ಬಂಗಾಳ, ಜಾರ್ಖಂಡ್‍ನ ಹಲವೆಡೆ ಇ.ಡಿ. ಅಧಿಕಾರಿಗಳ ದಾಳಿ

Update: 2022-11-05 02:40 GMT

ಕೊಲ್ಕತ್ತಾ: ಜಾರ್ಖಂಡ್‍ನಲ್ಲಿ ರಕ್ಷಣಾ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಮಾರಾಟ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಕಾನೂನು ಜಾರಿ ನಿರ್ದೇಶನಾಲಯ (The Enforcement Directorate - ED) ಶುಕ್ರವಾರ ಬಂಗಾಳ ಹಾಗೂ ಜಾರ್ಖಂಡ್‍ನ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ರಾಂಚಿಯ ಬರಿಯಾಟು ಎಂಬಲ್ಲಿ ಭಾರತೀಯ ಸೇನೆಗೆ ಸೇರಿದ 4.45 ಎಕರೆ ಪ್ರದೇಶವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಾರಾಟ ಮಾಡಲಾಗಿದೆ ಎನ್ನಲಾದ ಈ ಪ್ರಕರಣದಲ್ಲಿ ರಾಂಚಿ ಹಾಗೂ ಕೊಲ್ಕತ್ತಾದ ಕೆಲ ಉದ್ಯಮಿಗಳು ಹಾಗೂ ಜಾರ್ಖಂಡ್ ಸರ್ಕಾರದ ಕೆಲ ಅಧಿಕಾರಿಗಳು ಷಾಮೀಲಾಗಿದ್ದಾರೆ ಎಂದು ಇಲಾಖಾ ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ರಾಂಚಿ ಮಹಾನಗರ ಪಾಲಿಕೆ ಪೊಲೀಸರಿಗೆ ದೂರು ನೀಡಿತ್ತು.

ಕಳೆದ ತಿಂಗಳು ಇ.ಡಿ. ಈ ಪ್ರಕರಣದ ವಿಚಾರಣೆ ಆರಂಭಿಸಿತ್ತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಂಗಾಳದ ಕೊಲ್ಕತ್ತಾ ಹಾಗೂ ಬಿಧಾನ್‍ನಗರ ಪ್ರದೇಶದಲ್ಲಿ ದಾಳಿ ನಡೆದಿದೆ. ಒಂದು ತಂಡ ಉದ್ಯಮಿ ಅಮಿತ್ ಅಗರ್‍ವಾಲ್ ಅವರ ಮನೆಯ ಮೇಲೆ ದಾಳಿ ನಡೆಸಿದರೆ ಇನ್ನೊಂದು ತಂಡ ಅವರ ಸಹೋದರ ಅಮರ್ ಅಗರ್‍ವಾಲ್ ಅವರ ಮನೆಯಲ್ಲಿ ಶೋಧ ನಡೆಸಿದೆ.

ಅಮಿತ್ ಅಗರ್‍ವಾಲ್ ಪ್ರಸ್ತುತ ರಾಂಚಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹಣ ಅವ್ಯವಹಾರ ಪ್ರಕರಣದಲ್ಲಿ ಇ.ಡಿ. ಆತನನ್ನು ಬಂಧಿಸಿತ್ತು. ರಾಂಚಿಯಲ್ಲಿ ಎಂಟು ಕಡೆಗಳಲ್ಲಿ ಕೂಡಾ ದಾಳಿ ನಡೆದಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Similar News