ಗೋಮಾಂಸ ಸಾಗಾಟ ಆರೋಪ: ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಅರೆನಗ್ನಗೊಳಿಸಿ ಥಳಿಸಿದ ಗುಂಪು

Update: 2022-11-02 13:06 GMT

ಭೋಪಾಲ್: ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಬೆಲ್ಟ್‌ನಿಂದ ಥಳಿಸಿದ   ಆಘಾತಕಾರಿ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ವೈರಲ್‌ ಆಗಿದ್ದು, ಇಬ್ಬರು ವ್ಯಕ್ತಿಗಳನ್ನು ಅರೆಬೆತ್ತಲೆಗೊಳಿಸಿ ಗುಂಪೊಂದು ಥಳಿಸುತ್ತಾ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 33 ಕೆಜಿಗೂ ಅಧಿಕ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರಸಿಂಗ್ ದಾಸ್ (50) ಮತ್ತು ರಾಮನಿವಾಸ್ ಮೆಹರ್ (52) ಅವರು ಬಿಳಿ ಗೋಣಿಚೀಲವನ್ನು ತುಂಬಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು, ಅದರಲ್ಲಿ ಗೋಮಾಂಸ ಇತ್ತು ಎಂದು ಆರೋಪಿಸಿ ಸುಮಿತ್ ನಾಯಕ್ ಎಂಬಾತ ನಿನ್ನೆ ದೂರು ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 33.5 ಕೆಜಿ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,  ಪತ್ತೆಯಾದ ಮಾಂಸವನ್ನು ಪಶುವೈದ್ಯರು ಪರೀಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಈ ಪರೀಕ್ಷೆಯ ವರದಿಯ ಬಗ್ಗೆ ಯಾವುದೇ ವಿವರಗಳು ಲಭಿಸಿಲ್ಲ ಎಂದು ndtv.com ವರದಿ ಮಾಡಿದೆ.

ಎನ್‌ಡಿಟಿವಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಸ್ತೆಯಲ್ಲಿ ಗೂಂಡಾಗಿರಿ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದು ವರದಿ ಹೇಳಿದೆ.

Similar News