×
Ad

ಹಿಂದುಳಿದ ವರ್ಗಗಳು ನಿಜವಾಗಿ ಉದ್ಧಾರವಾಗಿವೆಯೇ?

Update: 2022-11-03 00:05 IST

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಿಜೆಪಿಯ ಹಿಂದುಳಿದ ವರ್ಗಗಳ ವಿರಾಟ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಸಮುದಾಯವನ್ನು ಉತ್ಕೃಷ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಘೋಷಿಸಲಾಗಿದೆ. ಆದರೆ ವಾಸ್ತವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡಲಾದ ಅನುದಾನ, ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಕ್ಕೆ ನೀಡಲಾದ ಅನುದಾನ ಮತ್ತು ಬಿಡುಗಡೆ, ಖರ್ಚು ವೆಚ್ಚದ ಮೇಲೆ ಸರಕಾರ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಯ ಕಾಳಜಿ ಹೇಗಿತ್ತು ಎನ್ನುವುದರ ಕುರಿತು ಚರ್ಚಿಸಬಹುದಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2017-18ನೇ ಸಾಲಿನಲ್ಲಿ ಒದಗಿಸಲಾದ ಅನುದಾನ 2,791.52 ಕೋ.ರೂ., 2020-21ನೇ ಸಾಲಿನಲ್ಲಿ ಸದರಿ ಅನುದಾನವನ್ನು ಕಡಿತಗೊಳಿಸಿ 2,003.32 ಕೋ.ರೂ ಗೆ ಇಳಿಸಲಾಗಿದೆ, ಇಲಾಖೆಗೆ ಒದಗಿಸಲಾಗುವ ಅನುದಾನ ಕಡಿತಗೊಳಿಸಿ ಯಾವ ರೀತಿ ಜನ ಕಲ್ಯಾಣದ ಕುರಿತು ಮಾತನಾಡಬಹುದು. ಸರಕಾರದ ಬಜೆಟ್ ಗಾತ್ರ 2017-18ರಲ್ಲಿ 1,86,561 ಕೋ.ರೂ., 2022-23ನೇ ಸಾಲಿನಲ್ಲಿ 2,65,720 ಕೋ.ರೂ., ಅಂದರೆ ಪ್ರತೀ ವರ್ಷ ಸರಕಾರದ ಬಜೆಟ್ ಗಾತ್ರ ಹೆಚ್ಚಾಗುತ್ತ ಬಂದಿದೆ, ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನ ಸಹ ಕ್ರಮೇಣವಾಗಿ ಹೆಚ್ಚಾಗಬೇಕಾಗಿತ್ತು, ಆದರೆ ಈ ಸರಕಾರದಲ್ಲಿ ಅದು ಗಣನೀಯವಾಗಿ ಕಡಿಮೆಯಾಗಿರುವುದು, ಈ ಸರಕಾರ ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಬದ್ಧತೆ ಹೊಂದಿಲ್ಲವೆಂದು ಹೇಳಬಹುದು. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಅನುದಾನದಲ್ಲಿ ಐದಾರು ನಿಗಮ ಮಂಡಳಿಗಳನ್ನು ರಚಿಸಲಾಗಿದೆ, ಅದರಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ ಇತ್ಯಾದಿ ಹೊಸದಾಗಿ ನಿಗಮಗಳನ್ನು ಪ್ರಾರಂಭಿಸಿ ಈ ಹಿಂದೆ ರಚಿಸಲಾದ ನಿಗಮಗಳ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋ.ರೂ., ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮಕ್ಕೆ 500 ಕೋ.ರೂ. ಹಾಗೂ ಮರಾಠಾ ಅಭಿವೃದ್ಧಿ ನಿಗಮಕ್ಕೆ 50 ಕೋ.ರೂ. ಎಂದು ಘೋಷಿಸಲಾಗಿದೆ. ನಿಗಮ ಮಂಡಳಿಗಳ ಸಂಖ್ಯೆ ಹೆಚ್ಚಾಗಿದ್ದರೂ ನಿಗಮಗಳಿಗೆ ಮೀಸಲಿಟ್ಟ ಅನುದಾನ ಹೆಚ್ಚಾಗದೆ, ಹಿಂದಿನ ವರ್ಷಗಳಲ್ಲಿ ನಿಗದಿಗೊಳಿಸಿದ ಅನುದಾನವನ್ನು ಕಡಿತಗೊಳಿಸಿ ವಿವಿಧ ನಿಗಮ ಮಂಡಳಿಗಳಿಗೆ ಮರುಹಂಚಿಕೆಯಾಗಿದೆ. ವಿಶೇಷವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಕಳೆದ ವರ್ಷ 500 ಕೋ.ರೂ.ಯೊಂದಿಗೆ ನಿಗಮವನ್ನು ಪ್ರಾರಂಭಿಸಿ, ಈ ವರ್ಷ ಕೇವಲ 100. ಕೋ.ರೂ. ಅನುದಾನ ನಿಗದಿಗೊಳಿಸಿರುವುದು ಆ ಸಮುದಾಯದ ಜನರಿಗೆ ಮೂಗಿಗೆ ತುಪ್ಪಸವರುವ ಕೆಲಸ ಸರಕಾರ ಮಾಡಿದೆ. ಇದನ್ನು ಸರಕಾರ ಆರಂಭ ಶೂರರ ರೀತಿ ನಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇದೇ ಪರಸ್ಥಿತಿ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮಕ್ಕೂ ಬಂದಿದೆ. ಈ ವರ್ಷ ಕೇವಲ 100 ಕೋ.ರೂ. ಅನುದಾನ ನಿಗದಿಗೊಳಿಸಲಾಗಿದೆ.

 ಕಳೆದ ಐದು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಸಾಕಷ್ಟು ಕಡಿತಗೊಳಿಸಲಾಗಿದೆ. ಪ್ರತೀ ವರ್ಷ ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದು ಸಾಮಾನ್ಯ. ಅದರಂತೆ ವಿದ್ಯಾರ್ಥಿ ವೇತನ ಪಡೆಯುವವರ ಸಂಖ್ಯೆಯೂ ಹೆಚ್ಚಾಗಬೇಕಿತ್ತು. ಆದರೆ ಸರಕಾರ ಅನುದಾನ ಕಡಿತಗೊಳಿಸಿರುವುದರಿಂದ ವಿದ್ಯಾರ್ಥಿವೇತನ ಹಂಚಿಕೆ ಕಡಿಮೆ ಮಾಡಲಾಗಿದೆ ಎಂದು ಅಂದಾಜಿಸಬಹುದಾಗಿದೆ. ಈ ವರ್ಷ ಅಂದರೆ 2022-23ನೇ ಸಾಲಿನಲ್ಲಿ ರೈತರ ಮಕ್ಕಳಿಗೆ ನೀಡಲಾಗುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಲ್ಲಿ ಇನ್ನುಳಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದಿರುವುದರಿಂದ ಹಿಂದುಳಿದ ವರ್ಗಗಳ ಇಲಾಖೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರಬಹುದು ಎಂದು ಹೇಳಬಹುದು. ಆದರೆ ಇದು ಕಳೆದ ನಾಲ್ಕು ವರ್ಷಗಳಿಂದ ನಿರಂತರ ವಿದ್ಯಾರ್ಥಿ ವೇತನ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಆಶ್ಚರ್ಯ ಮತ್ತು ಅಘಾತಕಾರಿ ವಿಷಯ. ಕಳೆದ ನಾಲ್ಕು ವರ್ಷಗಳಲ್ಲಿ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ. ಅಲ್ಲದೆ ಆ ವಿದ್ಯಾರ್ಥಿಗಳು ಎಲ್ಲಿ ಹೋದರು ಎನ್ನುವ ವಿಷಯ ಸರಕಾರದ ಗಮನಕ್ಕೆ ಬಂದಿದೆಯೇ? ಆರ್ಥಿಕ ತೊಂದರೆಯಿಂದ ಹಲವರು ಶಿಕ್ಷಣವನ್ನು ಮಧ್ಯದಲ್ಲಿಯೇ ತೊರೆದರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಇದು ಸರಕಾರ ತನಿಖೆ ಮಾಡುವ ಅಗತ್ಯವಿದೆ, ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯಲು ಕಾರಣವೇನು.

ಹಾಗೆಯೇ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಹೇಳಲಾಗಿದೆ, 2012-13ನೇ ಸಾಲಿಗಿಂತ ಹಿಂದೆ ಕೇವಲ ನಿಗದಿತ ಅನುದಾನಕ್ಕೆ ಮಾತ್ರ ಶುಲ್ಕ ವಿನಾಯಿತಿ ಮರುಪಾವತಿ ಯೋಜನೆಯಿದ್ದು, ಹೆಚ್ಚುವರಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಇರಲಿಲ್ಲ. 2012-13ನೇ ಸಾಲಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಅನುದಾನ ಕೇವಲ 98.14 ಕೋ.ರೂ. ಇದ್ದು, 2,17,537 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮರುಪಾವತಿಸಲಾಗಿದೆ. ಆದರೆ, 2013-14ನೇ ಸಾಲಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಶುಲ್ಕ ವಿನಾಯಿತಿ ಅನುದಾನವನ್ನು ಅಂದಿನ ಸರಕಾರ 235.00 ಕೋ.ರೂ.ಗೆ ಹೆಚ್ಚಿಸಿ, ಸುಮಾರು 3,74,581 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಯೋಜನೆಯಡಿಯಲ್ಲಿ ಶುಲ್ಕವನ್ನು ಮರುಪಾವತಿಸಲಾಗಿದೆ. ಇದು 2017-18ನೇ ಸಾಲಿನಲ್ಲಿ 350 ಕೋ.ರೂ. ಅನುದಾನದೊಂದಿಗೆ ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಯೋಜನೆಯಡಿಯಲ್ಲಿ ಶುಲ್ಕವನ್ನು ಮರುಪಾವತಿಸಲಾಗಿದೆ. ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಪ್ರಾರಂಭಿಸಿದ ವಿದ್ಯಾಸಿರಿ ಯೋಜನೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣಕ್ಕೆ ಬಂದು ತಮ್ಮ ಶಿಕ್ಷಣ ಮುಂದುವರಿಸುವಾಗ ಸರಕಾರಿ ವಸತಿ ನಿಲಯದಲ್ಲಿ ಅವಕಾಶ ಸಿಗದೆ ಇರುವ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು 1,500 ರೂ. ನೀಡುವ ಯೋಜನೆ ಇದಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಚಾತಕ ಪಕ್ಷಿಯಂತೆ ಇಂದಲ್ಲ ನಾಳೆ ಸರಕಾರ ಹಣ ಬಿಡುಗಡೆ ಮಾಡುತ್ತದೆ ಎಂದು ಕಾಯುತ್ತ ಕುಳಿತಿರುತ್ತಾರೆ. ಆದರೆ ಸರಕಾರ ಇಂತಹ ಜನಪರ ಯೋಜನೆಗೆ ಅನುದಾನ ನೀಡದೆ ವಿದ್ಯಾರ್ಥಿಗಳನ್ನು ನಿರಾಸೆಗೊಳಿಸುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಕೇವಲ 150 ಕೋ.ರೂ. ಮಾತ್ರ ಈ ಯೋಜನೆಗೆ ಮೀಸಲಿಟ್ಟಿದೆ.

ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿದ್ದಾಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹೊಸದಾಗಿ 100 ವಸತಿ ನಿಲಯಗಳನ್ನು ಮಂಜೂರಾತಿ ನೀಡಿ, ಪ್ರಾರಂಭಿಸಿತ್ತು. ಈಗ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ವಸತಿ ನಿಲಯಗಳ ಬೇಡಿಕೆ ಹೆಚ್ಚಾಗಿದೆ. ಆದರೆ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಕೇವಲ ಕೆಲವೇ ಜಿಲ್ಲೆಗಳಿಗೆ ನಾಲ್ಕೈದು ವಸತಿ ನಿಲಯಗಳನ್ನು ಮಾತ್ರ ಮಂಜೂರು ಮಾಡಿದ್ದು ಬಿಟ್ಟರೆ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ವಸತಿ ನಿಲಯಗಳನ್ನು ಮಂಜೂರು ಮಾಡದಿರುವುದು ಇವರ ಕಾಳಜಿಗೆ ಹಿಡಿದ ಕನ್ನಡಿಯಂತಿದೆ. ನಾರಾಯಣ ಗುರುಗಳ ಹೆಸರಿನಲ್ಲಿ ಸರಕಾರ ಕೇವಲ ಐದು ಜಿಲ್ಲೆಗಳಿಗೆ ಮಾತ್ರ ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಆದರೆ ಆ ಸಮುದಾಯದ ಜನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದ್ದು, ನಾರಾಯಣ ಗುರುಗಳ ಹೆಸರಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ವಸತಿ ಶಾಲೆಗಳನ್ನು ಮಂಜೂರು ಮಾಡಬಹುದಿತ್ತು. ಸರಕಾರ ಕೇವಲ ವೋಟ್‌ಬ್ಯಾಂಕ್ ದೃಷ್ಟಿಯಿಂದ ಕರಾವಳಿ ಭಾಗಕ್ಕೆ ಮಾತ್ರ ಮಂಜೂರು ಮಾಡಿರುವುದು ಹಿಂದುಳಿದ ವರ್ಗಗಳ ಇವರ ಕಾಳಜಿ ಎಂತಹದ್ದು ಎಂದು ಹೇಳಬಹುದು.

ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳ ಮೂಲಕ ಜಾರಿಗೊಳಿಸಲಾಗುವ ಹಲವಾರು ಯೋಜನೆಗಳನ್ನು ಸರಕಾರ ಅನುದಾನದ ಕೊರತೆಯಿಂದ ಸ್ಥಗಿತಗೊಳಿಸಿರುವುದು ಸಹ ಹಿಂದುಳಿದ ವರ್ಗಗಳ ಬಡ ಜನತೆಗೆ ಮಾಡಿದ ದ್ರೋಹವೆಂದೇ ಹೇಳಬಹುದು. ಸರಕಾರದ ಈ ನಡೆ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಯ ಹಿನ್ನಡೆಯಂತಿದೆ.

Similar News