ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೆಂಗಾವಲು ವಾಹನಕ್ಕೆ ಕಲ್ಲು ತೂರಾಟ

Update: 2022-11-05 01:52 GMT

ನಂದಿಗ್ರಾಮ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಚಂದ್ರಬಾಬು ನಾಯ್ಡು (Telugu Desam Party (TDP) national president N. Chandrababu Naidu) ಅವರ ಬೆಂಗಾವಲು ವಾಹನದ ಮೇಲೆ ಎನ್‍ಟಿಆರ್ ಜಿಲ್ಲೆಯ ನಂದಿಗ್ರಾಮದಲ್ಲಿ ಕಲ್ಲು ತೂರಾಟ ನಡೆದ ಘಟನೆ ಶುಕ್ರವಾರ ಸಂಭವಿಸಿದೆ.

ನಾಯ್ಡು ಅವರ ಮುಖ್ಯ ಭದ್ರತಾ ಅಧಿಕಾರಿ (ಸಿಎಸ್‍ಓ) ಮಧುಬಾಬು ಅವರ ಕೆನ್ನೆಗೆ ಘಟನೆಯಲ್ಲಿ ಗಾಯಳಾಗಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ನಾಯ್ಡು ಅವರಿಗೆ ನೀಡಲಾದ ಎನ್‍ಎಸ್‍ಜಿ ಕಮಾಂಡೊಗಳು ಕಟ್ಟೆಚ್ಚರ ವಹಿಸಿದ್ದಾರೆ.

ಕಲ್ಲು ತೂರಾಟ ನಡೆಸುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ಚಂದ್ರಬಾಬು ನಾಯ್ಡು ಅವರ ರೋಡ್‍ಶೋನ್ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು ಹಾಗೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಚಂದ್ರಬಾಬು ನಾಯ್ಡು ಅವರ ವಾಹನದ ಸುತ್ತ ರೋಪ್ ಪಾರ್ಟಿಗಳನ್ನು ಕೂಡಾ ನಿಯೋಜಿಸಲಾಗಿತ್ತು.

ಟಿಡಿಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ನಾಯ್ಡು ಅವರ ಬೆಂಗಾವಲು ವಾಹನ ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಪುಷ್ಪ ವೃಷ್ಟಿ ಮಾಡಿದ್ದರು. ರ‍್ಯಾಲಿ ಹಾಗೂ ರೋಡ್‍ಶೋ ಶಾಂತಿಯುತವಾಗಿ ಮುಕ್ತಾಯವಾಗಿತ್ತು ಎಂದು ವಿಜಯವಾಡ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ಹೇಳಿದ್ದಾರೆ.

ಬೆಂಗಾವಲು ವಾಹನದತ್ತ ಕಲ್ಲು ಅಥವಾ ಇತರ ವಸ್ತು ಎಸೆಯಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಷ್ಟಾಚಾರಕ್ಕೆ ಅನುಗುಣವಾಗಿ ನಾಯ್ಡು ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಅವರು ವಿವರಿಸಿದರು. ಈ ಬಗ್ಗೆ thehindu.com ವರದಿ ಮಾಡಿದೆ.

Similar News