ಟ್ವೆಂಟಿ-20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಪ್ರಯಾಸದ ಗೆಲುವು
ಅಡಿಲೇಡ್, ನ.4: ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶುಕ್ರವಾರ ಆಡಿದ ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವು ಅಫ್ಘಾನಿಸ್ತಾನ ವಿರುದ್ಧ 4 ರನ್‌ನಿಂದ ಪ್ರಯಾಸದ ಗೆಲುವು ದಾಖಲಿಸಿದೆ.
ಆಸ್ಟ್ರೇಲಿಯ 5 ಪಂದ್ಯದಲ್ಲಿ ಒಟ್ಟು 7 ಅಂಕ ಗಳಿಸಿ ಗ್ರೂಪ್-1ರ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು ಮಣಿಸಿದರೆ ಆಸ್ಟ್ರೇಲಿಯವು ಸೆಮಿ ಫೈನಲ್ ಸ್ಪರ್ಧೆಯಿಂದ ಹೊರ ನಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಅಫ್ಘಾನಿಸ್ತಾನ ತಂಡ ರಶೀದ್ ಖಾನ್ ಬ್ಯಾಟಿಂಗ್ ಸಾಹಸದಿಂದ(ಔಟಾಗದೆ 48 ರನ್, 23 ಎಸೆತ, 3 ಬೌಂಡರಿ, 4 ಸಿಕ್ಸರ್) 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ವೀರೋಚಿತ ಸೋಲುಂಡಿತು.
ಅಫ್ಘಾನ್ ಪರ ಗುಲ್ಬದಿನ್ ನೈಬ್(39 ರನ್, 23 ಎಸೆತ), ರಹಮನುಲ್ಲಾ ಗುರ್ಬಾಝ್(30 ರನ್, 17 ಎಸೆತ), ಇಬ್ರಾಹೀಂ ಝದ್ರಾನ್(26 ರನ್, 33 ಎಸೆತ) ಹಾಗೂ ದಾರ್ವಿಶ್ ರಸೂಲಿ(15 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಆದರೆ ತಂಡದ ಗೆಲುವಿಗೆ ಸಾಕಾಗಲಿಲ್ಲ. ಆಸ್ಟ್ರೇಲಿಯದ ಪರ ಆ್ಯಡಮ್ ಝಾಂಪ(2-22) ಹಾಗೂ ಜೋಶ್ ಹೇಝಲ್‌ವುಡ್(2-33)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(ಔಟಾಗದೆ 54 ರನ್, 32 ಎಸೆತ, 6 ಬೌಂ., 2 ಸಿ.)ಅರ್ಧಶತಕ ಹಾಗೂ ಮಿಚೆಲ್ ಮಾರ್ಷ್ 45 ರನ್(30 ಎಸೆತ)ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.