ಉಕ್ರೇನ್ನಿಂದ ಧಾನ್ಯ ರಫ್ತು ಪುನರಾರಂಭ

Update: 2022-11-02 17:33 GMT

ಕೀವ್, ನ.2: ಸುರಕ್ಷಿತ ಕಪ್ಪು ಸಮುದ್ರ ಕಾರಿಡಾರ್ ಸ್ಥಾಪಿಸಲು ವಿಶ್ವಸಂಸ್ಥೆ ಮತ್ತು ಟರ್ಕಿ(Turkey)ಯ ಮಧ್ಯಸ್ಥಿಕೆಯ ಒಪ್ಪಂದಕ್ಕೆ ಮರು ಸೇರ್ಪಡೆಗೊಳ್ಳುವುದಾಗಿ ರಶ್ಯ ಬುಧವಾರ ಘೋಷಿಸಿದ ಬಳಿಕ ಉಕ್ರೇನ್(Ukraine) ಬಂದರಿನಿಂದ ಆಹಾರ ಧಾನ್ಯ ರಫ್ತು ಪ್ರಕ್ರಿಯೆಗೆ ಮತ್ತೆ ಚಾಲೆ ದೊರಕಿದೆ ಎಂದು ವರದಿಯಾಗಿದೆ.

ಸಮುದ್ರ ಕಾರಿಡಾರ್ ಅನ್ನು ನಿರಸ್ತ್ರೀಕರಣಗೊಳಿಸುವ ಬಗ್ಗೆ ಉಕ್ರೇನ್ನಿಂದ ತೃಪ್ತಿಕರ ಖಾತರಿ ಪಡೆದ ಬಳಿಕ ಒಪ್ಪಂದಕ್ಕೆ ಮರು ಸೇರ್ಪಡೆಗೊಳ್ಳಲು ನಿರ್ಧರಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

   ಕ್ರಿಮಿಯಾ ಪ್ರಾಂತದಲ್ಲಿ ತನ್ನ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಯುತ್ತಿದೆ ಎಂದು ದೂಷಿಸಿರುವ ರಶ್ಯ, ಉಕ್ರೇನ್ ಬಂದರಿನಿಂದ ಪ್ರಮುಖ ವಸ್ತುಗಳ ಸಾಗಣೆಗೆ ಅವಕಾಶ ನೀಡುವ ಒಪ್ಪಂದದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಅಮಾನತುಗೊಳಿಸಿದ ಬಳಿಕ ಉಕ್ರೇನ್ನಿಂದ ಧಾನ್ಯಗಳ ರಫ್ತು ಪ್ರಕ್ರಿಯೆ ಅಕ್ಟೋಬರ್ 30ರಂದು ಸ್ಥಗಿತಗೊಂಡಿತ್ತು.

 ಧಾನ್ಯ ರಫ್ತು ಪ್ರಕ್ರಿಯೆ ಪುನರಾರಂಭವಾಗಿರುವುದು ಉತ್ತಮ ಬೆಳವಣಿಗೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ಎರ್ಡೋಗನ್ ಸಂಸತ್ತಿನಲ್ಲಿ ಹೇಳಿದ್ದಾರೆ. ‘ರಶ್ಯದ ನಿರ್ಧಾರ ಸ್ವಾಗತಾರ್ಹ. ಆಹಾರ ಧಾನ್ಯದ ಒಪ್ಪಂದದ ವಿಷಯದಲ್ಲಿ ರಶ್ಯದ ಬ್ಲ್ಯಾಕ್ಮೇಲ್ ವಿಫಲವಾಗಿದೆ. ತನ್ನ ಪಾತ್ರವಿಲ್ಲದೆಯೂ ಈ ಒಪ್ಪಂದ ಮುಂದುವರಿಯುತ್ತದೆ ಎಂಬುದು ರಶ್ಯಕ್ಕೆ ಮನವರಿಕೆ ಆಗಿರುವುದರಿಂದ ಅದು ಈ ನಿರ್ಧಾರಕ್ಕೆ ಬಂದಿದೆ’ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಪ್ರತಿಕ್ರಿಯಿಸಿದ್ದಾರೆ.

Similar News