ಉತ್ತರ ಪ್ರದೇಶ: ಕುರ್‌ಆನ್‌ ದಹನವನ್ನು ವಿರೋಧಿಸಿ ಪ್ರತಿಭಟನೆ

ಕುರ್‌ಆನ್‌ ಪ್ರತಿಗಳನ್ನು ಸುಟ್ಟ ಆರೋಪಿಯ ಬಂಧನ

Update: 2022-11-04 16:45 GMT

ಲಕ್ನೋ,ನ.4: ಉತ್ತರ ಪ್ರದೇಶದ ಶಾಹಜಹಾನ್‌ಪುರದ ಮಸೀದಿಯೊಂದರಲ್ಲಿ ಕುರ್‌ಆನ್‌ನ ನಾಲ್ಕು ಪ್ರತಿಗಳನ್ನು ಸುಟ್ಟು ಹಾಕಿದ್ದನ್ನು ವಿರೋಧಿಸಿ ಬುಧವಾರ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಪೊಲೀಸರು ಬಣ್ಣಿಸಿದ್ದಾರೆ.

 ಬಂಧಿತ ವ್ಯಕ್ತಿಯು ಸಿಸಿಟಿವಿ ತುಣುಕಿನಲ್ಲಿ ಕಂಡು ಬಂದಿರುವ ವ್ಯಕ್ತಿಯನ್ನು ಹೋಲುತ್ತಿದ್ದಾನೆ ಎಂದು ಶಾಹಜಹಾನ್‌ಪುರದ ಪೇಶ್ ಇಮಾಮ್ ಹುಝೂರ್ ಅಹಮದ್ ಮಂಝರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.ನೂರಾರು ಜನರು ಮಸೀದಿಯ ಸುತ್ತ ಜಮಾಯಿಸಿ ಪ್ರತಿಭಟನೆಗಳನ್ನು ನಡೆಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ಪ್ರದೇಶದಲ್ಲಿ ಕಲ್ಲುತೂರಾಟವೂ ನಡೆದಿರುವ ಬಗ್ಗೆ  ವರದಿಯಾಗಿದೆ.ಕೆಲವು ಪ್ರದೇಶಗಳಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆನ್ನಲಾಗಿದೆ.ಶಾಂತಿಯನ್ನು ಕಾಯ್ದುಕೊಳ್ಳುವಂತೆ ಪೊಲೀಸರು ಮತ್ತು ಧರ್ಮಗುರುಗಳು ಗುಂಪನ್ನು ಕೋರಿಕೊಂಡ ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವರದಿಯಾಗಿದೆ.

ನಗರದ ವಿವಿಧ ಸ್ಥಳಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಕುರ್‌ಆನ್ ಸುಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಎಸ್.ಆನಂದ ತಿಳಿಸಿದರು.ನಗರದಲ್ಲಿ ಗಲಾಟೆಯನ್ನು ನಡೆಸಿದ್ದ ದುಷ್ಕರ್ಮಿಗಳ ವೀಡಿಯೊಗಳು ಪೊಲೀಸರ ಬಳಿಯಲ್ಲಿವೆ. ಅವರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.ಹಲವಾರು ಸಿಸಿಟಿವಿ ವೀಡಿಯೊಗಳನ್ನು ಪರಿಶೀಲಿಸಿದ ಬಳಿಕ ಆರೋಪಿಯು ಹಡಾಫ್ ಪ್ರದೇಶದ ಅಂಗಡಿಯೊಂದರಲ್ಲಿ ನೀರು ಖರೀದಿ ಮಾಡುತ್ತಿದ್ದುದು ಪತ್ತೆಯಾಗಿತ್ತು ಎಂದು ಐಜಿಪಿ ರಮಿತ್ ಶರ್ಮಾ ತಿಳಿಸಿದರು.

Similar News