌ಗೆ ಬೆಂಬಲಿಸಲು ಕರೆ ನೀಡಿದ್ದಾರೆ. ನ್ಯಾಯಾಂಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ದಲಿತರು ಮತ್ತು ಇತರ ತುಳಿತಕ್ಕೊಳಗಾದ ವರ್ಗಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲು ಅವರು ತಮ್ಮ ಮಗನ ಹೆಸರಿನಲ್ಲಿ ಕಾನೂನನ್ನು ರಚಿಸಲು ಒತ್ತಾಯಿಸಿದರು.

ರಾಧಿಕಾ ವೇಮುಲಾ ಅವರನ್ನು ತಬ್ಬಿಕೊಂಡಿರುವ ಫೋಟೋಗಳನ್ನು ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ರೋಹಿತ್ ವೇಮುಲಾ ಸಾಮಾಜಿಕ ತಾರತಮ್ಯ ಮತ್ತು ಅನ್ಯಾಯದ ವಿರುದ್ಧದ ನನ್ನ ಹೋರಾಟದ ಸಂಕೇತವಾಗಿ ಯಾವಾಗಲೂ ಉಳಿಯುತ್ತಾರೆ" ಎಂದು ಅವರು ಬರೆದಿದ್ದಾರೆ. "ರೋಹಿತ್ ಅವರ ತಾಯಿಯನ್ನು ಭೇಟಿಯಾದ ನಂತರ ಈ ಪ್ರಯಾಣದ ಗುರಿಯತ್ತ ಸಾಗಲು ನನಗೆ ಹೊಸ ಧೈರ್ಯ ಮತ್ತು ಶಕ್ತಿ ಸಿಕ್ಕಿತು." ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Similar News