ಕೇರಳದ 32 ಸಾವಿರ ಮಹಿಳೆಯರು ಐಸಿಸ್ ಗೆ ಸೇರಿದ್ದಾರೆಂದ ಸಿನಿಮಾ ಟೀಸರ್ ವಿಡಿಯೋ ವೈರಲ್: ನೆಟ್ಟಿಗರಿಂದ ತರಾಟೆ !

Update: 2022-11-05 02:34 GMT

ಹೊಸದಿಲ್ಲಿ: ವಿಪುಲ್ ಅಮೃತ್‌ಲಾಲ್ ಶಾ ಅವರ 'ದಿ ಕೇರಳ ಸ್ಟೋರಿ'ಯ (The Kerala Story) ಟೀಸರ್ ಬಿಡುಗಡೆಯಾಗಿದ್ದು, ವಿವಾದ ಸೃಷ್ಟಿಸಿದೆ. ಕೇರಳದ ಮಹಿಳೆಯರನ್ನು ಹೇಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಮತ್ತು ಐಸಿಸ್‌ಗೆ ಸೇರಿಸಲಾಗುತ್ತಿದೆ ಎಂಬ ಕತೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. 

ಬಿಡುಗಡೆಗೊಂಡಿರುವ ಟೀಸರ್‌ನಲ್ಲಿ, ಹಿಜಾಬ್ ಧರಿಸಿದ ಯುವತಿಯೊಬ್ಬಳು, ತನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್, ತಾನು ಪ್ರೀತಿಸಿ ಮದುವೆಯಾದ ಮೇಲೆ ತನ್ನನ್ನು ಮತಾಂತರಿಸಿ, ಐಸಿಸ್ ಗೆ ಬಲವಂತವಾಗಿ ಸೇರುವಂತೆ ಮಾಡಲಾಗಿದೆ, ತನ್ನಂತೆ ಇತರೆ 32,000 ಮಹಿಳೆಯರನ್ನು ಬಲವಂತಪಡಿಸಲಾಗಿದೆ ಎಂದು ಹೇಳುತ್ತಿರುವುದು ಕಂಡುಬಂದಿದೆ.

ಈ ವಿಡಿಯೋವನ್ನು ಹಲವು ಬಲಪಂಥೀಯರು ನೈಜ ವಿಡಿಯೋವೆಂದು ಭಾವಿಸಿ ವೈರಲ್ ಮಾಡುತ್ತಿದ್ದಾರೆ. ಅದೇ ವೇಳೆ, 32000 ಮಹಿಳೆಯರು ನಾಪತ್ತೆಯಾಗಿ ಐಸಿಸ್ ಸೇರಿದ್ದರೆ ಸರ್ಕಾರ ಹಾಗೂ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳುತ್ತಿದ್ದಾರೆ. 

ಲೇಖಕ, ಇಸ್ಲಾಂ ಧರ್ಮದ ದ್ವೇಷಿ ತಾರಿಕ್ ಫತೇಹ್ ಕೂಡಾ ಈ ಟೀಸರನ್ನು ಹಂಚಿಕೊಂಡಿದ್ದು, ಸತ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಕೆಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದರೆ, ಸುಳ್ಳು ಮಾಹಿತಿ ಹಂಚಿ ಸಮಾಜ ಒಡೆಯುವಂತಹ ಚಿತ್ರಗಳನ್ನು ಯಾಕೆ ಮಾಡುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. 

ಪತ್ರಕರ್ತೆ ವಿಜೇತ ಸಿಂಗ್ ಪ್ರತಿಕ್ರಿಯಿಸಿ, "ಇದು ಚಲನಚಿತ್ರದ ಕ್ಲಿಪ್ ಆಗಿದೆ. ತೀರಾ ಸಣ್ಣ ಸಂಖ್ಯೆಯಲ್ಲಿ ಮಾತ್ರ ಭಾರತೀಯರು ಐಎಸ್‌ಗೆ ಸೇರಿದ್ದಾರೆ ಎಂದು ಹಲವಾರು ವೇದಿಕೆಗಳಲ್ಲಿ ಭಾರತವು ಹೇಳಿದೆ. "ಕಳೆದ ಕೆಲವು ವರ್ಷಗಳಲ್ಲಿ 18 ಕೋಟಿ ಭಾರತೀಯ ಮುಸ್ಲಿಮರಲ್ಲಿ ಕೇವಲ 108 ಮಂದಿ ಮಾತ್ರ IS ಗೆ ಸೇರಿದ್ದಾರೆ," ಎಂದು 2018 ರಲ್ಲಿ ಮಾಜಿ ಇಂಟೆಲಿಜೆನ್ಸ್‌ ಬ್ಯೂರೋ ಮುಖ್ಯಸ್ಥರು ಹೇಳಿದ್ದಾರೆ. ಹಾಗಿದ್ದರೆ, 32,000 ಎಂಬ ಸಂಖ್ಯೆಗೆ ಹೇಗೆ ಅವರು ಬಂದರು ಎಂಬುದನ್ನು ಚಲನಚಿತ್ರ ತಯಾರಕರು ಹೇಳಬೇಕು" ಎಂದಿದ್ದಾರೆ.

Katysha ಎಂಬವರು ಪ್ರತಿಕ್ರಿಯಿಸಿ, ಕೇರಳದಲ್ಲಿ ಎಲ್ಲಾ ವಯೋಮಾನದ ಒಟ್ಟು ಮಹಿಳೆಯರು 1.73 ಕೋಟಿ ಇದ್ದಾರೆ. ಅವರಲ್ಲಿ 32,000 ಯುವತಿಯರು ಕಾಣೆಯಾದರೆ ಅದು ಗಮನಕ್ಕೆ ಬರದೆ ಇದ್ದದ್ದು ಹೇಗೆ? ಈ (ಟ್ವಿಟರ್) ಖಾತೆ ಸುಳ್ಳು ಮತ್ತು ಕೋಮು ಸೌಹಾರ್ದ ಕೆಡಿಸುವ ವಿಷಯ ಪೋಸ್ಟ್ ಮಾಡುತ್ತಿದೆ ಎಂದಿದ್ದಾರೆ.

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡುತ್ತಿರುವ ಮಹಿಳೆಯ ನಟನೆ ಬಗ್ಗೆಯೂ ಹಲವು ರೀತಿಯ ಅಭಿಪ್ರಾಯಗಳು ಕೇಳಿ ಬಂದಿವೆ. ಆಕೆ ಮಾತನಾಡುತ್ತಿರುವುದಕ್ಕೂ, ಆಕೆಯ ಮುಖಭಾವಕ್ಕೂ, ತುಟಿಯ ಚಲನೆಗೂ ತಾಳೆಯಾಗುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.

Similar News