ಕಾಬೂಲ್: ಬಾಂಬ್ ಸ್ಫೋಟ, 7 ಸರಕಾರಿ ಸಿಬ್ಬಂದಿಗಳಿಗೆ ಗಾಯ
ಕಾಬೂಲ್, ನ.2: ಅಫ್ಘಾನಿಸ್ತಾನ(Afghanistan )ದ ರಾಜಧಾನಿ ಕಾಬೂಲ್ನಲ್ಲಿ ಬುಧವಾರ ಬೆಳಿಗ್ಗೆ ಸಚಿವಾಲಯದ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಬಸ್ಸನ್ನು ಗುರಿಯಾಗಿಸಿ ನಡೆಸಿದ ಬಾಂಬ್ ದಾಳಿ(Bomb attack)ಯಲ್ಲಿ ಬಸ್ಸಿನಲ್ಲಿದ್ದ 7 ಸಿಬಂದಿಗಳು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಗ್ರಾಮೀಣ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವಾಲಯದ ಬಸ್ಸಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 7 ಸಿಬಂದಿಗಳು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಬದಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಈ ದುರ್ಘಟನೆ ನಡೆದಿದ್ದು ಇದುವರೆಗೆ ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಲ್ಲ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝರ್ದಾನ್ ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ಪ್ರಕರಣ ಹೆಚ್ಚಿದ್ದು ದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಗೆ ಮೊದಲ ಆದ್ಯತೆ ನೀಡುವುದಾಗಿ ತಾಲಿಬಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.