ತೀವ್ರ ಮಟ್ಟಕ್ಕೆ ತಲುಪಿದ ದಿಲ್ಲಿ ವಾಯು ಮಾಲಿನ್ಯ; ಶಾಲೆಗಳಿಗೆ ರಜೆ ನೀಡುವಂತೆ ಪೋಷಕರ ಒತ್ತಾಯ

Update: 2022-11-03 08:20 GMT

ಹೊಸದಿಲ್ಲಿ: ಬುಧವಾರದಂದು ಅಲ್ಪ ಸುಧಾರಣೆಯ ನಂತರ ಮಾಲಿನ್ಯದ ಮಟ್ಟವು ಮತ್ತೆ "ತೀವ್ರ" ಸ್ವರೂಪಕ್ಕೆ ತಿರುಗಿದ ಕಾರಣ ಇಂದು ಬೆಳಗ್ಗೆ ದಿಲ್ಲಿ ಹಾಗೂ ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ದಟ್ಟವಾದ ಹೊಗೆ ಆವರಿಸಿದೆ.

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಅಥವಾ AQI 426 ರಷ್ಟಿದೆ. ಇದು ನೆರೆಯ ರಾಜ್ಯಗಳಲ್ಲಿ ಕೃಷಿ ಚಟುವಟಿಕೆಯಿಂದ ಹೊರಬಂದ ಬೆಂಕಿ ಹಾಗೂ  ವಾಹನಗಳ ಹೊರಸೂಸುವಿಕೆಯ ಪರಿಣಾಮ ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳು ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗಿವೆ.

401 ಹಾಗೂ  500 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ತೀವ್ರ ಎಂದು ವರ್ಗೀಕರಿಸಲಾಗಿದೆ.

ದಿಲ್ಲಿಯಲ್ಲಿ ಅನಿವಾರ್ಯವಾಗಿ ವಿಷಕಾರಿಗಾಳಿಯನ್ನು ಉಸಿರಾಡಬೇಕಾಗಿರುವುದರಿಂದ ಹಲವಾರು ನಿವಾಸಿಗಳು ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿರುವುದು ವರದಿಯಾಗಿದೆ. ವಯಸ್ಸಾದವರು ಹಾಗೂ ಶಾಲಾ ಮಕ್ಕಳು ಹೆಚ್ಚು ಪೀಡಿತರಾಗಿದ್ದಾರೆ.

ವಿಷಕಾರಿ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ವಿಶೇಷವಾಗಿ ಬೆಳಿಗ್ಗೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಪ್ರಮುಖ ಖಾಸಗಿ ಶಾಲೆಯಾದ ಶ್ರೀ ರಾಮ್ ಶಾಲೆಯು ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ದಿಲ್ಲಿ ಮತ್ತು ಹರ್ಯಾಣದಲ್ಲಿನ ತನ್ನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ಸ್ಥಗಿತಗೊಳಿಸಿದೆ. ಶಾಲೆಯು ನಾಳೆಯಿಂದ ಆನ್‌ಲೈನ್ ತರಗತಿಗಳನ್ನು ನಡೆಸಲಿದೆ.

ಹೆಚ್ಚಿನ ಶಾಲೆಗಳು ಇದೇ ರೀತಿ ಮಾಡಬಹುದು ಎಂದು ಮೂಲಗಳು ಹೇಳುತ್ತವೆ. ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಒತ್ತಾಯಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

Similar News